ADVERTISEMENT

ಬಾಲಕೃಷ್ಣೇಗೌಡ ಅರ್ಜಿ ವಜಾ: ತನಿಖೆಗೆ ಹೈಕೋರ್ಟ್ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST

ಬೆಂಗಳೂರು: ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿರುವ ನಿವೃತ್ತ ಕೆಎಎಸ್ ಅಧಿಕಾರಿ ಎಚ್.ಡಿ. ಬಾಲಕೃಷ್ಣೇಗೌಡ (ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪುತ್ರ) ವಿರುದ್ಧ ತನಿಖೆ ಮುಂದುವರಿಸಲು ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಗುರುವಾರ ಹಸಿರು ನಿಶಾನೆ ತೋರಿದೆ.

ತಮ್ಮ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತ ವಿಶೇಷ ಕೋರ್ಟ್ ಹೊರಡಿಸಿದ್ದ ಆದೇಶದ ರದ್ದತಿಗೆ ಕೋರಿದ್ದ ಗೌಡರ ಅರ್ಜಿಯನ್ನು ನ್ಯಾಯಮೂರ್ತಿ ಎನ್.ಆನಂದ ಅವರು ವಜಾಗೊಳಿಸಿದ್ದಾರೆ.

`ಇವರ ವಿರುದ್ಧದ ಆರೋಪಗಳನ್ನು ಗಮನಿಸಿದರೆ, ಅದರ ತನಿಖೆ ಅಗತ್ಯ ಇದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ಈ ಆರೋಪಗಳು ದುರುದ್ದೇಶದಿಂದ ಕೂಡಿವೆ ಎಂದು ಊಹೆ ಮಾಡಿಕೊಂಡರೂ ಅದರಲ್ಲಿ ಇರುವ ಅಂಶಗಳನ್ನು ಕಡೆಗಣಿಸುವಂತಿಲ್ಲ. ದುರುದ್ದೇಶದ ಕಾರಣವೊಂದನ್ನೇ ನೀಡುವ ಮೂಲಕ ಎಫ್‌ಐಆರ್‌ಗೆ ತಡೆ ನೀಡುವುದು ಉಚಿತವಲ್ಲ. ಇದನ್ನೆಲ್ಲ ಗಮನಿಸಿದ ನಂತರವೇ ವಿಶೇಷ ಕೋರ್ಟ್ ತನಿಖೆಗೆ ಆದೇಶಿಸಿದೆ. ಅದರಲ್ಲಿ ಯಾವುದೇ ತಪ್ಪು ನಮಗೆ ಕಾಣುತ್ತಿಲ್ಲ~ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ವಾದ ಸರಿಯಲ್ಲ: `ಲೋಕಾಯುಕ್ತ ಕೋರ್ಟ್ ವಿವೇಚನಾರಹಿತವಾಗಿ ಆದೇಶ ಹೊರಡಿಸಿದೆ ಎಂಬ ದೂರುದಾರರ ವಾದದಲ್ಲಿ ಯಾವುದೇ ಹುರುಳು ಇಲ್ಲ. ಇವರು ವೈಯಕ್ತಿಕವಾಗಿ ಮಾತ್ರವಲ್ಲದೇ, ತಮ್ಮ ಪತ್ನಿ ಹಾಗೂ ಸಂಬಂಧಿಗಳ ಹೆಸರಿನಲ್ಲಿಯೂ ಆಸ್ತಿ ಮಾಡಿದ್ದಾರೆ ಎಂಬ ಗಂಭೀರ ಆರೋಪಗಳೂ ಇವೆ. ಇವೆಲ್ಲವುಗಳ ತನಿಖೆ ಅಗತ್ಯ ಇದೆ~ ಎಂದು ಅವರು ತಿಳಿಸಿದ್ದಾರೆ.

ಪ್ರಕರಣದ ವಿವರ: ಕೆಎಎಸ್ ಅಧಿಕಾರಿಯಾಗಿದ್ದ ಬಾಲಕೃಷ್ಣೇಗೌಡರು ಸ್ವಯಂ ನಿವೃತ್ತಿ ಹೊಂದಿದ ತಕ್ಷಣ ಭಾರಿ ಪ್ರಮಾಣದ ಆಸ್ತಿ ಸಂಪಾದಿಸಿದ್ದಾರೆ ಎನ್ನುವ ವಿವಾದ ಇದು. ಇವರ ವಿರುದ್ಧ ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯಲ್ಲಿನ ನಿವೃತ್ತ ಮೆಕ್ಯಾನಿಕಲ್ ಎಂಜಿನಿಯರ್ ಎಸ್.ಎನ್.ಬಾಲಕೃಷ್ಣ ಅವರು ಲೋಕಾಯುಕ್ತ ವಿಶೇಷ ಕೋಟ್‌ನಲ್ಲಿ ದೂರು ದಾಖಲು ಮಾಡಿದ್ದರು.

ಈ ದೂರಿನ ಆಧಾರದ ಮೇಲೆ ಲೋಕಾಯುಕ್ತ ಕೋರ್ಟ್ ತನಿಖೆಗೆ ಆದೇಶಿಸಿತ್ತು. ಇದನ್ನು ಅವರು ಪ್ರಶ್ನಿಸಿದ್ದರು. ಈ ಹಿಂದೆ ಹೈಕೋರ್ಟ್ ನಿಂದ ತನಿಖೆಗೆ ಎಂಟು ವಾರಗಳ ತಡೆ ಪಡೆದುಕೊಳ್ಳುವಲ್ಲಿ ಇವರು ಯಶಸ್ವಿಯಾಗಿದ್ದರು.

ವಜ್ರವನ್ನು ವಜ್ರದಿಂದಲೇ...
ಬಾಲಕೃಷ್ಣೇಗೌಡ ಅವರ ವಿರುದ್ಧ ರಾಜಕೀಯ ದುರುದ್ದೇಶದಿಂದ ಅರ್ಜಿ ಸಲ್ಲಿಸಲಾಗಿದೆ ಎಂದು ವಕೀಲರು ವಿಚಾರಣೆ ವೇಳೆ ಆರೋಪಿದರು. ಅದಕ್ಕೆ ನ್ಯಾಯಮೂರ್ತಿಗಳು, `ವಜ್ರವನ್ನು ವಜ್ರದಿಂದಲೇ ಕತ್ತರಿಸಬೇಕಲ್ಲವೆ, ಇದು ಹಾಗೆಯೇ. ರಾಜಕೀಯ ವ್ಯಕ್ತಿಗಳ ವಿರುದ್ಧ ರಾಜಕೀಯ ವ್ಯಕ್ತಿಗಳು ದೂರು ಸಲ್ಲಿಸಿದಾಗಲೇ ಎಲ್ಲವೂ ಬಹಿರಂಗಗೊಳ್ಳುವುದು~ ಎಂದರು.

ಗೌಡರ ವಿರುದ್ಧ ಇರುವ ಆರೋಪಗಳು ನಿರಾಧಾರ ಎಂದು ವಕೀಲರು ವಾದಿಸಿದರು. ಅದಕ್ಕೆ ನ್ಯಾಯಮೂರ್ತಿಗಳು, `ತನಿಖೆ ನಡೆದರೆ ತಾನೆ ಸತ್ಯಾಂಶ ಗೊತ್ತಾಗುವುದು. ಅದು ನಡೆಯಲಿ ಬಿಡಿ. ಆರೋಪ ನಿರಾಧಾರ ಆಗಿದ್ದರೆ ತನಿಖೆಯಿಂದ ತಿಳಿದುಬರುತ್ತದೆಯಲ್ಲ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.