ADVERTISEMENT

ಬಿಎಸ್‌ವೈ–ಅನಂತ್ ಮಾತು ಅಸಲಿ: ವಿಧಿ ವಿಜ್ಞಾನ ಪ್ರಯೋಗಾಲಯ ವರದಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 19:52 IST
Last Updated 8 ಅಕ್ಟೋಬರ್ 2017, 19:52 IST
ಬಿಎಸ್‌ವೈ–ಅನಂತ್ ಮಾತು ಅಸಲಿ: ವಿಧಿ ವಿಜ್ಞಾನ ಪ್ರಯೋಗಾಲಯ ವರದಿ
ಬಿಎಸ್‌ವೈ–ಅನಂತ್ ಮಾತು ಅಸಲಿ: ವಿಧಿ ವಿಜ್ಞಾನ ಪ್ರಯೋಗಾಲಯ ವರದಿ   

ಬೆಂಗಳೂರು: ‘ಬಿಜೆಪಿ ವರಿಷ್ಠರಿಗೆ ಕಪ್ಪ ಕಾಣಿಕೆ ನೀಡಲಾಗಿದೆ ಎನ್ನಲಾದ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಎಚ್.ಎನ್‌. ಅನಂತಕುಮಾರ್‌ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ನಡುವೆ ನಡೆದಿರುವ ಮಾತುಕತೆ ಅಸಲಿ’ ಎಂದು ವಿಧಿವಿಜ್ಞಾನ ಪ್ರಯೋಗಾಲಯ ದೃಢಪಡಿಸಿದೆ.

ಈ ಇಬ್ಬರೂ ನಾಯಕರ ಮಾತುಕತೆ ಒಳಗೊಂಡಿರುವ ವಿಡಿಯೋ ಹಾಗೂ ಆಡಿಯೋ ಸಿ.ಡಿಯನ್ನು ಅಧ್ಯಯನ ಮಾಡಿ ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್‌) ನೀಡಿರುವ ವರದಿ ಇದೇ 4ರಂದು ಸೈಬರ್ ಕ್ರೈಂ ವಿಭಾಗಕ್ಕೆ ತಲುಪಿದೆ. ಈ ವರದಿಯನ್ನು ಸೋಮವಾರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಕ್ಕೆ ಕಳುಹಿಸುವ ಸಾಧ್ಯತೆಯಿದೆ ಎಂದು ಸೈಬರ್ ಕ್ರೈಂ ವಿಭಾಗದ ಮೂಲಗಳು ‘ಪ್ರಜಾವಾಣಿ’ ಗೆ ತಿಳಿಸಿವೆ.

ಎಸಿಬಿಯು ಎಫ್‌ಐಆರ್ ದಾಖಲಿಸಿದರೆ, ಸಚಿವ ಅನಂತಕುಮಾರ್ ಮತ್ತು ಯಡಿಯೂರಪ್ಪ ಸಂಕಷ್ಟಕ್ಕೆ ತುತ್ತಾಗುವ ಸಾಧ್ಯತೆ ಇದೆ.

ADVERTISEMENT

ಬಿಜೆಪಿಯ ಇಬ್ಬರೂ ನಾಯಕರ ಸಂಭಾಷಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಆರೋಪ, ಪ್ರತ್ಯಾರೋಪಗಳ ಸರಣಿಯ ಭಾಗ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್ ಅವರ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ ಸಮಯದಲ್ಲಿ ವಶಪಡಿಸಿಕೊಂಡಿದ್ದಾರೆ ಎನ್ನಲಾದ ಡೈರಿಯ ಆಯ್ದ ಭಾಗಗಳನ್ನು 2017ರ ಫೆಬ್ರುವರಿಯಲ್ಲಿ ಬಿಜೆಪಿ ನಾಯಕರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು. ಇದರಲ್ಲಿ ರಾಜ್ಯ ಕಾಂಗ್ರೆಸ್‌, ಹೈಕಮಾಂಡ್‌ನ ಪ್ರಮುಖ ನಾಯಕರಿಗೆ ಕಪ್ಪ ಕಾಣಿಕೆ ನೀಡಿರುವ  ವಿವರಗಳಿವೆ ಎಂದೂ ಅವರು ಆರೋಪಿಸಿದ್ದರು.

