ADVERTISEMENT

ಬಡ್ತಿ: ‘ಸುಪ್ರೀಂ’ ಆದೇಶ ಪಾಲನೆಗೆ ಆಗ್ರಹಿಸಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 19:30 IST
Last Updated 14 ಅಕ್ಟೋಬರ್ 2017, 19:30 IST

ಬೆಂಗಳೂರು: ‘ಕೆಪಿಟಿಸಿಎಲ್‌ ಅಧಿಕಾರಿಗಳ ಜ್ಯೇಷ್ಠತಾ ಪಟ್ಟಿ ಎರಡು ವಾರಗಳಲ್ಲಿ ಸಿದ್ಧಪಡಿಸುವಂತೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶ ಸಕಾರಾತ್ಮಕವಾದುದು. ಆದರೆ, ಬಡ್ತಿ‌ ಮೀಸಲಾತಿ ಆದೇಶ ಕೆಪಿಟಿಸಿಎಲ್‌ಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಇಲಾಖೆಗಳಿಗೆ ಸಂಬಂಧಿಸಿದ್ದು. ಹೀಗಾಗಿ ಎಲ್ಲ ಇಲಾಖೆಗಳು ನ್ಯಾಯಾಲಯದ ಆದೇಶ ಪಾಲಿಸಬೇಕು’ ಎಂದು ಕರ್ನಾಟಕ ರಾಜ್ಯ ಅಹಿಂಸಾ (ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ) ಒಕ್ಕೂಟದ ಅಧ್ಯಕ್ಷ ನಾಗರಾಜ ಹೇಳಿದ್ದಾರೆ.

‘ಬಡ್ತಿಯಲ್ಲಿ ಮೀಸಲಾತಿ ವಿಧಾನ ಅನುಸರಿಸಲು ರೂಪಿಸಿರುವ ಕಾಯ್ದೆಯನ್ನು ರದ್ದುಪಡಿಸಿ, ಸಿಬ್ಬಂದಿಗೆ ಬಡ್ತಿ ನೀಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಅಹಿಂಸಾ ವತಿಯಿಂದ ಇದೇ 31ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಶನಿವಾರ ನಡೆದ ಸಂಘದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 50 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ’ ಎಂದು ಅವರು ತಿಳಿಸಿದರು.

‘ಸುಪ್ರೀಂ ಕೋರ್ಟ್‌ ಆದೇಶದ ವಿರುದ್ಧ ಕಾಯ್ದೆ ತರಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಸರ್ಕಾರದ ಈ ನಡೆಯನ್ನು ಒಕ್ಕೂಟ ತೀವ್ರವಾಗಿ ವಿರೋಧಿಸಲಿದೆ. ಅಷ್ಟೇ ಅಲ್ಲ, ಸುಪ್ರೀ ಕೋರ್ಟ್‌ ನೀಡಿರುವ ಬಡ್ತಿ ಆದೇಶದ ಲಾಭ ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ ವರ್ಗದಡಿ ಬರುವ 82 ಸಮುದಾಯಗಳಿಗೂ ಲಭ್ಯವಾಗುವ ನಿಟ್ಟಿನಲ್ಲಿ ನೀತಿ ನಿರೂಪಣೆಗೆ ಕಾಯ್ದೆ ಮಾಡಬೇಕು ಎಂದೂ ಒತ್ತಾಯಿಸಲಾಗುವುದು’ ಎಂದೂ ಅವರು ತಿಳಿಸಿದರು.

ADVERTISEMENT

‘ಕೆಪಿಟಿಸಿಎಲ್‌ನಲ್ಲಿ ಎಲ್ಲ 34 ಮುಖ್ಯ ಎಂಜಿನಿಯರ್‌ ಹುದ್ದೆಗಳಲ್ಲಿ ಎಸ್‌ಸಿ, ಎಸ್‌ಟಿ ವರ್ಗದವರಿದ್ದಾರೆ (ಶೇ100), ಸೂಪರಿಟೆಂಡೆಂಟ್‌ ಎಂಜಿನಿಯರ್‌ 55 ಹುದ್ದೆಗಳಲ್ಲಿ 28 ಅಹಿಂಸಾ ವರ್ಗದವರು, 27 ಎಸ್‌ಸಿ, ಎಸ್‌ಟಿ ವರ್ಗದವರಿದ್ದಾರೆ. ಕಾರ್ಯಪಾಲಕ ಎಂಜಿನಿಯರ್‌ 344 ಹುದ್ದೆಗಳಲ್ಲಿ 334 ಅಹಿಂಸಾ ವರ್ಗದವರು, 10 ಎಸ್‌ಎಸಿ,ಎಸ್‌ಟಿ ವರ್ಗದವರು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ 1,647 ಹುದ್ದೆಗಳಲ್ಲಿ 1,146 ಅಹಿಂಸಾ ವರ್ಗದವರು, 501 ಎಸ್‌ಸಿ, ಎಸ್‌ಟಿ ವರ್ಗದವರಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.