
ಬೆಂಗಳೂರು: ಬಡ್ತಿ ಮೀಸಲಾತಿ ಕಾಯ್ದೆ ರದ್ದತಿಯಿಂದ ಹಿಂಬಡ್ತಿಗೆ ಒಳಗಾಗಿರುವ ನೂರಾರು ಅಧಿಕಾರಿಗಳು ಹಾಗೂ ನೌಕರರು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸಿದರು.
ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸ ಕಾವೇರಿಗೆ ಭೇಟಿ ನೀಡಿದ್ದ ನೌಕರರು, ಬಡ್ತಿ ಮೀಸಲಾತಿ ರದ್ದಾಗಿದ್ದರಿಂದಾಗಿ ಹಿಂಬಡ್ತಿಯಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಪರಿಷ್ಕೃತ ಬಡ್ತಿ ಮೀಸಲಾತಿ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಅದನ್ನು ಅನುಷ್ಠಾನ ಮಾಡುವ ಮೂಲಕ ನ್ಯಾಯ ಕೊಡಿಸುವ ಅವಕಾಶ ಇದೆ. ಸರ್ಕಾರದಲ್ಲಿ ಸಚಿವರಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಮುದಾಯದವರು ಒತ್ತಡ ಹಾಕಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಸಮನ್ವಯ ಸಮಿತಿ ಅಧ್ಯಕ್ಷ ರಾಗಿರುವ ನೀವು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ನ್ಯಾಯ ಕೊಡಿಸಬೇಕು ಎಂದೂ ನೌಕರರು ಒತ್ತಾಯಿಸಿದರು. ಸಮನ್ವಯ ಸಮಿತಿ ಸಭೆಯಲ್ಲಿ ಈ ವಿಷಯ ಚರ್ಚಿಸುವುದಾಗಿ ತಿಳಿಸಿದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಚರ್ಚಿಸುವುದಾಗಿಯೂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.