ADVERTISEMENT

ಬಳ್ಳಾರಿ: ರೆಡ್ಡಿ ಸಂಬಂಧಿಕರ ಮನೆ ಮೇಲೆ ಸಿಬಿಐ ದಾಳಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 19:30 IST
Last Updated 11 ಸೆಪ್ಟೆಂಬರ್ 2011, 19:30 IST
ಬಳ್ಳಾರಿ: ರೆಡ್ಡಿ ಸಂಬಂಧಿಕರ ಮನೆ ಮೇಲೆ ಸಿಬಿಐ ದಾಳಿ
ಬಳ್ಳಾರಿ: ರೆಡ್ಡಿ ಸಂಬಂಧಿಕರ ಮನೆ ಮೇಲೆ ಸಿಬಿಐ ದಾಳಿ   

ಬಳ್ಳಾರಿ: ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಆಂಧ್ರದ ಸಿಬಿಐ ಅಧಿಕಾರಿಗಳು, ನಗರದಲ್ಲಿ ಭಾನುವಾರ ಜನಾರ್ದನ ರೆಡ್ಡಿ ಅವರ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು.

ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ದ ಅಧ್ಯಕ್ಷ ಎಸ್.ಗುರುಲಿಂಗನಗೌಡ ಹಾಗೂ ಜನಾರ್ದನ ರೆಡ್ಡಿ ದೂರದ ಸಂಬಂಧಿ ಕುರುವಳ್ಳಿ ಭಾಸ್ಕರ ರೆಡ್ಡಿ ಅವರ ನಿವಾಸಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ತಪಾಸಣೆ ನಡೆಸಿದ ಅಧಿಕಾರಿಗಳು ವಿವಿಧ ದಾಖಲೆಗಳನ್ನು ಪರಿಶೀಲಿಸಿದರು.

ಬೆಳಿಗ್ಗೆ 7.20ಕ್ಕೆ ಬಸವೇಶ್ವರ ನಗರದ ಬಳಿಯ ರೇಣುಕಾಚಾರ್ಯ ನಗರದಲ್ಲಿರುವ  ಗುರುಲಿಂಗನಗೌಡ ಅವರ ನಾಲ್ಕಂತಸ್ತಿನ ಭಾರಿ ಬಂಗಲೆಗೆ ಬಂದ ಸಿಬಿಐ ಸಿಬ್ಬಂದಿ, 11.30ರವರೆಗೆ ಮನೆಯ ಪ್ರತಿಯೊಂದು ಕೊಠಡಿ ಜಾಲಾಡಿದರು.

ಗುರುಲಿಂಗನಗೌಡ ಹಾಗೂ ಅವರ ಪತ್ನಿ ಸುನೀತಾ ಸೇರಿದಂತೆ ಮನೆಯಲ್ಲಿದ್ದ ಕೆಲವರನ್ನು ವಿಚಾರಣೆಗೆ ಒಳಪಡಿಸಿದ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಇನ್‌ಸ್ಪೆಕ್ಟರ್ ರಮಣರಾವ್ ಹಾಗೂ ಇತರ ಅಧಿಕಾರಿಗಳು ದೇವರ ಕೋಣೆ, ಮಲಗುವ ಕೋಣೆ, ಸ್ನಾನಗೃಹ, ಅಡುಗೆ ಮನೆ ಮತ್ತಿತರ ಕೊಠಡಿಗಳಲ್ಲಿ ತೀವ್ರ ಶೋಧ ಕಾರ್ಯ ನಡೆಸಿದರು.

`ನೀವು ಬಿಜೆಪಿ ಸೇರಿದ್ದು ಯಾವಾಗ? ಜನಾರ್ದನರೆಡ್ಡಿ ಅವರೊಂದಿಗೆ ಸ್ನೇಹ ಗಳಿಸಿದ್ದು ಹೇಗೆ? ಈ ಬಂಗಲೆ ಕಟ್ಟಿಸಲು ತಗುಲಿದ ವೆಚ್ಚ ಎಷ್ಟು? ಇಷ್ಟೆಲ್ಲ ಹಣ ಹೇಗೆ ಬಂತು? ನಿಮ್ಮ ಸ್ಥಿರ ಮತ್ತು ಚರಾಸ್ತಿ ಎಷ್ಟಿದೆ? ಗಣಿಗಾರಿಕೆಯಲ್ಲಿ ತೊಡಗಿದ್ದೀರಾ? ಎಂದೆಲ್ಲ ಪ್ರಶ್ನಿಸಿದ ಸಿಬಿಐ ಸಿಬ್ಬಂದಿ, ಆ ಕುರಿತ ಸಂಬಂಧಿಸಿದ ಅನೇಕ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಮೋಕಾ ರಸ್ತೆಯ ಗಾಂಧಿನಗರದಲ್ಲಿನ ಬಿತ್ತನೆ ಬೀಜ ವಿತರಕ, ಜನಾರ್ದನರೆಡ್ಡಿ ದೂರದ ಸಂಬಂಧಿ ಕುರುವಳ್ಳಿ ಭಾಸ್ಕರ ರೆಡ್ಡಿ ಅವರ ನಿವಾಸದ ಮೇಲೂ ಇದೇ ವೇಳೆ ಸಿಬಿಐನ ಇನ್ನೊಂದು ತಂಡ ಪ್ರತ್ಯೇಕ ದಾಳಿ ನಡೆಸಿ ಪರಶೀಲಿಸಿತು. ಇನ್ಸ್‌ಪೆಕ್ಟರ್‌ಗಳಾದ ವಿ.ಪಿ. ಮುರುಳೀಧರ ಹಾಗೂ ಚಂದ್ರಶೇಖರ ನಾಯ್ಡು ಅವರನ್ನು ಒಳಗೊಂಡ ಆರು ಜನರ ತಂಡ ಮನೆಯಲ್ಲಿದ್ದ ಅನೇಕ ದಾಖಲೆಗಳನ್ನು ತಪಾಸಿಸಿ, ಭಾಸ್ಕರ ರೆಡ್ಡಿ ಅವರಿಂದ ಅಗತ್ಯ ಮಾಹಿತಿ ಪಡೆದಿದೆ.

