ADVERTISEMENT

ಬಿಎಸ್‌ವೈ ಜೊತೆ ಜನರೂ ಗೈರು!

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 19:30 IST
Last Updated 13 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ವಕೀಲ ಸಿರಾಜಿನ್ ಬಾಷಾ ಅವರು ಸಲ್ಲಿಸಿರುವ ಮೂರು ಮತ್ತು ನಾಲ್ಕನೆಯ ಖಾಸಗಿ ದೂರಿನ ಕುರಿತ ವಿಚಾರಣೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯದ ಎದುರು ಮಂಗಳವಾರ ಹಾಜರಾಗಲಿಲ್ಲ.

ಯಡಿಯೂರಪ್ಪ ಇದುವರೆಗೆ ಎರಡು ಬಾರಿ ಲೋಕಾಯುಕ್ತ ನ್ಯಾಯಾಲಯದ ಎದುರು ಹಾಜರಾಗಿದ್ದಾರೆ. ಕಳೆದ ಎರಡು ಬಾರಿ ಅವರು ಹಾಜರಾಗಿದ್ದಾಗ ನ್ಯಾಯಾಲಯದ ಎದುರು ಭಾರಿ ಜನಜಂಗುಳಿ ಸೇರಿತ್ತು. ಆದರೆ ಮಂಗಳವಾರ ಅಂಥ ಯಾವುದೇ ದೃಶ್ಯ ಕಂಡುಬರಲಿಲ್ಲ.

ಭದ್ರತೆಗೆ ನಿಯೋಜಿತರಾಗಿದ್ದ ಕೆಲವು ಮಂದಿ ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಹೊರತುಪಡಿಸಿದರೆ ನ್ಯಾಯಾಲಯದ ಎದುರು ಸಾರ್ವಜನಿಕರ ಸಂಖ್ಯೆ ಕಡಿಮೆಯಾಗಿತ್ತು. `ದಿನಕಳೆದಂತೆ ಜನರಿಗೂ ಆಸಕ್ತಿ ಕಡಿಮೆಯಾಗುತ್ತದೆ~ ಎಂದು ಭದ್ರತೆಗಾಗಿ ನಿಯೋಜಿತರಾಗಿದ್ದ ಪೊಲೀಸ್ ಸಿಬ್ಬಂದಿ ತಮ್ಮಲ್ಲೇ ಮಾತನಾಡಿಕೊಂಡಿದ್ದು ಕೇಳಿಬಂತು.

ಬಾಂಬ್ ಅಲ್ಲ, ಬ್ರಷ್!
ಪ್ರಜಾವಾಣಿ ವಾರ್ತೆ
ಬೆಂಗಳೂರು:
ಬಿ.ಎಸ್. ಯಡಿಯೂರಪ್ಪ ಅವರ ಬರುವಿಕೆಗಾಗಿ ಮಾಧ್ಯಮ ಪ್ರತಿನಿಧಿಗಳು ನ್ಯಾಯಾಲಯದ ಎದುರು ಕಾಯುತ್ತ ನಿಂತಿದ್ದರು. ಆ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ಒಂದರ ಹಿಂಬದಿಯ ಸೀಟಿನಲ್ಲಿ ನೀಲಿ ಬಣ್ಣದ ಪ್ಲಾಸ್ಟಿಕ್ ಚೀಲ ಇಟ್ಟಿದ್ದರು.

ಕೆಲ ಹೊತ್ತು ಆ ಬೈಕ್ ಮತ್ತು ಪ್ಲಾಸ್ಟಿಕ್ ಚೀಲ ಅಲ್ಲೇ ಇದ್ದ ಕಾರಣ ಅನುಮಾನಗೊಂಡ ಮಾಧ್ಯಮ ಪ್ರತಿನಿಧಿಯೊಬ್ಬರು ನ್ಯಾಯಾಲಯದ ಭದ್ರತೆಗೆ ನಿಯೋಜಿತರಾಗಿದ್ದ ಪೊಲೀಸರಿಗೆ ವಿಷಯ ತಿಳಿಸಿದರು. ಕೂಡಲೇ ಸ್ಥಳಕ್ಕೆ ಬಂದ ಹಲಸೂರು ಗೇಟ್ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಒಬ್ಬರು ಆ ಚೀಲವನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ತೆರೆದರು. ಅದರಲ್ಲಿದ್ದಿದ್ದು ಬಣ್ಣ ಬಳಿಯಲು ಬಳಸುವ ಬ್ರಷ್ ಎಂದು ತಿಳಿದಾಗ ಅಲ್ಲಿದ್ದವರ ಮುಖದಲ್ಲಿ ನಗು ಮೂಡಿತು.

ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಓಡಿಬಂದ ಬೈಕ್ ಮಾಲೀಕ ಶಂಕರ ನಾಯ್ಕ, `ಅಯ್ಯಯ್ಯೋ ಎಲ್ಲ ತೆರೆದುಬಿಟ್ಟಿದ್ದಾರೆ~ ಎಂದು ಕೂಗಿದರು. `ಬೈಕ್ ಮತ್ತು ಚೀಲವನ್ನು ಹಾಗೆ ಬಿಟ್ಟು ಹೋಗುವುದಾ~ ಎಂದು ಪೊಲೀಸರು ಗದರಿದಾಗ ನಾಯ್ಕ ಅವರ ಮುಖದಲ್ಲೂ ನಗು ಅರಳಿತು!
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT