ADVERTISEMENT

ಬಾಲವಿಜ್ಞಾನಿಗಳ ಕೌಶಲ ಅನಾವರಣ

488 ವಿಜ್ಞಾನ ಮಾದರಿ ಪ್ರದರ್ಶಿಸಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2013, 19:59 IST
Last Updated 22 ಸೆಪ್ಟೆಂಬರ್ 2013, 19:59 IST
ದಾವಣಗೆರೆಯಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಇನ್ ಸ್ಪೈರ್ ಪ್ರಶಸ್ತಿ ಮತ್ತು ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ರಾಮನಗರ ಜಿಲ್ಲೆಯ ವಿದ್ಯಾರ್ಥಿ ಮದನ್ ಕುಮಾರ್ ‘ಸುರಕ್ಷಿತ ವಿದ್ಯುತ್ ಸರಬರಾಜು’ ಮಾದರಿ ಬಗ್ಗೆ ತೀರ್ಪುಗಾರರಿಗೆ ತಾಂತ್ರಿಕ ಮಾಹಿತಿ ನೀಡಿದರು
ದಾವಣಗೆರೆಯಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಇನ್ ಸ್ಪೈರ್ ಪ್ರಶಸ್ತಿ ಮತ್ತು ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ರಾಮನಗರ ಜಿಲ್ಲೆಯ ವಿದ್ಯಾರ್ಥಿ ಮದನ್ ಕುಮಾರ್ ‘ಸುರಕ್ಷಿತ ವಿದ್ಯುತ್ ಸರಬರಾಜು’ ಮಾದರಿ ಬಗ್ಗೆ ತೀರ್ಪುಗಾರರಿಗೆ ತಾಂತ್ರಿಕ ಮಾಹಿತಿ ನೀಡಿದರು   

ದಾವಣಗೆರೆ: ಒಳ ಚರಂಡಿ ವ್ಯವಸ್ಥೆ ನಿರ್ವಹಣೆ ಕಷ್ಟಸಾಧ್ಯ ಕೆಲಸ... ನೀರಿನ ಮೂಲಗಳು ಕಲುಷಿತಗೊಳ್ಳಲು ಪ್ರಮುಖ ಕಾರಣಗಳಲ್ಲಿ ಇದೂ ಒಂದು... ಇದನ್ನೇ ಸಂಸ್ಕರಿಸಿ, ಕೃಷಿಗೆ ಬಳಸುವುದಲ್ಲದೇ, ವಿದ್ಯುತ್ ಉತ್ಪತ್ತಿ ಮಾಡಿದರೆ ಹೇಗೆ? ಅಂತಹ ಪ್ರಯತ್ನ ಮಾಡಿದರೆ ಚರಂಡಿ ನೀರಿನ ನಿರ್ವಹಣೆಗೆ ಪರಿಹಾರ ಸಿಗಬಲ್ಲುದು...

ಮಂಡ್ಯ ಜಿಲ್ಲೆಯ ಜವಾರಿ ಭಾಷೆಯಲ್ಲಿ ಇಂತಹ ಮಹತ್ತರ ತಾಂತ್ರಿಕ ವ್ಯವಸ್ಥೆ ಬಗ್ಗೆ ಮಾಹಿತಿ ನೀಡುವ ಮೂಲಕ ನೆರೆದವರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದು ಕೂಚಹಳ್ಳಿ ಶಾಲೆಯ ವಿದ್ಯಾರ್ಥಿ ಸುಮಂತ ಡಿ.ಗೌಡ.

ಎಲ್‌ಪಿಜಿ ಉತ್ಪಾದನೆ... ಆವಿಯಿಂದ ವಿದ್ಯುತ್... ಎಲೆಕ್ಟ್ರಿಕಲ್ ಪ್ರಸಿಪಿಟೇಟರ್... ಈ ಮೂರು ಮಾಹಿತಿ ಒದಗಿಸುವ ‘ಪರಿಸರ ಸ್ನೇಹಿ ಕಾರ್ಖಾನೆ’ ಶೀರ್ಷಿಕೆ ಹೊತ್ತ ವಿಜ್ಞಾನ ಮಾದರಿ ನೋಡುಗರ ಮನ ಸೆಳೆಯುವಂತಿತ್ತು... ತಾಂತ್ರಿಕತೆ ಬಗ್ಗೆ ವಿವರಿಸಿದ ಧಾರವಾಡ ಜಿಲ್ಲೆಯ ಯರೇಬೂದಿಹಾಳ್ ಗ್ರಾಮದ ಶಾಲೆ ವಿದ್ಯಾರ್ಥಿನಿ ವಿಜಯಲಕ್ಷ್ಮಿ ರ. ಮುದಹಳ್ಳಿ ಮಾದರಿ ವೀಕ್ಷಿಸಲು ಬಂದವರಿಗೆ ಪರಿಸರ ಪಾಠ ಮಾಡಿದಂತಿತ್ತು...

