ಬೆಂಗಳೂರು (ಪಿಟಿಐ): ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ರಾಜ್ಯ ಬಿಜೆಪಿ ಬಿಕ್ಕಟ್ಟು ಶಮನವಾಗುವ ಯಾವುದೇ ಲಕ್ಷಣಗಳು ಮಂಗಳವಾರವೂ ಗೋಚರಿಸಲಿಲ್ಲ. ಬದಲಿಗೆ ಯಡಿಯೂರಪ್ಪ ಬಣವು ಬಜೆಟ್ ಅಧಿವೇಶದ ಮೊದಲ ದಿನವಾದ ಮಂಗಳವಾರ ಬಹಿಷ್ಕರಿಸುವ ನಿರ್ಧಾರ ತಳೆದಿದ್ದು, ಬಿಕ್ಕಟ್ಟು ಇನ್ನಷ್ಟು ಉಲ್ಬಣಿಸಿದೆ.
ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಅವರು ಯಡಿಯೂರಪ್ಪ ಅವರಿಗೆ ಬಜೆಟ್ ಅಧಿವೇಶವನ್ನು ಬಹಿಷ್ಕರಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಕೇಳಿಕೊಂಡರೂ ಯಡಿಯೂರಪ್ಪ ಅವರು ಇದಕ್ಕೆ ಒಪ್ಪಿಲ್ಲ ಎನ್ನಲಾಗಿದೆ.
ಯಡಿಯೂರಪ್ಪ ಬಣದ ಹಲವು ಶಾಸಕರು ಖಾಸಗಿ ರೆಸಾರ್ಟ್‌ನಲ್ಲಿ ಭಾನುವಾರದಿಂದ ತಂಗಿದ್ದು, ಹೈಕಮಾಂಡ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸುವ ತನಕ ರೆಸಾರ್ಟ್‌ನಲ್ಲೆ ಉಳಿಯುವುದಾಗಿ ತಿಳಿಸಿದ್ದಾರೆ.
ಈ ಮಧ್ಯೆ ಯಡಿಯೂರಪ್ಪ ಅವರ ಬಣದ ಪ್ರತಿನಿಧಿಗಳಾಗಿ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ, ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ, ಶಾಸಕರಾದ ಲಕ್ಷ್ಮಿನಾರಾಯಣ ಮತ್ತು ಚಂದ್ರಕಾಂತ ಬೆಲ್ಲದ ಅವರು ಮಾತ್ರ ಭಾಗವಹಿಸಿದ್ದಾರೆ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಏನಿದ್ದರೂ ಮುಂಗಡಪತ್ರ ಮಂಡನೆಗೆ ಮುಖ್ಯಮಂತ್ರಿ ಸದಾನಂದಗೌಡರಿಗೆ ಅವಕಾಶ ನೀಡುವಂತೆ ವರಿಷ್ಟರು ಯಡಿಯೂರಪ್ಪ ಅವರ ಮನವೊಲಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.