ಇದರ ಬೆನ್ನಲ್ಲೇ, ಫೆಬ್ರುವರಿ 12ರಂದು ನಡೆದ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ ಮತ್ತು ಅನಂತಕುಮಾರ್‌ ತಮ್ಮ ಪಕ್ಷದ ವರಿಷ್ಠರಿಗೆ ಕಪ್ಪ ಕಾಣಿಕೆ ನೀಡಿರುವ ಕುರಿತು ಮಾತುಕತೆಯಾಡಿದ್ದಾರೆ ಎನ್ನಲಾದ ವಿಡಿಯೋ–ಆಡಿಯೋ ಸಿ.ಡಿಗಳನ್ನು ಕಾಂಗ್ರೆಸ್‌ ನಾಯಕರು ಬಿಡುಗಡೆ ಮಾಡಿದ್ದರು. ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ ಸದಾನಂದಗೌಡ ಭಾಷಣ ಮಾಡುತ್ತಿದ್ದಾಗ, ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತಿದ್ದ ಇವರಿಬ್ಬರೂ ನಡೆಸಿದ್ದರೆನ್ನಲಾದ ಮಾತುಕತೆ ಧ್ವನಿ ಮತ್ತು ದೃಶ್ಯಗಳು ಮಾಧ್ಯಮಗಳ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು.

‘ಈ ವಿಡಿಯೋ ಅಸಲಿಯಲ್ಲ, ನಕಲಿ’ ಎಂದು ಬಿಜೆಪಿ ನಾಯಕರು ಪ್ರತಿಪಾದಿಸಿದ್ದರು. ‘ಸರ್ಕಾರವನ್ನು ಉರುಳಿಸಲು ಬಿಜೆಪಿ ನಡೆಸಿದ ಷಡ್ಯಂತ್ರ’ ಇದರಿಂದ ಬಯಲಾಗಿದೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದರು.

ಏತನ್ಮಧ್ಯೆ, ಕೆಪಿಸಿಸಿ ಕಾನೂನು ವಿಭಾಗದ ಅಧ್ಯಕ್ಷ ಸಿ.ಎಂ. ಧನಂಜಯ ಫೆಬ್ರುವರಿ 15ರಂದು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದರು. ಬಿಜೆಪಿಯ ಇಬ್ಬರು ನಾಯಕರು ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳ ಮುಂದೆ ಹಾಜರಾಗಿ ಧ್ವನಿ ಮಾದರಿಗಳನ್ನು ಪರೀಕ್ಷೆಗೆ ನೀಡಲು ನಿರಾಕರಿಸಿದ್ದರು. ಆನಂತರ, ಧ್ವನಿ ಮಾದರಿ ನೀಡುವಂತೆ ನಿರ್ದೇಶಿಸಬೇಕು ಎಂದು ಕಾಂಗ್ರೆಸ್ ನ್ಯಾಯಾಲಯದ ಮೊರೆ ಹೋಗಿತ್ತು. ಆನಂತರ ಧ್ವನಿ ಮಾದರಿ ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಿತ್ತು.

ಇಬ್ಬರೂ ಬಿಜೆಪಿ ನಾಯಕರ ವಿರುದ್ಧ ಸೈಬರ್ ಕ್ರೈಂ ವಿಭಾಗದ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಿಜೆಪಿ ವರಿಷ್ಠರಿಗೆ ಕಪ್ಪ ಕಾಣಿಕೆ ಕೊಟ್ಟಿದ್ದಾರೆ ಎನ್ನಲಾದ ಆಪಾದನೆ ಇರುವುದರಿಂದ ಪ್ರಕರಣವನ್ನು ಎಸಿಬಿಗೆ ವರ್ಗಾವಣೆ ಮಾಡುವ ಸಂಭವವಿದೆ ಎಂದು ಮೂಲಗಳು ಹೇಳಿವೆ.

