ADVERTISEMENT

ಬಡ್ತಿ ಮೀಸಲು: ಇಕ್ಕಟ್ಟಿನಲ್ಲಿ ಸರ್ಕಾರ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 19:30 IST
Last Updated 13 ಮಾರ್ಚ್ 2018, 19:30 IST

ಬೆಂಗಳೂರು: ರಾಜ್ಯ ಸರ್ಕಾರದ ‘ಬಡ್ತಿ ಮೀಸಲು ಕಾಯ್ದೆ–2002’ ಅನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್ 2017ರ ಫೆ. 9ರಂದು ನೀಡಿರುವ ಆದೇಶ ಪಾಲಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.

1978ರ ಏ. 24ರಿಂದ ಅನ್ವಯವಾಗುವಂತೆ ಸರ್ಕಾರಿ ನೌಕರರ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಿ, ತತ್ಪರಿಣಾಮ ಕ್ರಮ (ಮುಂಬಡ್ತಿ) ತೆಗೆದುಕೊಳ್ಳುವಂತೆ ಕೋರ್ಟ್‌ ಆದೇಶಿಸಿತ್ತು. ಈ ತೀರ್ಪು ಮರುಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಿ ಎರಡು ಬಾರಿ ಕಾಲಾವಕಾಶ ಪಡೆದುಕೊಂಡಿದ್ದ ಸರ್ಕಾರ, ಇದೇ 15ರೊಳಗೆ ಆದೇಶ ಪಾಲಿಸಲೇ ಬೇಕಾದ ಅನಿವಾರ್ಯತೆಯಲ್ಲಿ ಸಿಕ್ಕಿಕೊಂಡಿದೆ.

ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಅನ್ವಯ ಸಾಮಾನ್ಯ ಬಡ್ತಿ ನೀಡುವ ಬದಲು, ಸೇವಾ ನಿಯಮಾವಳಿಯ ‘ನಿಯಮ 32’ರ ಅಡಿ ಬಡ್ತಿ ನೀಡಿ ಆದೇಶ ಪಾಲನೆಗೆ ಮುಂದಾಗಿರುವ ಬಗ್ಗೆ ‘ಸುಪ್ರೀಂ’ ಪ್ರಮಾಣ ಪತ್ರ ಸಲ್ಲಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ತೀರ್ಮಾನಿಸಿತ್ತು. ಆದರೆ, ಗೊಂದಲ ಮುಂದುವರಿದಿರುವುದರಿಂದ ಈ ಪ್ರಕ್ರಿಯೆಯನ್ನೂ ಮಂಗಳವಾರ ರದ್ದುಪಡಿಸಲಾಗಿದೆ.

ADVERTISEMENT

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರದಲ್ಲಿರುವುದರಿಂದ ಸುಪ್ರೀಂ ಕೋರ್ಟ್‌ ಆದೇಶ ಪಾಲನೆಯ ನಿಟ್ಟಿನಲ್ಲಿ ಏನು ಮಾಡಬೇಕೆಂಬ ಗೊಂದಲ ಮುಂದುವರಿದಿದೆ. ಹೀಗಾಗಿ, ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ಅಡ್ವೊಕೇಟ್‌ ಜನರಲ್‌ ಮಧುಸೂದನ್‌ ನಾಯಕ್‌ ಅವರಿಂದ ಡಿಪಿಎಆರ್‌ ಅಭಿಪ್ರಾಯ ಕೇಳಿದೆ. ಮುಖ್ಯಮಂತ್ರಿ ಜೊತೆ ಚರ್ಚಿಸಿದ ಬಳಿಕ ಅಂತಿಮವಾಗಿ ತೀರ್ಮಾನಕ್ಕೆ ಬರಲಾಗುವುದು ಎಂದು ಡಿಪಿಎಆರ್‌ ಮೂಲಗಳು ತಿಳಿಸಿವೆ.

ತೀರ್ಪು ಬಂದು 11 ತಿಂಗಳು ಕಳೆದರೂ ಆದೇಶ ಪಾಲಿಸಿದ ಸರ್ಕಾರದ ವಿರುದ್ಧ ಸಲ್ಲಿಕೆಯಾದ ನ್ಯಾಯಾಂಗ ನಿಂದನೆ ಅರ್ಜಿ ಇದೇ 16ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಅಂದು ವಿಚಾರಣೆಗೆ ನಮೂದಾದ ಪ್ರಕರಣಗಳ ಪಟ್ಟಿಯಲ್ಲಿ ಇಲ್ಲದಿರುವುದರಿಂದ 20ರಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ನಿಯಮ 32ರ ಅಡಿ ಬಡ್ತಿ ನೀಡುವಂತೆ ಎಲ್ಲ ಇಲಾಖೆಗಳಿಗೆ ಡಿಪಿಎಆರ್‌ ಕಳೆದ ವಾರ ಸುತ್ತೋಲೆ ಹೊರಡಿಸಿದೆ. ಅದಕ್ಕೆ ಪೂರಕವಾಗಿ ಸಚಿವಾಲಯದ ಕೆಲವು ಹುದ್ದೆಗಳಲ್ಲಿ ಬಡ್ತಿ ನೀಡಲು ಇಲಾಖಾ ಪದೋನ್ನತಿ ಸಮಿತಿ (ಡಿಪಿಸಿ) ಅರ್ಹರ ಪಟ್ಟಿ ಸಿದ್ಧಪಡಿಸಿದ್ದ ಕೆಲವು ಇಲಾಖೆಗಳು, ಡಿಪಿಸಿ ಸಭೆಗೆ ದಿನವನ್ನೂ ನಿಗದಿಪಡಿಸಿತ್ತು.

