ADVERTISEMENT

ಬಾದಾಮಿಯಿಂದ ಸ್ಪರ್ಧೆ; ಹೈಕಮಾಂಡ್‌ ನಿರ್ಧಾರ ಅಂತಿಮ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 10:20 IST
Last Updated 21 ಏಪ್ರಿಲ್ 2018, 10:20 IST
ಬಾದಾಮಿಯಿಂದ ಸ್ಪರ್ಧೆ; ಹೈಕಮಾಂಡ್‌ ನಿರ್ಧಾರ ಅಂತಿಮ: ಸಿದ್ದರಾಮಯ್ಯ
ಬಾದಾಮಿಯಿಂದ ಸ್ಪರ್ಧೆ; ಹೈಕಮಾಂಡ್‌ ನಿರ್ಧಾರ ಅಂತಿಮ: ಸಿದ್ದರಾಮಯ್ಯ   

ಬೆಂಗಳೂರು: 'ಈಗಾಗಲೇ ಚಾಮುಂಡೇಶ್ವರಿಯಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ಉತ್ತರ ಕರ್ನಾಟಕ ಭಾಗದ ಜನರು ಬಾದಾಮಿಯಲ್ಲೂ ಸ್ಪರ್ಧಿಸಿ ಅಂತಿದ್ದಾರೆ. ನಾನು ಸ್ಪರ್ಧೆ ಮಾಡಬಾರದು ಅನ್ಕೊಂಡಿದ್ದೀನಿ. ಹೈಕಮಾಂಡ್ ತೀರ್ಮಾನವೇ ಅಂತಿಮ. ಹೈಕಮಾಂಡ್ ಹೇಳಿದ್ರೆ ಬಾದಾಮಿಯಿಂದ ಸ್ಪರ್ಧಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾನು ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಿರುವುದರಿಂದ ಅಲ್ಲಿನ ಜನಕ್ಕೆ ಖುಷಿ ತಂದಿದೆ ಎಂದರು.

‘ಅನ್ನ, ನೀರು ಕೊಟ್ಟವರನ್ನು ರಾಜ್ಯದ ಜನ ಕೈ ಬಿಡುವುದಿಲ್ಲ. ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ’ ಎಂದರು.

ADVERTISEMENT

‘ಅಮಿತ್ ಶಾ, ಮೋದಿ, ಯಡಿಯೂರಪ್ಪ ಬರೀ ಸುಳ್ಳು ಹೇಳುತ್ತಾರೆ. ಕೇಂದ್ರದಲ್ಲಿ ಅವರ ಸಾಧನೆ ಏನೂ ಇಲ್ಲ. ಜೈಲಿಗೆ ಹೋಗಿದ್ದೇವೆ ಅಂತ ಹೇಳಲು ಆಗೊಲ್ಲ. ಅದಕ್ಕಾಗಿ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಜೆಡಿಎಸ್‌ಗೆ ರಾಜ್ಯದಲ್ಲಿ ಶಕ್ತಿ ಇಲ್ಲ. ಕೆಲವು ಜಿಲ್ಲೆಯಲ್ಲಿ ಮಾತ್ರ ಜೆಡಿಎಸ್ ಇದೆ. ಅತಂತ್ರ ವಿಧಾನಸಭೆ ಆಗಲಿ ಎಂದು ಜೆಡಿಎಸ್ ಕಾಯುತ್ತಿದೆ. ಅದು ಕನಸಾಗಿಯೇ ಇರುತ್ತದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ’ ಎಂದರು.

ಭ್ರಷ್ಟಾಚಾರದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ:
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿಯವರು ಈ ಚುನಾವಣೆಯಲ್ಲಿ ಯಾರಿಗೆಲ್ಲ ಟಿಕೆಟ್ ನೀಡಿದ್ದಾರೆ ಎನ್ನುವುದನ್ನು ನೋಡಲಿ. ಭ್ರಷ್ಟಾಚಾರದ ಬಗ್ಗೆ ಮಾತಾಡುವ ನೈತಿಕತೆ ಅವರಿಗೆ ಇಲ್ಲ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೇಳಿದರು.

ಬಾದಾಮಿಯಲ್ಲಿ ಯಡಿಯೂರಪ್ಪ ಸ್ಪರ್ಧೆ ಮಾಡುತ್ತಾರೆ ಎಂದು ಸುದ್ದಿ ಹರಿದಾಡುತ್ತಿದೆ. ಯಡಿಯೂರಪ್ಪ ಸ್ಪರ್ಧೆ ಮಾಡಿದರೆ ನಮಗೇ ಒಳ್ಳೆಯದು. ಬಾದಾಮಿಯಲ್ಲಿ ನಾವೇ ಗೆಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.