ADVERTISEMENT

ಬಳ್ಳಾರಿ ವಿಮ್ಸ್ ನ ನಾಲ್ವರು ವೈದ್ಯರ ಬಂಧನ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 19:30 IST
Last Updated 22 ಅಕ್ಟೋಬರ್ 2011, 19:30 IST

ಬಳ್ಳಾರಿ: ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ನ ಪ್ರವೇಶ ಪರೀಕ್ಷೆ ಅಕ್ರಮ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು, ಸ್ಥಳೀಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ) ನಾಲ್ವರು ವೈದ್ಯಕೀಯ ಸಿಬ್ಬಂದಿ ಸೇರಿದಂತೆ ರಾಜ್ಯದ ವಿವಿಧೆಡೆ ಒಟ್ಟು ಎಂಟು ಜನರನ್ನು ಶನಿವಾರ ಬಂಧಿಸಿದ್ದಾರೆ.

 ವಿಮ್ಸನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ವಿ.ಸುರೇಶ್, ಡಾ.ಭರತ್‌ಕುಮಾರ್ ಹಾಗೂ ಸ್ನಾತಕೋತ್ತರ ಕೋರ್ಸ್ ಓದುತ್ತಿರುವ ಡಾ.ಧನಂಜಯ್ ಎಂಬುವವರೇ ಬಂಧಿತರು.

ಸಂಜೆ ಇವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ, ಗುಲ್ಬರ್ಗ, ಬೆಂಗಳೂರಿನಲ್ಲೂ ನಾಲ್ವರು ವೈದ್ಯರನ್ನು ಬಂಧಿಸಲಾಗಿದ್ದು, ವಿಚಾರಣೆಗಾಗಿ ನಗರಕ್ಕೆ ಕರೆತರಲಾಗುತ್ತಿದೆ. ಬಳ್ಳಾರಿಯಲ್ಲೂ ಒಬ್ಬ ವೈದ್ಯೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

 ಬೆಂಗಳೂರಿನ ಡಾ.ಫಿರ್ದೊಸ್ ಸುಲ್ತಾನಾ, ಡಾ.ವಿ.ಸಂಕೀರ್ತ್, ಗುಲ್ಬರ್ಗದ ಡಾ. ರೇಣುಕಾ, ಮಂಡ್ಯದ ಡಾ.ಭಾರತಿ, ಬಳ್ಳಾರಿಯ ಡಾ. ಶಿಲ್ಪಾ ಎಂಬುವವರೇ ಬಂಧಿತರು. ಬಂಧಿತರಲ್ಲಿ ಕೆಲವರು ಸೇವಾನಿರತ ವೈದ್ಯರಾಗಿದ್ದು, ಇನ್ನು ಕೆಲವರು ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ವಿದ್ಯಾರ್ಥಿಗಳಾಗಿದ್ದಾರೆ.

 ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಅನೇಕ ವೈದ್ಯರು ಹಾಗೂ ಪರೀಕ್ಷಾ ವಿಭಾಗದ ಗುಮಾಸ್ತರನ್ನು ವಿಚಾರಣೆಗೆ ಒಳಪಡಿಸಲಾಗಿದೆ. 

 ಪ್ರಕರಣದ ಪ್ರಮುಖ ಆರೋಪಿಯಾಗಿರುವ ವಿಮ್ಸ ವಿಧಿವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕೆ.ವಿನಾಯಕ ಪ್ರಸನ್ನ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಬಂಧನ ವಾರೆಂಟ್ ಹೊರಡಿಸಿದ ಸಂದರ್ಭ ಕೆಲಸಕ್ಕೆ ಗೈರು ಹಾಜರಾಗಿರುವುದರಿಂದ ಅವರನ್ನು ಅಮಾನತಿನಲ್ಲಿ ಇರಿಸಲಾಗಿದೆ.

 ವಿಮ್ಸನಲ್ಲಿ 2011ರ ಜನವರಿ 30ರಂದು ನಡೆದಿದ್ದ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ನ ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸಿದ್ದ 7 ಜನ ಅಭ್ಯರ್ಥಿಗಳಿಗೆ ಅಗ್ರ ಕ್ರಮಾಂಕದ ರ‌್ಯಾಂಕ್ ಲಭಿಸಿದ್ದು, ಈ ಎಲ್ಲ ಅಭ್ಯರ್ಥಿಗಳು ಒಂದೇ ಕೊಠಡಿಯಲ್ಲಿ ಕುಳಿತು ಪರೀಕ್ಷೆ ಬರೆದಿದ್ದರು.

ಅಕ್ರಮ ನಡೆದಿರುವ ಕುರಿತು ಕೆಲವು ಅಭ್ಯರ್ಥಿಗಳು ದೂರು ನೀಡಿದ್ದರಿಂದ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. ಅಲ್ಲದೆ, ಈ ಏಳು ಅಭ್ಯರ್ಥಿಗಳು ವಿಮ್ಸನಲ್ಲಿ ಕೆಲಸ ಮಾಡುತ್ತಿರುವ ವೈದ್ಯರೂ, ವೈದ್ಯರ ಸಂಬಂಧಿಗಳೂ ಆಗಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.