* ವಿನಾಶಕಾಲೇ ವಿಪರೀತ  ಬುದ್ದಿ ಎಂಬಂತೆ ಕಾಂಗ್ರೆಸ್‌ ನೇತೃತ್ವದ ಸರ್ಕಾರ ವರ್ತಿಸುತ್ತಿದೆ. ಈಗಾಗಲೇ 52 ಕೇಸ್ ಹಾಕಿದ್ದಾರೆ. ಇನ್ನೂ  ನೂರು ಕೇಸು ಹಾಕಲಿ. ನಾನು ಎದುರಿಸುತ್ತೇನೆ

– ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ

* ಬಿಜೆಪಿಯವರು ದೆಹಲಿ, ಗುಜರಾತ್‌ನ ನಾಯಕರಿಗೆ ಕಪ್ಪ ಸಲ್ಲಿಸಿರುವುದು ನಿಜ. ಇದರ ಬಗ್ಗೆ  ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆದರೆ ಸತ್ಯ ಹೊರಬರಲಿದೆ

–ವಿ.ಎಸ್‌. ಉಗ್ರಪ್ಪ, ವಿಧಾನಪರಿಷತ್ತಿನ ಕಾಂಗ್ರೆಸ್ ಸದಸ್ಯ

ಮಾತನಾಡಿದ್ದೇನು?

ಅನಂತಕುಮಾರ್: ಅವರೂ ಕೊಟ್ಟಿದ್ದಾರೆ, ನಾನೂ ಕೊಟ್ಟಿದ್ದೇನೆ ಎಂದು ಹೇಳಿದಂಗಾಯ್ತು ಸಿ.ಎಂ

ಯಡಿಯೂರಪ್ಪ: (ನಗು)

ಅನಂತಕುಮಾರ್‌: ನೀವು ಇದ್ದಾಗ ಹೈಕಮಾಂಡ್‌ಗೆ ಕೊಟ್ಟಿದ್ದೀರಿ, ನಾನೂ ಕೊಟ್ಟಿದ್ದೇನೆ. ಆದರೆ, ಒಂದು ಸಾವಿರ ಕೋಟಿಯೆಲ್ಲ ಕೊಟ್ಟಿಲ್ಲ.

ಅನಂತಕುಮಾರ್‌: ನೀವು ಆಗ ಕೊಟ್ಟಿದ್ದೀರಲ್ಲಾ, ಅದಕ್ಕೆ ಇವರೂ ಕೊಡುತ್ತಿದ್ದಾರಂತೆ.

ಯಡಿಯೂರಪ್ಪ: (ಮೌನ)

ಅನಂತಕುಮಾರ್‌: ಅಂದರೆ, ಕೊಟ್ಟಿರೋದನ್ನು ಒಪ್ಪಿಕೊಂಡಂತಾಯ್ತಲ್ಲ.

ಯಡಿಯೂರಪ್ಪ: ಆದ್ರೆ, ಕೊಟ್ಟಿರುವುದನ್ನು ಯಾರಾದ್ರೂ ಬರೆದುಕೊಂಡಿರುತ್ತಾರಾ (ನಗು).

ಅನಂತಕುಮಾರ್‌: ಕೆಸರಿಗೆ ಕಲ್ಲು ಹೊಡೆದರೆ ಅಂಟಿಕೊಂಡು ಕೂರುತ್ತೆ. ಸಿ.ಎಂ ಸಾವಿರ ಕೋಟಿ ಕೊಟ್ಟಿಲ್ಲ ಅಂತ ಯಾರೂ ಒಪ್ಪಿಕೊಳ್ಳಲ್ಲ. ಎಲ್ಲರೂ ಸಿ.ಎಂ ಹಣ ಕೊಟ್ಟಿದ್ದಾರೆ ಎಂದೇ ತಿಳಿದುಕೊಳ್ತಾರೆ.

ಯಡಿಯೂರಪ್ಪ: ಡೈರಿ ಆಚೆ ಬರಲಿ, ನೋಡೋಣ.

ಅನಂತಕುಮಾರ್‌: ಚುನಾವಣೆ ತನಕ ಜನರಿಗೆ ಹೀಗೆ ಅವರು (ಸಿದ್ದರಾಮಯ್ಯ) ಉತ್ತರ ಕೊಡುತ್ತಾ ಹೀಗೆ ತಿರುಗಾಡಲಿ. . .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.