ADVERTISEMENT

ಬಜೆಟ್ ಲಾಭ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST

ವಿತ್ತೀಯ ಕೊರತೆ
ಮುಂದಿನ ಹಣಕಾಸು ವರ್ಷದ (2011-12) ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 4.6ಕ್ಕೆ ನಿಗದಿಪಡಿಸಲಾಗಿದ್ದು, ಅದು 4,12,817 ಕೋಟಿ ರೂಪಾಯಿಯಾಗಲಿದೆ. ಒಟ್ಟು ತೆರಿಗೆ ಸಂಗ್ರಹ ಪ್ರಮಾಣ 9,32,440 ಕೋಟಿ ರೂಪಾಯಿ ಆಗಿರಲಿದ್ದು, ಇದು 2010-11ರ ಬಜೆಟ್ ಅಂದಾಜಿಗಿಂತ ಶೇ 24.9ರಷ್ಟು ಅಧಿಕ.

ತೆರಿಗೆಯೇತರ ನಿವ್ವಳ ವರಮಾನ
1,25,435 ಕೋಟಿ ರೂಪಾಯಿಗಳ ನಿವ್ವಳ ತೆರಿಗೆಯೇತರ ವರಮಾನವನ್ನು ನಿರೀಕ್ಷಿಸಲಾಗಿದೆ. ಒಟ್ಟು ವೆಚ್ಚವನ್ನು 12,57,729 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಯೋಜನಾ ವೆಚ್ಚ 4,41,547 ಕೋಟಿ ಇದ್ದರೆ, ಯೋಜನೇತರ ವೆಚ್ಚ 8,16,182 ಕೋಟಿ ರೂಪಾಯಿಗಳು. ಕಳೆದ ವರ್ಷಕ್ಕೆ ಹೋಲಿಸಿದರೆ ಯೋಜನಾ ವೆಚ್ಚ ಶೇ 18ರಷ್ಟು ಮತ್ತು ಯೋಜನೇತರ ವೆಚ್ಚ ಶೇ 10.5ರಷ್ಟು ಅಧಿಕವಾಗಿದೆ.

ಸಾಮಾಜಿಕ ಕ್ಷೇತ್ರಕ್ಕೆ ಆದ್ಯತೆ
ಸಾಮಾಜಿಕ ಕ್ಷೇತ್ರಕ್ಕೆ ವಿನಿಯೋಗಿಸುವ ಅನುದಾನ ಪ್ರಮಾಣವನ್ನು ಶೇ 17ರಷ್ಟು ಅಂದರೆ 1,60,887 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ‘ಭಾರತ್ ನಿರ್ಮಾಣ’ ಕಾರ್ಯಕ್ರಮಕ್ಕೆ 10 ಸಾವಿರ ಕೋಟಿ ರೂಪಾಯಿ ತೆಗೆದಿರಿಸಲಾಗಿದೆ ಮೂಲಸೌಲಭ್ಯ ಕ್ಷೇತ್ರಕ್ಕೆ ಶೇ 23ರಷ್ಟು ಅಧಿಕ ಅಂದರೆ 2,14,000 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಭಾರಿ ಷೇರು ವಿಕ್ರಯ
ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಷೇರು ವಿಕ್ರಯ ಮೂಲಕ ಮುಂದಿನ ಮೂರು ವರ್ಷಗಳಲ್ಲಿ 95 ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನೂ ಸಚಿವರು ಹೊಂದಿದ್ದಾರೆ. 2011-12ನೇ ಅವಧಿಯಲ್ಲಿ 40 ಸಾವಿರ ಕೋಟಿ ರೂಪಾಯಿ ಸಂಗ್ರಹ ಅವರ ಗುರಿಯಾಗಿದೆ. ಮುಕ್ತ ಮಾರುಕಟ್ಟೆ ಮೂಲಕ 3.43 ಲಕ್ಷ ಕೋಟಿ ಸಾಲ ಪಡೆಯುವ ಅಂದಾಜು ಮಾಡಲಾಗಿದ್ದು, ಯೂರಿಯಾಕ್ಕೆ ಸಬ್ಸಿಡಿ ವಿಸ್ತರಿಸುವ ವಿಚಾರ ಪರಿಶೀಲನೆಯಲ್ಲಿದೆ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.