ADVERTISEMENT

ಬಿಎಸ್‌ವೈ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 18:35 IST
Last Updated 14 ಸೆಪ್ಟೆಂಬರ್ 2011, 18:35 IST

ಬೆಂಗಳೂರು: `ನನ್ನನ್ನು ಅಧಿಕಾರದಿಂದ ಕೆಳಗಿಳಿಸುವ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಆತುರದ ತೀರ್ಮಾನ ತೆಗೆದುಕೊಂಡಿತು~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಸಮಾಧಾನ ಹೊರ ಹಾಕಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಪಕ್ಷದ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಹಾಗೂ ಪ್ರಮುಖರ ಸಭೆಯಲ್ಲಿ ಇದೇ ಮೊದಲ ಬಾರಿಗೆ ಪಕ್ಷದ ಹೈಕಮಾಂಡ್ ವಿರುದ್ಧ ಅವರು ಟೀಕೆ ಮಾಡಿದರು ಎಂದು ಗೊತ್ತಾಗಿದೆ.

`ರಾಜಕೀಯದಲ್ಲಿ ಸಹಜವಾಗಿಯೇ ಬರುವ ಆರೋಪಗಳಿಂದ ಹೈಕಮಾಂಡ್ ಆತುರದ ತೀರ್ಮಾನ ತೆಗೆದುಕೊಂಡಿತು. ಕನಿಷ್ಠ 2-3 ತಿಂಗಳು ಅವಕಾಶ ಕೊಟ್ಟಿದ್ದರೆ, ನನ್ನ ಮೇಲಿನ ಎಲ್ಲ ಆರೋಪಗಳಿಂದ ಮುಕ್ತನಾಗುತ್ತಿದ್ದೆ~ ಎಂದು ಹೇಳಿದರು.

`ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಚುನಾವಣೆ ನಡೆಸಿ, ಪಕ್ಷದ ಹೈಕಮಾಂಡ್ ರಾಜ್ಯ ಬಿಜೆಪಿಯಲ್ಲಿ ಎರಡು ಬಣಗಳನ್ನು ಸೃಷ್ಟಿಸಿತು. ಸಂಸತ್‌ನಲ್ಲಿ ಮಾತನಾಡಲು ಸಂಸದರಿಗೆ ಅವಕಾಶ ನೀಡುತ್ತಿಲ್ಲ~ ಎಂದೂ ವರಿಷ್ಠರ ವಿರುದ್ಧ ಹರಿಹಾಯ್ದರು ಎನ್ನಲಾಗಿದೆ.

`ನನ್ನನ್ನು ಅಧಿಕಾರದಿಂದ ಕೆಳಗಿಳಿಸಿದ ರೀತಿ ಸರಿ ಇಲ್ಲ. ಕನಿಷ್ಠ ಗೌರವ ನೀಡಲಿಲ್ಲ. ದೆಹಲಿಯಿಂದ ಬೆಂಗಳೂರಿಗೆ ಬರುವ ವೇಳೆಗೆ ನನ್ನನ್ನು ಕಿತ್ತೊಗೆಯುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಇದಲ್ಲದೆ, ಒಟ್ಟು ಮೂರು ಬಾರಿ ನನ್ನನ್ನು ಅಧಿಕಾರದಿಂದ ಇಳಿಸುವ ಪ್ರಯತ್ನ ನಡೆಯಿತು. ಇದೆಲ್ಲವೂ ಒಳ್ಳೆಯ ಬೆಳವಣಿಗೆ ಅಲ್ಲ~ ಎಂದು ಆಕ್ಷೇಪಿಸಿದರು.

`ಇಷ್ಟಾದರೂ ನಾನು ಪಕ್ಷದಲ್ಲೇ ಇದ್ದು, ಪಕ್ಷಕ್ಕಾಗಿ ದುಡಿಯುವೆ. ಕೊಪ್ಪಳ ಉಪಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡುವೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ~ ಎಂದು ಮನವಿ ಮಾಡಿದರು. ಯಡಿಯೂರಪ್ಪ ಮಾತನಾಡಿದಾಗ ಪಕ್ಷದ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಇರಲಿಲ್ಲ.

