ADVERTISEMENT

ಬಳ್ಳಾರಿಯಲ್ಲಿ ಮುಂದುವರಿದ ಸಿಬಿಐ ದಾಳಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 9:20 IST
Last Updated 4 ಅಕ್ಟೋಬರ್ 2011, 9:20 IST

ಬಳ್ಳಾರಿ (ಐಎಎನ್‌ಎಸ್):  ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಬಂಧನದಲ್ಲಿರುವ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರ ಆಪ್ತರಿಗೆ ಸೇರಿದ ಕಚೇರಿ, ನಿವಾಸಗಳ ಮೇಲೆ ಎರಡನೇಯ ದಿನವಾದ ಮಂಗಳವಾರ ಸಹ ಸಿಬಿಐ ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ.

ಬಳ್ಳಾರಿ ಪಟ್ಟಣ ಸೇರಿದಂತೆ ಹೊಸಪೇಟೆ ಮತ್ತು ತೋರಣಗಲ್‌ನಲ್ಲಿ ಹಲವು ಗಣಿ ಕಂಪೆನಿಗಳ ಮೇಲೆ ದಾಳಿ ನಡೆದಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ಬಳ್ಳಾರಿಯಲ್ಲಿರುವ ಬಿ.ನಾಗಪ್ಪ ಗಣಿ ಕಂಪೆನಿಯ ಮಾಲಿಕರಾದ ಶಾಂತಲಕ್ಷ್ಮಿ ಜಯರಾಂ ಅವರ ನಿವಾಸ ಹಾಗೂ ಸಾರಿಗೆ ಸಂಸ್ಥೆಯೊಂದರ ಮೇಲೆ ದಾಳಿ ಮುಂದುವರಿದಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಸಿಬಿಐ ತಂಡವೊಂದು ತೋರಣಗಲ್‌ನಲ್ಲಿರುವ ಜೆಎಸ್‌ಡಬ್ಲೂ (ಜಿಂದಾಲ್ ಸ್ಟಿಲ್ ವರ್ಕ್ಸ್) ಉಕ್ಕು ಕಾರ್ಖಾನೆಗೆ ಎರಡನೇಯ ದಿನವೂ ಭೇಟಿ ನೀಡಿ ಲೆಕ್ಕಪತ್ರಗಳ ತಪಾಸಣೆ ನಡೆಸುತ್ತಿದೆ. ಸೋಮವಾರ ಜೆಎಸ್‌ಡಬ್ಲೂ ಕಂಪೆನಿ ಮೇಲೆ ನಡೆದ ದಾಳಿಯನ್ನು ನಿರಾಕರಿಸಿದ್ದ ಕಂಪೆನಿ ಅಧಿಕಾರಿಗಳು `ಕೇವಲ ಅಗತ್ಯ ಮಾಹಿತಿ ಪಡೆಯಲು ಅಧಿಕಾರಿಗಳು ಕಂಪೆನಿಗೆ ಭೇಟಿ ನೀಡಿದ್ದರು~ ಎಂದು ಹೇಳಿದ್ದರು.

ಸೋಮವಾರ ಸಿಬಿಐ ಅಧಿಕಾರಿಗಳು ರಾಜ್ಯದ ವಿವಿಧೆಡೆ 15ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಅಲ್ಲದೇ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮವು (ಎನ್‌ಎಂಡಿಸಿ) ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ ಹೊಂದಿದ್ದ ಗಣಿ ಗುತ್ತಿಗೆ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ಮಾಲೀಕ ರಾಜೇಂದ್ರ ಜೈನ್ ಸೇರಿದಂತೆ ಮೂವರ ವಿರುದ್ಧ ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT