ADVERTISEMENT

ಬಂದ್ ಕರೆಗೆ ವ್ಯಾಪಕ ಬೆಂಬಲ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ಚಿಕ್ಕಮಗಳೂರು:  ಅಡಿಕೆಗೆ ಹಳದಿ ಎಲೆರೋಗ ಬಂದಿರುವುದರಿಂದ ತೊಂದರೆಗೆ ಒಳಗಾಗಿರುವ ಬೆಳೆಗಾರರಿಗೆ ಪರಿಹಾರ ನೀಡಬೇಕು ಎಂದು ಶಿಫಾರಸು ಮಾಡಿರುವ ಗೋರಕ್ ಸಿಂಗ್ ವರದಿ ಜಾರಿಗೆ ಆಗ್ರಹಿಸಿ ಶುಕ್ರವಾರ ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪ, ನರಸಿಂಹರಾಜ ಪುರ, ಶೃಂಗೇರಿ ತಾಲ್ಲೂಕಿನ ವಿವಿಧೆಡೆ ರೈತರು ಬಂದ್ ನಡೆಸಿ ಪ್ರತಿಭಟಿಸಿದರು.

ಕೊಪ್ಪ ಪಟ್ಟಣದಲ್ಲಿ ಬಸ್ ಹಾಗೂ ಆಟೊ ಸಂಚಾರ ಸ್ಥಗಿತಗೊಂಡಿತ್ತು. ಮುಂಜಾನೆಯಿಂದಲೇ ಎಲ್ಲಾ ವ್ಯಾಪಾರ ಮಳಿಗೆ, ವಾಣಿಜ್ಯ ಸಂಕೀರ್ಣ ಮುಚ್ಚಿದ್ದವು. ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಹಾಜರಾತಿ ಇಲ್ಲದೆ ರಜಾ ದಿನದಂತಿತ್ತು. ಬ್ಯಾಂಕ್, ವಿಮೆ, ಅಂಚೆ ಕಚೇರಿಗಳು ಬೀಕೊ ಎನ್ನುತ್ತಿದ್ದವು.

ಜಯಪುರ, ಹರಿಹರಪುರ, ಕಮ್ಮರಡಿ, ನಾರ್ವೆ, ನಿಲುವಾಗಿಲು, ಶಾನುವಳ್ಳಿ, ಕುದುರೆಗುಂಡಿ, ಬಸರಿಕಟ್ಟೆ ಪಟ್ಟಣದಲ್ಲಿ ಶಾಂತಿಯುತ ಬಂದ್ ನಡೆಯಿತು. ರಸ್ತೆಗಳಲ್ಲಿ ರೈತ ಸಂಘದ ಕಾರ್ಯಕರ್ತರ ಓಡಾಟ ಹೊರತುಪಡಿಸಿ ವಾಹನ ಸಂಚಾರ ಪೂರ್ಣ ಸ್ಥಗಿತಗೊಂಡಿತ್ತು.

ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ಬೆಳಿಗ್ಗೆ 10 ಗಂಟೆ ವೇಳೆಗೆ ವಿವಿಧ ಗ್ರಾಮಗಳಿಂದ ಹಸಿರು ಶಾಲು ಹೊದ್ದ ರೈತರು ಪಟ್ಟಣಕ್ಕೆ ಆಗಮಿಸಿ ರಸ್ತೆ ತಡೆ ನಡೆಸಿದರು. ಇದರಿಂದಾಗಿ ಖಾಸಗಿ ವಾಹನಗಳನ್ನು ಹೊರತುಪಡಿಸಿ ಯಾವುದೇ ಬಸ್‌ಗಳೂ ರಸ್ತೆಗೆ ಇಳಿಯಲಿಲ್ಲ. ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ನಂತರ ಶೃಂಗೇರಿ ವೃತ್ತದಲ್ಲಿ ಸಭೆ ಸೇರಿದರು.

ನರಸಿಂಹರಾಜ ಪುರ ತಾಲ್ಲೂಕಿನ ಬಿ.ಎಚ್.ಕೈಮರ ಹಾಗೂ ಸಿಂಸೆ ಗ್ರಾಮದಲ್ಲೂ ಅಂಗಡಿ ಮುಂಗಟ್ಟು ಮುಚ್ಚಿದ ವರ್ತಕರು ಬಂದ್‌ಗೆ ಬೆಂಬಲ ಸೂಚಿಸಿದರು.  ತಾಲ್ಲೂಕಿನ ಶೆಟ್ಟಿಕೊಪ್ಪ ಗ್ರಾಮದಲ್ಲಿಯೂ ಅಂಗಡಿ, ಶಾಲೆ ಬಂದ್ ಆಗಿದ್ದವು. ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.