ನಂತರ, ಪಕ್ಷದ ವಕ್ತಾರ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ಕೊಪ್ಪಳ ಚುನಾವಣೆ ಮತ್ತು ವಿಧಾನ ಪರಿಷತ್ತಿಗೆ ಜೂನ್‌ನಲ್ಲಿ ನಡೆಯುವ ಪದವೀಧರರ ಕ್ಷೇತ್ರದ ಚುನಾವಣೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಹೇಳಿದರು.

ಕೊಪ್ಪಳ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಖಚಿತ ಎಂದು ಹೇಳಿದ ಅವರು ಪ್ರಚಾರ ತಂತ್ರದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದರು.

ಈ ಚುನಾವಣೆ ನಂತರ ವಿಭಾಗವಾರು ಸಮಾವೇಶಗಳನ್ನು ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಎಲ್ಲಿ, ಯಾವಾಗ ಸಭೆ ನಡೆಸಬೇಕು ಎಂಬುದರ ವಿವರಗಳನ್ನು ನಂತರದ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದರು.

ವಿಧಾನ ಪರಿಷತ್ತಿನ ಪದವೀಧರರ ಕ್ಷೇತ್ರದ ಐದು ಸ್ಥಾನಗಳಿಗೆ ಜೂನ್‌ನಲ್ಲಿ ಚುನಾವಣೆ ನಡೆಯಲಿದ್ದು, ಅದರ ಪೂರ್ವ ಸಿದ್ಧತೆ ಕುರಿತೂ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಹೇಳಿದರು.

ಮಾಜಿ ಸಚಿವ ಬಿ.ಶ್ರೀರಾಮುಲು ಆತುರದ ನಿರ್ಧಾರ ಕೈಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದನ್ನು ಅಂಗೀಕರಿಸಬಾರದು ಎಂದು ಪಕ್ಷ ಹೇಳಿದೆ. ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ವಿರುದ್ಧದ ಆರೋಪಗಳ ಕುರಿತು ಕೇಳಿದ ಪ್ರಶ್ನೆಗೆ `ಅವರ ವಿರುದ್ಧ ಇರುವ ಆರೋಪಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಯಾವ ವರದಿಯೂ ಬಂದಿಲ್ಲ. ಬಂದ ನಂತರ ಆ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ~ ಎಂದರು.

ಪಕ್ಷದ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರ ರಥಯಾತ್ರೆ ಇನ್ನೂ ದೂರ ಇದ್ದು, ಅದರ ವಿವರ ಬಂದ ನಂತರ ಆ ಕುರಿತು ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಚಿವ ಜಗದೀಶ ಶೆಟ್ಟರ್ ಮತ್ತಿತರ ಮುಖಂಡರು ಹಾಜರಿದ್ದರು.

ಗದ್ಗದಿತರಾದ ಸಿಎಂ
ಬೆಂಗಳೂರು:
ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಅವರನ್ನು ನೆನಪಿಸಿಕೊಂಡು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಗದ್ಗದಿತರಾದ ಪ್ರಸಂಗ ಬುಧವಾರ ನಡೆಯಿತು.

ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, `2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಾಗ ವಾಜಪೇಯಿ ಅವರು, ನನ್ನನ್ನು ಮತ್ತು ಯಡಿಯೂರಪ್ಪ ಅವರನ್ನು ಕರೆದು ಅಭಿನಂದಿಸಿದ್ದರು. ಬೆನ್ನು ತಟ್ಟಿದ್ದರು. ಆದರೆ, ಇತ್ತೀಚೆಗೆ ಅವರನ್ನು ನೋಡಲು ದೆಹಲಿಗೆ ಹೋದಾಗ ಅವರು ಯಾವ ಮಾತನ್ನೂ ಆಡಲಿಲ್ಲ~ ಎಂದು ಹೇಳಿ ದುಃಖಿತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.