ಕಾಯ್ದೆ ರದ್ದುಪಡಿಸಿದ ಕಾರಣಕ್ಕೆ, 2017 ಮಾರ್ಚ್‌ 22ರಿಂದ ಸಾಮಾನ್ಯ ಬಡ್ತಿಯನ್ನು ಸರ್ಕಾರ ಸ್ಥಗಿತಗೊಳಿಸಿದೆ. ಆದರೆ, ಕೆಲವು ಇಲಾಖೆಗಳಲ್ಲಿ ನಿಯಮ 32ರ ಅಡಿ ಬಡ್ತಿ ನೀಡುವ ಪ್ರಕ್ರಿಯೆ ಮುಂದುವರಿದಿತ್ತು. ಅದಕ್ಕೆ ಆಕ್ಷೇಪ ಬಂದಾಗ ಆ ಪ್ರಕ್ರಿಯೆಯನ್ನೂ ಡಿಸೆಂಬರ್‌ನಿಂದ ಸ್ಥಗಿತಗೊಳಿಸಲಾಗಿತ್ತು.

ಯಥಾಸ್ಥಿತಿ ಅರ್ಜಿ ವರ್ಗಾವಣೆ: ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಿ ಬಡ್ತಿ ನೀಡುವ ವಿಷಯದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಬೇಕು ಎಂದು ಅರಣ್ಯ ಮತ್ತು ಲೋಕೋಪಯೋಗಿ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಹಿಂದೆ ಕೆಪಿಟಿಸಿಎಲ್‌ ಮತ್ತು ನಗರ ಯೋಜನಾ ಇಲಾಖೆಯ ಅಧಿಕಾರಿಗಳು ಪ್ರತ್ಯೇಕವಾಗಿ ಸಲ್ಲಿಸಿದ ಅರ್ಜಿಯಲ್ಲಿ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಮೂರ್ತಿ ಮದನ್‌ ಬಿ. ಲೋಕೂರ್‌ ನೇತೃತ್ವದ ಪೀಠ ಆದೇಶಿಸಿತ್ತು.

ಆದರೆ, ಅರಣ್ಯ ಮತ್ತು ಲೋಕೋಪಯೋಗಿ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿಗಳು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಅದೇ ಪೀಠ, ಬಿ.ಕೆ. ಪವಿತ್ರಾ ಮತ್ತಿತರರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಎ.ಕೆ. ಗೋಯಲ್‌ ಹಾಗೂ ಯು.ಯು. ಲಲಿತ್‌ ನೇತೃತ್ವದ ಪೀಠಕ್ಕೆ ವರ್ಗಾಯಿಸಿದೆ ಎಂದು ಮೂಲಗಳು ತಿಳಿಸಿವೆ.

ಡಿಪಿಸಿ ಸಭೆ ದಿಢೀರ್‌ ರದ್ದು

ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಆಧರಿಸಿ ಸಚಿವಾಲಯದಲ್ಲಿ ಉಪ ಕಾರ್ಯದರ್ಶಿ ಹುದ್ದೆಯಿಂದ ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ (ನಾಲ್ಕು ಸ್ಥಾನಗಳು) ಬಡ್ತಿ ನೀಡಲು ಮಂಗಳವಾರ ಇಲಾಖಾ ಪದೋನ್ನತಿ ಸಮಿತಿ (ಡಿಪಿಸಿ) ನಿಗದಿಯಾಗಿತ್ತು. ಆದರೆ, ಆ ಸಭೆಯನ್ನು ರದ್ದುಪಡಿಸಲಾಗಿದೆ. ಅಧೀನ ಕಾರ್ಯದರ್ಶಿ ಹುದ್ದೆಯಿಂದ ಉಪ ಕಾರ್ಯದರ್ಶಿ ಹುದ್ದೆಗಳಿಗೆ ಬಡ್ತಿ ನೀಡಲು 21 ಮಂದಿಯ ಹಾಗೂ ಸೆಕ್ಷನ್‌ ಅಧಿಕಾರಿಯಿಂದ ಅಧೀನ ಕಾರ್ಯದರ್ಶಿ ಹುದ್ದೆಗೆ 39 ಮಂದಿಯ ಪಟ್ಟಿ ಸಿದ್ಧಪಡಿಸಲಾಗಿದೆ. ಜೂನ್‌ ಅಂತ್ಯದವರೆಗೆ (ನಿವೃತ್ತಿಯಿಂದ)  ಖಾಲಿಯಾಗುವ ಹುದ್ದೆಗಳಿಗೆ ಬಡ್ತಿ ನೀಡುವ ಉದ್ದೇಶದಿಂದ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

**

ಬಡ್ತಿ ಮೀಸಲು ಸಂಬಂಧಿಸಿದಂತೆ ಅಡ್ವೊಕೇಟ್‌ ಜನರಲ್ ಮುಖ್ಯಮಂತ್ರಿ ಅವರಿಗೆ ಸಲಹೆ ನೀಡಲಿದ್ದಾರೆ. ಆ ಬಳಿಕ ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ.
- ಅನಿಲ್‌ ಕುಮಾರ್‌ ಝಾ, ಪ್ರಧಾನ ಕಾರ್ಯದರ್ಶಿ, ಡಿಪಿಎಆರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.