ರಾಮನಗರ ಜಿಲ್ಲೆಯಿಂದ ಬಂದಿದ್ದ ನಿವೇದಿತಾಳ ‘ಜಲ ಮರುಪೂರಣ’, ಕೋಲಾರ ಜಿಲ್ಲೆಯ ಕಲ್ಯಾಣ್ ಕುಮಾರನ ‘ವಾಹನ ಅಪಘಾತ ನಿಯಂತ್ರಿತ ಯಂತ್ರ’; ಅದೇ ಜಿಲ್ಲೆಯ ಅನಗ ಪಿ. ಚಿಕ್ಕಲ್ಕರ್ ರಚಿಸಿದ ‘ವಿಕೋಪಗಳನ್ನು ನಿರ್ವಹಿಸುವ ರೋಬಗಳ ರಚನೆ’, ಬೆಂಗಳೂರಿನ ಪಲ್ಲವಿ ಸಿ. ಶೇಖರ್ ಪ್ರಸ್ತುತಪಡಿಸಿದ ‘ಹಣ್ಣಿನ ತ್ಯಾಜ್ಯದಿಂದ ಎಥನಾಲ್ ಉತ್ಪಾದನೆ’, ಚಿತ್ರದುರ್ಗ ಜಿಲ್ಲೆಯ ಎಂ.ಎನ್. ಭರತ್‌ ಕುಮಾರ್ ತಯಾರಿಸಿರುವ ‘ಜಲಕೃಷಿ (ಹೈಡ್ರೋಪೋನಿಕ್ಸ್) ಹಾಗೂ  ಬೆಂಗಳೂರಿನ ಕ್ಯಾಥರಿನ್‌ ಪಬ್ಲಿಕ್‌ ಶಾಲೆ ವಿದ್ಯಾರ್ಥಿ ಕೇಶವ ಪ್ರದರ್ಶಿಸಿದ ‘ಮರಳಿನಿಂದ ವಿದ್ಯುತ್ ಉತ್ಪಾದನೆ’ ನೋಡುಗರ ಕೌತುಕ ಹೆಚ್ಚಿಸಿದವು.

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಗರದಲ್ಲಿ ಮೂರು ದಿನ ಏರ್ಪಡಿಸಿರುವ ರಾಜ್ಯಮಟ್ಟದ ಇನ್ ಸ್ಪೈರ್ ಅವಾರ್ಡ್ ಮತ್ತು ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ವೈವಿಧ್ಯಮಯ ವಿಜ್ಞಾನ ಮಾದಿಗಳ ಪುಟ್ಟ ವಿಜ್ಞಾನ ಪ್ರಪಂಚವೊಂದು ತೆರೆದುಕೊಂಡಿದ್ದ ಪರಿ ಇದು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಸಂಶೋಧನೆಯಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ರಾಜ್ಯದ ಪ್ರತಿ ಶಾಲೆಗಳ ಪ್ರತಿಭಾನ್ವಿತ ಇಬ್ಬರು ವಿದ್ಯಾರ್ಥಿಗಳಿಂದ ವಿಜ್ಞಾನ ಮಾದರಿ ಮಾಡಿಸಿದೆ. ವಿಜ್ಞಾನ ಮಾದರಿ ಮಾಡುವ ಒಬ್ಬ ವಿದ್ಯಾರ್ಥಿಗೆ ₨ 5 ಸಾವಿರ ಆರ್ಥಿಕ ಸಹಾಯ ನೀಡಿದೆ. ಅನಾವರಣಗೊಂಡ ಪುಟಾಣಿಗಳ ವಿಜ್ಞಾನ ಪ್ರಪಂಚದಲ್ಲಿ ಒಟ್ಟು 488 ವಿವಿಧ ವಿಜ್ಞಾನ ಮಾದರಿಗಳು ಪ್ರದರ್ಶನಗೊಂಡು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ತುಂಬಿತು. ಜತೆಗೆ ನೋಡುಗರನ್ನು ವೈಜ್ಞಾನಿಕ ಚಿಂತನೆಗೆ ಹಚ್ಚಿತು. ಧಾರವಾಡ, ಕೋಲಾರ, ಮಂಡ್ಯ, ರಾಮನಗರ, ಚಿತ್ರದುರ್ಗ, ಬೆಂಗಳೂರು ನಗರ ಒಟ್ಟು 6 ಜಿಲ್ಲೆಗಳಿಂದ 488 ವಿದ್ಯಾರ್ಥಿಗಳು ಭಾಗವಹಿಸಿದ್ದರು.

’ಈ ಪೈಕಿ 37 ಉತ್ತಮ ಮಾದರಿಗಳನ್ನು ಆಯ್ಕೆ ಮಾಡಿ ರಾಷ್ಟ್ರಮಟ್ಟದ ಪ್ರದರ್ಶನಕ್ಕೆ ಕಳುಹಿಸಿ ಕೊಡಲಾಗುವುದು’ ಎಂದು ನೋಡಲ್ ಅಧಿಕಾರಿ ಎಚ್.ಎಂ. ಪ್ರೇಮಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.