ಬ್ಯಾಂಕಿಗೂ ಭೇಟಿ:  ಮನೆಯ ಇಂಚಿಂಚನ್ನೂ ಶೋಧ ನಡೆಸಿ, ಮಧ್ಯಾಹ್ನ 12.30ಕ್ಕೆ ತಪಾಸಣೆ ಪೂರ್ಣಗೊಳಿಸಿದ ಸಿಬಿಐ ಅಧಿಕಾರಿಗಳು, ನಂತರ ಪ್ರಗತಿ ಗ್ರಾಮೀಣ ಬ್ಯಾಂಕ್ ಶಾಖೆಗೂ ತೆರಳಿ, ಭಾಸ್ಕರ ರೆಡ್ಡಿ ಅವರ ಪತ್ನಿ ಸುಜಾತಾ ಅವರ ಹೆಸರಿನಲ್ಲಿರುವ ಸೇಫ್ ಲಾಕರ್ ಬಾಗಿಲು ತೆಗೆಸಿ ತಪಾಸಿಸಿದರು.
ದಾಳಿಯ ವೇಳೆ ಬಹುತೇಕ ದಾಖಲೆಗಳು, ಆಸ್ತಿ ವಿವರ, ಜನಾರ್ದನರೆಡ್ಡಿ ಅವರೊಂದಿಗೆ ಸಂಬಂಧ ಕುರಿತು ಪ್ರಶ್ನಿಸಿದ್ದಾಗಿ ತಿಳಿದುಬಂದಿದೆ.

ದಾಳಿಯ ವೇಳೆ ಈ ಇಬ್ಬರ ಮನೆಗಳಿಂದ ಯಾವುದೇ ವಸ್ತುಗಳನ್ನು ವಶಪಡಿಸಿಕೊಳ್ಳದೆ, `ಯಾವುದೇ ಪ್ರಮುಖ ದಾಖಲೆ, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿಲ್ಲ~ ಎಂಬುದಾಗಿ ಪತ್ರ ನೀಡಿ ತೆರಳಿದ್ದಾರೆ.

ಜನಾರ್ದನ ರೆಡ್ಡಿ ಆಪ್ತರಾಗಿರುವ ವೆಂಕಟರೆಡ್ಡಿ ಎಂಬುವವರ ಮನೆಯ ಮೇಲೂ ದಾಳಿ ನಡೆಸಲು ಆಲೋಚಿಸಿದ್ದ ಈ ಅಧಿಕಾರಿಗಳಿಗೆ, ಲಭ್ಯ ವಿಳಾಸದಲ್ಲಿ ಅವರ ಮನೆ ದೊರೆಯಲಿಲ್ಲ ಎನ್ನಲಾಗಿದೆ.
20ಕ್ಕೂ ಹೆಚ್ಚು ಸದಸ್ಯರಿದ್ದ ಸಿಬಿಐ ತಂಡವು ನಗರದ ಇನ್ನೂ ಕೆಲವೆಡೆ ದಾಳಿ ನಡೆಸಿ, ರೆಡ್ಡಿ ಆಪ್ತರನ್ನು ವಿಚಾರಣೆಗೆ ಒಳಪಡಿಸಿದೆ ಎನ್ನಲಾಗಿದೆ.

ಸಿಬಿಐನ ಭಷ್ಟಾಚಾರ ನಿಗ್ರಹ ದಳದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಎಂ. ಖಾನ್ ಅವರ ನಿರ್ದೇಶನದ ಮೇರೆಗೆ ಆಗಮಿಸಿದ್ದ ತಂಡದಲ್ಲಿ ವೈವಿಎಸ್ ವೆಂಕಟೇಶ್ವರ, ಇ.ಪಾಪನ್ನ, ಎಸ್.ಲಕ್ಷ್ಮಾ ನಾಯ್ಕ, ಎ.ರಾಮಕೃಷ್ಣಯ್ಯ ಮತ್ತಿತರರು ಇದ್ದರು. ರೆಡ್ಡಿ ಆಪ್ತರಾಗಿರುವ ಗುರುಲಿಂಗನಗೌಡ ಹಾಗೂ ಭಾಸ್ಕರ ರೆಡ್ಡಿ ಅವರ ಮನೆಗಳ ಮೇಲೆ ಸಿಬಿಐ ಸಿಬ್ಬಂದಿ ದಾಳಿ ನಡೆಸಿದ ವಿಷಯ ಗೊತ್ತಾಗುತ್ತಿದ್ದಂತೆಯೇ ನೂರಾರು ಜನರು ಹೊರಗಡೆ ನಿಂತು ಕುತೂಹಲದಿಂದ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.