ADVERTISEMENT

ಬಜೆಟ್‌ನಲ್ಲಿ ತೆರಿಗೆ ಹೆಚ್ಚಳವಿಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 20 ಜನವರಿ 2016, 19:42 IST
Last Updated 20 ಜನವರಿ 2016, 19:42 IST
ಬಜೆಟ್‌ನಲ್ಲಿ ತೆರಿಗೆ ಹೆಚ್ಚಳವಿಲ್ಲ: ಸಿದ್ದರಾಮಯ್ಯ
ಬಜೆಟ್‌ನಲ್ಲಿ ತೆರಿಗೆ ಹೆಚ್ಚಳವಿಲ್ಲ: ಸಿದ್ದರಾಮಯ್ಯ   

ಬೆಂಗಳೂರು: 2016–17ನೇ ಸಾಲಿನ ಬಜೆಟ್‌ನಲ್ಲಿ  ಹೆಚ್ಚುವರಿ ತೆರಿಗೆ ವಿಧಿಸುವ ಸಾಧ್ಯತೆ ಕಡಿಮೆ ಎಂದು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಇಲ್ಲಿ ತಿಳಿಸಿದರು.

‘ಪ್ರಸಕ್ತ ಸಾಲಿನಲ್ಲಿ ತೆರಿಗೆ ಸಂಗ್ರಹ ನಿರೀಕ್ಷೆ ಪ್ರಕಾರ ಆಗುತ್ತಿದೆ. 2015–16ನೇ ಸಾಲಿನಲ್ಲಿ ಶೇ 10.9ರಷ್ಟು ತೆರಿಗೆ ಗುರಿ ಹಾಕಿಕೊಳ್ಳಲಾಗಿತ್ತು. ಅದರಲ್ಲಿ ಶೇ 9ರಷ್ಟು ಸಂಗ್ರಹ ಆಗಿದೆ. ಬಾಕಿ ದಿನಗಳಲ್ಲಿ ಉಳಿದ ತೆರಿಗೆ ಸಂಗ್ರಹ ಆಗಲಿದೆ’ ಎಂದು ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.

ಮುಂದಿನ ಆರ್ಥಿಕ ವರ್ಷದಲ್ಲಿ ಯೋಜನಾ ಗಾತ್ರ ಕಡಿಮೆ ಮಾಡುವ ಉದ್ದೇಶ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೃಷಿ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಈ ಬಾರಿಯೂ ಹೆಚ್ಚಿನ ಆದ್ಯತೆ ಇರುತ್ತದೆ ಎಂದು ಹೇಳಿದರು.

ಬಿಜೆಪಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯದ ಹಣಕಾಸು ಪರಿಸ್ಥಿತಿ ಸರಿ ಇಲ್ಲ ಎನ್ನುತ್ತಾರಲ್ಲ ಎಂದು ಕೇಳಿದ ಪ್ರಶ್ನೆಗೆ ‘ಯಡಿಯೂರಪ್ಪ ಅವರು ಸಂಸತ್ತಿಗೆ ಹೋದ ನಂತರ ರಾಜ್ಯದ್ದು ತಿಳಿಯುತ್ತಿಲ್ಲ. ಅವರು ಶ್ವೇತಪತ್ರ ಹೊರಡಿಸಿ ಎಂದು ಕೇಳುವುದು ಬಿಟ್ಟು ಬೇರೆ ಏನೂ ಮಾಡುತ್ತಿಲ್ಲ’ ಎಂದು ತಿರುಗೇಟು ನೀಡಿದರು.

ವಿಲಾಸಿ ತೆರಿಗೆಯಿಂದ ಐಸಿಯು ಹೊರಗೆ: ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳನ್ನು (ಐಸಿಯು) ವಿಲಾಸಿ ತೆರಿಗೆ ವ್ಯಾಪ್ತಿಯಿಂದ ಕೈಬಿಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಇಲ್ಲಿ ಸ್ಪಷ್ಟಪಡಿಸಿದರು.

ವೆಂಟಿಲೇಟರ್‌ ಮೇಲೂ ತೆರಿಗೆ ಇರುವುದಿಲ್ಲ ಎಂದು ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು. ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಜನರೂ ಚಿಕಿತ್ಸೆ ಪಡೆಯುತ್ತಾರೆ. ಹೀಗಾಗಿ ಐಸಿಯು ಘಟಕವನ್ನು ವಿಲಾಸಿ ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದರು.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ತೆರಿಗೆ ಹೆಚ್ಚಿಸುವ ಸಾಧ್ಯತೆ ಕಡಿಮೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ತಪ್ಪು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌  ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.