ADVERTISEMENT

ಬರ ಪರಿಹಾರ ಶೀಘ್ರ ಬಿಡುಗಡೆ

ಮಂತ್ರಿ ಪರಿಷತ್ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 25 ಜನವರಿ 2016, 19:30 IST
Last Updated 25 ಜನವರಿ 2016, 19:30 IST
ಬರ ಪರಿಹಾರ ಶೀಘ್ರ ಬಿಡುಗಡೆ
ಬರ ಪರಿಹಾರ ಶೀಘ್ರ ಬಿಡುಗಡೆ   

ಬೆಂಗಳೂರು: ರಾಜ್ಯದ 34.87 ಲಕ್ಷ ರೈತರಿಗೆ ಬರ ಪರಿಹಾರದ ಮೊತ್ತವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲು ಮಂಗಳವಾರ ನಡೆದ ಮಂತ್ರಿ ಪರಿಷತ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬರದಿಂದ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ರೂಪದಲ್ಲಿ ನೀಡಲು ಕೇಂದ್ರ ಸರ್ಕಾರ ₹ 1,540 ಕೋಟಿ ಬಿಡುಗಡೆ ಮಾಡಿದೆ. ಇದನ್ನು ಅರ್ಹ ರೈತರಿಗೆ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಸೂಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಸಭೆಯ ಇತರ ತೀರ್ಮಾನಗಳು:
*ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನವನ್ನು ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಎಂದು ಮಾರ್ಪಡಿಸಲು ಒಪ್ಪಿಗೆ
*ಒಂಬತ್ತು ಸಹಕಾರಿ ನೂಲಿನ ಗಿರಣಿಗಳಿಗೆ ನೀಡಿರುವ ಸರ್ಕಾರಿ ಸಾಲವನ್ನು ಷೇರು ಬಂಡವಾಳವನ್ನಾಗಿ ಪರಿವರ್ತಿಸಲು ಒಪ್ಪಿಗೆ
*ಕುಣಿಗಲ್ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಬಿ.ಆರ್. ಸುಶೀಲಮ್ಮ ಅವರನ್ನು ಸೇವೆಯಿಂದ ವಜಾಗೊಳಿಸಲು ಸಮ್ಮತಿ. ಲಂಚ ಕೇಳಿದ್ದ ಇವರು ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು.
*ರಾಜ್ಯದಲ್ಲಿ ಪಾರ್ಸಿ ಸಮುದಾಯವನ್ನು ‘ಅಲ್ಪಸಂಖ್ಯಾತ’ ಎಂದು ಗುರುತಿಸಲು ಒಪ್ಪಿಗೆ.
*ಸಫಾಯಿ ಕರ್ಮಚಾರಿಗಳು ಮತ್ತು ಪೌರ ಕಾರ್ಮಿಕರ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಲು ಸಮ್ಮತಿ.
*ಕೆಪಿಸಿಸಿ ಮಾಧ್ಯಮ ವಿಭಾಗ ಸಂಚಾಲಕ ದಿನೇಶ್‌ ಗೂಳಿಗೌಡ ಅವರನ್ನು ಗೃಹ ಸಚಿವರ  ವಿಶೇಷಾಧಿಕಾರಿಯಾಗಿ  ಗುತ್ತಿಗೆ ಆಧಾರದ ಮೇಲೆ ನೇಮಕ
ಇತರ ಪ್ರಮುಖ ತೀರ್ಮಾನಗಳು
*ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ತ್ವರಿತ ನೀರಾವರಿ ಯೋಜನೆ ಸಲುವಾಗಿ ಹೆಚ್ಚುವರಿಯಾಗಿ ₹400 ಕೋಟಿ ಅವಧಿ ಸಾಲವನ್ನು ಹಣಕಾಸು ಸಂಸ್ಥೆಗಳಿಂದ ಪಡೆಯಲು ಒಪ್ಪಿಗೆ.
*ಎಚ್‌.ಡಿ.ಕೋಟೆಯ ತಾರಕ ಬಲದಂಡೆ ನಾಲೆಯನ್ನು ₹14.5 ಕೋಟಿ ವೆಚ್ಚದಲ್ಲಿ ಆಧುನೀಕರಣ
*ಬಳ್ಳಾರಿ ಜಿಲ್ಲೆ, ಹಡಗಲಿ ತಾಲ್ಲೂಕಿನ ಕಾಲ್ವಿ ತಾಂಡಾ ಸಮೀಪ ನಿರ್ಮಿಸಲು ಉದ್ದೇಶಿಸಿರುವ ₹58 ಕೋಟಿ ವೆಚ್ಚದ ಏತನೀರಾವರಿ ಯೋಜನೆ

