ಬೆಂಗಳೂರು: ತುಮಕೂರು ಸಂಸದ ಜಿ.ಎಸ್.ಬಸವರಾಜು, ವಿಧಾನ ಪರಿಷತ್ ಸದಸ್ಯ ಲೆಹರ್‌ಸಿಂಗ್ ಅವರ ಅಮಾನತು ಆದೇಶ ಹಿಂದಕ್ಕೆ ಪಡೆಯಲು ರಾಜ್ಯ ಬಿಜೆಪಿ ನಾಯಕರು ನಿರಾಕರಿಸಿದ್ದಾರೆ. ಕೆಜೆಪಿಯ ವಿ.ಧನಂಜಯಕುಮಾರ್ ಮತ್ತು ರಾಜೇಂದ್ರ ಗೋಖಲೆ ಅವರ ಬಿಜೆಪಿ ಸೇರ್ಪಡೆ ವಿಷಯವನ್ನು ಹೈಕಮಾಂಡ್ ತೀರ್ಮಾನಿಸಬೇಕಾಗಿದೆ ಎಂದು ಹೇಳುವುದರ ಮೂಲಕ ಅದಕ್ಕೂ ಪರೋಕ್ಷವಾಗಿ ಬ್ರೇಕ್ ಹಾಕಿದ್ದಾರೆ.
ಯಡಿಯೂರಪ್ಪ ಮತ್ತು ಅವರ ಕೆಲ ಆಪ್ತರಷ್ಟೇ ವಿಲೀನ ಸಂದರ್ಭದಲ್ಲಿ ಕೆಜೆಪಿಯಿಂದ ಬಿಜೆಪಿ ಸೇರಿದ್ದರು. ಇದಕ್ಕೆ ವಿಧಾನಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಆಕ್ಷೇಪ ಎತ್ತಿ ಯಡಿಯೂರಪ್ಪ ಅವರಿಗೆ ಮಂಗಳವಾರ 15 ಪ್ರಶ್ನೆಗಳನ್ನೂ ಕೇಳಿದ್ದರು.
ಇದರಿಂದ ಮುಜುಗರ ಅನುಭವಿಸಿದ ಯಡಿಯೂರಪ್ಪ ಬುಧವಾರ ಮಧ್ಯಾಹ್ನ ಲಕ್ಷ್ಮೀನಾರಾಯಣ, ಧನಂಜಯಕುಮಾರ್ ಮತ್ತಿತರರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಸಮಾಧಾನಪಡಿಸಲು ಪ್ರಯತ್ನಿಸಿದರು. ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜತೆ ದೂರವಾಣಿ ಮೂಲಕ ಮಾತನಾಡಿ ಮಾತುಕತೆಗೆ ಸಮಯ ಕೂಡ ನಿಗದಿ ಮಾಡಿದರು.
ಯಡಿಯೂರಪ್ಪ ಅವರ ಸಲಹೆಯಂತೆ ಬಿಜೆಪಿ ಕಚೇರಿಯಲ್ಲಿ ಲಕ್ಷ್ಮೀನಾರಾಯಣ ಮತ್ತು ಶಂಕರಗೌಡ ಪಾಟೀಲ ಅವರ ಜತೆ ಸಂತೋಷ್ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಲಕ್ಷ್ಮೀನಾರಾಯಣ ಅವರು ಬಸವರಾಜು ಮತ್ತು ಲೆಹರ್‌ಸಿಂಗ್ ವಿರುದ್ಧದ ಅಮಾನತು ಆದೇಶ ಹಿಂದಕ್ಕೆ ಪಡೆಯಬೇಕೆಂದು ಕೋರಿದರು. ಅಲ್ಲದೆ, ‘ಬಸವರಾಜು ಅವರಿಗೆ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಬೇಕು. ಧನಂಜಯಕುಮಾರ್ ಮತ್ತು ರಾಜೇಂದ್ರ ಗೋಖಲೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು’ ಎನ್ನುವ ಬೇಡಿಕೆಯನ್ನೂ ಮಂಡಿಸಿದರು. ಇದನ್ನು ಸಂತೋಷ್ ಅವರು ಸಾರಾಸಗಟಾಗಿ ತಿರಸ್ಕರಿಸಿದರು ಎನ್ನಲಾಗಿದೆ.
ಟಿಕೆಟ್ ಕೊಡೊಲ್ಲ: ‘ಬಸವರಾಜು ಮತ್ತು ಲೆಹರ್‌ಸಿಂಗ್ ಮೇಲಿನ ಅಮಾನತು ಆದೇಶ ಹಿಂದಕ್ಕೆ ಪಡೆಯಲ್ಲ. ಹೀಗಾಗಿ ಬಸವರಾಜು ಅವರಿಗೆ ಟಿಕೆಟ್ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಧನಂಜಯ ಕುಮಾರ್ ವಿಷಯವನ್ನು ದೆಹಲಿ ವರಿಷ್ಠರ ಜತೆ ಚರ್ಚಿಸಬೇಕು. ಈ ಕೆಲಸವನ್ನು ಯಡಿಯೂರಪ್ಪ ಅವರೇ ಮಾಡಿದರೆ ಸೂಕ್ತ ಎಂದು ಸಂತೋಷ್ ಹೇಳಿದರು’ ಎಂದು ಲಕ್ಷ್ಮೀನಾರಾಯಣ ನಂತರ ಸುದ್ದಿಗಾರರಿಗೆ ವಿವರಿಸಿದರು.
‘ನಮ್ಮ ನಾಲ್ಕು ಬೇಡಿಕೆಗಳಿಗೂ ಬಿಜೆಪಿಯವರು ಒಪ್ಪಿಲ್ಲ. ಹೀಗಾಗಿ ಮುಂದಿನ ಹೋರಾಟದ ಬಗ್ಗೆ ಕೆಜೆಪಿಯ ಎಲ್ಲ ಮುಖಂಡರ ಜತೆ ಚರ್ಚಿಸಿದ ನಂತರ ತೀರ್ಮಾನಿಸಲಾಗುವುದು’ ಎಂದು ಹೇಳಿದರು.
‘ನನಗೆ ಬಿಜೆಪಿ ಸೇರುವುದಕ್ಕೆ ಯಾವ ಅಡಚಣೆಯೂ ಇಲ್ಲ. ಪಕ್ಷಕ್ಕೆ ಬನ್ನಿ ಎಂದು ಸಂತೋಷ್ ಅವರೇ ಹೇಳಿದ್ದಾರೆ. ಆದರೆ, ನನ್ನ ಜತೆ ಇರುವ ಇತರರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದು ನನ್ನ ಇಚ್ಛೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.