ಬೆಂಗಳೂರು: ನೇಕಾರರ ಸಾಲ ಮತ್ತು ಬಡ್ಡಿ ಮನ್ನಾ ಯೋಜನೆಯ ಪ್ರಯೋಜನವನ್ನು ಅನರ್ಹರೂ ಪಡೆದುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ಸಹಕಾರ ಸಚಿವ ಬಿ.ಜೆ.ಪುಟ್ಟಸ್ವಾಮಿ ಸೋಮವಾರ ಇಲ್ಲಿ ತಿಳಿಸಿದರು.
ನೇಕಾರರಲ್ಲದ ಹಾಗೂ ಸಾಲವನ್ನೇ ಪಡೆಯದವರು ಸರ್ಕಾರದ ಸಾಲ ಮನ್ನಾ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಈ ಅಕ್ರಮದಿಂದ 25ರಿಂದ 30 ಲಕ್ಷ ರೂಪಾಯಿ ದುರುಪಯೋಗ ಆಗಿರುವ ಶಂಕೆ ಇದೆ. ಜಿಲ್ಲಾ ಮಟ್ಟದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಲಾಗುವುದು ಎಂದು ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.
ಈ ಅಕ್ರಮದಲ್ಲಿ ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳೂ ಭಾಗಿಯಾಗಿದ್ದಾರೆ. ಯಾವ ರೀತಿಯ ಅಕ್ರಮ ನಡೆದಿದೆ ಎಂಬುದು ಇನ್ನೂ ಖಚಿತವಾಗಿ ಗೊತ್ತಾಗಿಲ್ಲ. ವಿಚಾರಣೆಗೆ ಆದೇಶಿಸಲಾಗಿದೆ.
ಕೆಎಂಎಫ್ ಮೇಲೆ ನಿಗಾ: ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್) ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ ಅವರು ಆಂಧ್ರಪ್ರದೇಶ ಪೊಲೀಸರ ವಶದಲ್ಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಸಂಸ್ಥೆಯ ಕಾರ್ಯನಿರ್ವಹಣೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು.
ಕೆಎಂಎಫ್ ನಷ್ಟದಲ್ಲಿದೆ ಎಂಬ ವದಂತಿಯಲ್ಲಿ ಹುರುಳಿಲ್ಲ. ಜೂನ್ ತಿಂಗಳೊಂದರಲ್ಲೇ ಎಂಟು ಕೋಟಿ ರೂಪಾಯಿ ಲಾಭ ಮಾಡಿದೆ. ಈ ಕುರಿತು ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಅದಕ್ಕೆ ಯಾರೂ ಕಿವಿಗೊಡಬಾರದು ಎಂದು ಅವರು ಹೇಳಿದರು.
`ಸದಾನಂದಗೌಡರ ವಿರುದ್ಧ ಗೂಢಚರ್ಯೆ ಮಾಡಿಲ್ಲ~
ಬೆಂಗಳೂರು: `ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಆಸ್ತಿ ದಾಖಲೆಗಳನ್ನು ಸಂಗ್ರಹಿಸಲು ನಾನಾಗಲಿ ಅಥವಾ ನನ್ನ ಕಡೆಯವರಾಗಲಿ ಅವರ ಊರಿಗೆ ಹೋಗಿಲ್ಲ~ ಎಂದು ಸಹಕಾರ ಸಚಿವ ಬಿ.ಜೆ.ಪುಟ್ಟಸ್ವಾಮಿ ಸೋಮವಾರ ಇಲ್ಲಿ ಸ್ಪಷ್ಟಪಡಿಸಿದರು.
`ಸದಾನಂದ ಗೌಡರು ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಬಗ್ಗೆ ಗೌರವ ಇದೆ. ಆದರೆ, ಅವರೇ ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ~ ಎಂದು ಸುದ್ದಿಗಾರರಿಗೆ ತಿಳಿಸಿದರು.
`ಗೌಡರ ಊರು ಎಲ್ಲಿದೆ ಎಂಬುದೇ ಗೊತ್ತಿಲ್ಲ. ಅವರ ಆರೋಪಕ್ಕೆ ಪೂರಕವಾಗಿ ಪುರಾವೆಗಳು ಇದ್ದರೆ ಬಹಿರಂಗಪಡಿಸಬಹುದು. ನಾನಾಗಲಿ, ನನ್ನ ಕಡೆಯವರಾಗಲಿ ಅವರ ಆಸ್ತಿ ವಿವರ ಸಂಗ್ರಹಿಸಲು ಯತ್ನಿಸಿರುವುದನ್ನು ಸಾಬೀತುಪಡಿಸಿದರೆ ಅವರು ಹೇಳಿದಂತೆ ನಡೆದುಕೊಳ್ಳುತ್ತೇನೆ~ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.