ಬಹುಮಹಡಿ ಕಟ್ಟಡಕ್ಕಿಲ್ಲ ಧಕ್ಕೆ: ವಿಕಾಸಸೌಧದ ಪಕ್ಕದಲ್ಲೇ ಇರುವ ಬಹುಮಹಡಿ ಕಟ್ಟಡವನ್ನು ಕೆಡವಿ, ಆ ಜಾಗದಲ್ಲಿ ವಾಹನ ನಿಲುಗಡೆಗೆ ಸೂಕ್ತ          ಸ್ಥಳಾವಕಾಶ ಕಲ್ಪಿಸಿ ಹೊಸ ಕಟ್ಟಡ ನಿರ್ಮಿಸಬೇಕು ಎಂಬ ಪ್ರಸ್ತಾವನೆಯನ್ನು ಮಂತ್ರಿ ಪರಿಷತ್ ಸಭೆ ತಿರಸ್ಕರಿಸಿದೆ ಎಂದು ಗೊತ್ತಾಗಿದೆ.

ಲೋಕಾಯುಕ್ತ ಕಚೇರಿ, ಸರ್ಕಾರದ ವಿವಿಧ ಇಲಾಖೆಗಳ ಕಚೇರಿ ಸೇರಿದಂತೆ ಹತ್ತು ಹಲವು ಕಚೇರಿಗಳನ್ನು ಹೊಂದಿರುವ ಬಹುಮಹಡಿ ಕಟ್ಟಡವನ್ನು ಕೆಡವಿ, ಅಲ್ಲಿ ಹೊಸ ಕಟ್ಟಡ ನಿರ್ಮಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಈ ಹಿಂದೆ ಶಿಫಾರಸು ಮಾಡಿತ್ತು. ಆದರೆ, ಈ ಶಿಫಾರಸಿನ ಬಗ್ಗೆ ಪರಿಶೀಲನೆ ನಡೆಸಿದ ತಾಂತ್ರಿಕ ಸಿಬ್ಬಂದಿ ಬಹುಮಹಡಿ ಕಟ್ಟಡ ಇನ್ನೂ 30ರಿಂದ 40 ವರ್ಷ ಬಾಳುತ್ತದೆ ಎಂಬ ವರದಿ ನೀಡಿದ್ದಾರೆ. ಹಾಗಾಗಿ, ಕಟ್ಟಡ ಕೆಡವುವ ಶಿಫಾರಸು ತಿರಸ್ಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
*
₹ 593 ಕೋಟಿ ವೆಚ್ಚದ ಪೂರಿಗಾಲಿ ಯೋಜನೆಗೆ ಅಸ್ತು
ಬೆಂಗಳೂರು:
ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕಿನ 25,327 ಸಾವಿರ ಎಕರೆ ಕೃಷಿ ಭೂಮಿಗೆ ಹನಿ ಮತ್ತು ತುಂತುರು ನೀರಾವರಿ ಸೌಲಭ್ಯ ಕಲ್ಪಿಸುವ ₹ 593 ಕೋಟಿ ವೆಚ್ಚದ ಪೂರಿಗಾಲಿ ಸಮಗ್ರ ನೀರಾವರಿ ಯೋಜನೆಗೆ ಮಂತ್ರಿ ಪರಿಷತ್‌ ಸಭೆ ಅನುಮೋದನೆ ನೀಡಿದೆ.

ಮುಡುಕುತೊರೆ ಸಮೀಪದ ಕಾವೇರಿ  ನದಿಯಿಂದ ನೀರನ್ನು ಪಂಪ್‌ ಮಾಡಿ ಎತ್ತರದ ಕೃಷಿ ಭೂಮಿಗೆ ಹನಿ ಮತ್ತು ತುಂತುರು ನೀರಾವರಿ ವ್ಯವಸ್ಥೆ ಮೂಲಕ  ಹರಿಸಲಾಗುವುದು. ಈ ಯೋಜನೆಯನ್ನು ಒಂದೂವರೆ ವರ್ಷದಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ.

ಮಳವಳ್ಳಿ ತಾಲ್ಲೂಕಿನ 51 ಗ್ರಾಮಗಳ (ಬಿ.ಜಿ.ಪುರ ಹೋಬಳಿಯ ಪೂರ್ಣ ಭಾಗ ಮತ್ತು ಕಿರುಗಾವಲು ಹೋಬಳಿ ಕೆಲವು ಭಾಗ) ವ್ಯಾಪ್ತಿಯ ಜಮೀನುಗಳಿಗೆ ಇದರಿಂದ ಅನುಕೂಲ ಆಗಲಿದೆ. ಒಟ್ಟು 16 ಕೆರೆಗಳಿಗೆ ನೀರು ತುಂಬಿಸುವುದು ಈ ಯೋಜನೆ ವ್ಯಾಪ್ತಿಯಲ್ಲಿ ಸೇರಿದೆ. ಈ ಯೋಜನೆ ಜಾರಿ ನಂತರ ಈ ಭಾಗದಲ್ಲಿ ಕೃಷಿ ಉತ್ಪಾದನೆ 50 ಸಾವಿರ ಟನ್‌ನಿಂದ 2.5 ಲಕ್ಷ ಟನ್‌ಗೆ ಹೆಚ್ಚಾಗಲಿದೆ ಎಂದು ಮಂತ್ರಿ ಪರಿಷತ್‌ ಮೂಲಗಳು ತಿಳಿಸಿವೆ.

ರಾವಣಿ ಗ್ರಾಮದ ಬಳಿ ನಿರ್ಮಿಸಲಾಗಿರುವ ಮಾರೆಹಳ್ಳಿ ಕೆರೆ ಕಾಲುವೆಗಳ ಆಧುನೀಕರಣ ಕಾಮಗಾರಿಯನ್ನು ₹19.9 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳುವುದಕ್ಕೂ ಮಂತ್ರಿ ಪರಿಷತ್‌ ಸಭೆ ಒಪ್ಪಿಗೆ ಸೂಚಿಸಿದೆ ಎಂದು ಗೊತ್ತಾಗಿದೆ.
*
ಕಡ್ಡಾಯ ನಿವೃತ್ತಿಗೆ ತೀರ್ಮಾನ
ಬೆಂಗಳೂರು:
ಸರ್ಕಾರದ ಖಜಾನೆ ಇಲಾಖೆಯಲ್ಲಿ ಸಹಾಯಕ ಖಜಾನಾಧಿಕಾರಿ ಹುದ್ದೆಯಲ್ಲಿದ್ದ ಕೆ. ವೀರಭದ್ರಪ್ಪ ಅವರಿಗೆ ಕಡ್ಡಾಯ ನಿವೃತ್ತಿ ನೀಡಲು ಸಭೆ ತೀರ್ಮಾನಿಸಿದೆ.

ವೀರಭದ್ರಪ್ಪ ಅವರು ಖಜಾನೆಯ ನಕಲಿ ಕೀಲಿ ಕೈ ಸಿದ್ಧಪಡಿಸಿ, ಅದನ್ನು ಅಲ್ಲಿನ ಗುಮಾಸ್ತನೊಬ್ಬನಿಗೆ ನೀಡಿದ್ದರು. ನಂತರ ಅಲ್ಲಿಂದ ಕೆಲವು ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು. ಹಾಗಾಗಿ ಇವರಿಗೆ ಕಡ್ಡಾಯ ನಿವೃತ್ತಿ ನೀಡಲು ತೀರ್ಮಾನಿಸಲಾಯಿತು ಎಂದು ಗೊತ್ತಾಗಿದೆ.

ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದ ಹಾಸನ ಜಿಲ್ಲಾ ಖಜಾನೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಎಂ.ಕೆ. ಮಂಜಪ್ಪ ಅವರ ಪಿಂಚಣಿಯ ಪೂರ್ಣ ಮೊತ್ತವನ್ನು ಶಾಶ್ವತವಾಗಿ ತಡೆಹಿಡಿಲು ಸಭೆ ತೀರ್ಮಾನ ಕೈಗೊಂಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.