ADVERTISEMENT

ಬಿಎಸ್‌ವೈ ಪರ ಮುಂದುವರಿದ ಒತ್ತಡ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2012, 19:30 IST
Last Updated 9 ಮಾರ್ಚ್ 2012, 19:30 IST

ಬೆಂಗಳೂರು: ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಅಧಿಕಾರದಲ್ಲಿ ಮುಂದುವರಿಯಲು ಕಸರತ್ತು ನಡೆಸುತ್ತಿದ್ದರೆ; ಮತ್ತೊಂದು ಕಡೆ ಅವರನ್ನು ಕೆಳಗಿಳಿಸಿ, ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಬೇಕು ಎಂದು ಅವರ ಬೆಂಬಲಿಗರು ಗೋವಾದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಒತ್ತಡ ಹಾಕಿದ್ದಾರೆ.

ಆದರೆ, ಒತ್ತಡ ತಂತ್ರಗಳಿಗೆ ಮಣಿಯದ ಗಡ್ಕರಿ ಅವರು ನಾಯಕತ್ವ ಬದಲಾವಣೆ ಸದ್ಯಕ್ಕೆ ಇಲ್ಲ ಎಂದು ನೇರವಾಗಿಯೇ ಯಡಿಯೂರಪ್ಪ ಬೆಂಬಲಿಗರಿಗೆ ಹೇಳಿ ಕಳುಹಿಸಿದರು ಎಂದು ಮೂಲಗಳು ತಿಳಿಸಿವೆ.

ಗೋವಾ ಮುಖ್ಯಮಂತ್ರಿಯಾಗಿ ಬಿಜೆಪಿಯ ಮನೋಹರ್ ಪರಿಕ್ಕರ್ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಸಮಾರಂಭದಲ್ಲಿ ಗಡ್ಕರಿ, ಎಲ್.ಕೆ.ಅಡ್ವಾಣಿ, ಸುಷ್ಮಾ ಸ್ವರಾಜ್ ಸೇರಿದಂತೆ ಬಿಜೆಪಿಯ ಇತರ ಪ್ರಮುಖರು ಭಾಗವಹಿಸಿದ್ದರು.

ಈ ಸಲುವಾಗಿಯೇ ಸದಾನಂದ ಗೌಡ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಕೂಡ ಅಲ್ಲಿಗೆ ತೆರಳಿದರು. ಈ ವಿಷಯ ಗೊತ್ತಾಗಿ ಯಡಿಯೂರಪ್ಪ ಬೆಂಬಲಿಗರು ಕೂಡ ಗೋವಾಕ್ಕೆ ದೌಡಾಯಿಸಿದರು. ಸಚಿವರಾದ ಬಸವರಾಜ ಬೊಮ್ಮಾಯಿ, ಉಮೇಶ ಕತ್ತಿ, ಮುರುಗೇಶ ನಿರಾಣಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರೂ ಅಲ್ಲಿಗೆ ತೆರಳಿದ ನಿಯೋಗದಲ್ಲಿದ್ದರು.

ಇದೇ 11ರಂದು ಹುಬ್ಬಳ್ಳಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಹೋಗಿದ್ದಾಗಿ ಹೇಳಿದರೂ ವಾಸ್ತವವಾಗಿ ಅವರು ಹೋಗಿದ್ದು, ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಬೇಕೆಂದು ಒತ್ತಡ ಹೇರಲು. `ಯಡಿಯೂರಪ್ಪ ಆರೋಪ ಮುಕ್ತರಾಗಿದ್ದು, ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಬೇಕು. ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು~ ಎಂದು ಈ ಸಚಿವರು ಗಡ್ಕರಿ ಅವರಿಗೆ ಮನವಿ ಮಾಡಿದರು.

ಇದಕ್ಕೆ ಗಡ್ಕರಿ ಅವರಿಂದ ಸಕಾರಾತ್ಮಕ ಉತ್ತರ ಸಿಗಲಿಲ್ಲ. `ರಾಜ್ಯ ರಾಜಕಾರಣದ ಪೂರ್ಣ ಮಾಹಿತಿ ಇದ್ದು, ನಾಯಕತ್ವ ಬದಲಾವಣೆ ವಿಷಯದಲ್ಲಿ ಗಡುವು ವಿಧಿಸುವುದನ್ನು ಸಹಿಸುವುದಿಲ್ಲ~ ಎಂದು ಎಚ್ಚರಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ. ಮಾಧ್ಯಮಗಳಿಗೆ ಪ್ರತಿನಿತ್ಯ ಹೇಳಿಕೆಗಳನ್ನು ನೀಡುವ ಸಚಿವರು ಮತ್ತು ಶಾಸಕರ ನಡತೆ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.

ಯಡಿಯೂರಪ್ಪ ಬೆಂಬಲಿಗರ ಭೇಟಿ ನಂತರ ರಾತ್ರಿ ಸದಾನಂದಗೌಡ ಮತ್ತು ಈಶ್ವರಪ್ಪ ಅವರ ಜತೆ ಗಡ್ಕರಿ ಮಾತುಕತೆ ನಡೆಸಿದರು. ರಾಜ್ಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದರು ಎನ್ನಲಾಗಿದೆ.
ಹೈಕೋರ್ಟ್, ಯಡಿಯೂರಪ್ಪ ವಿರುದ್ಧದ ಎಫ್‌ಐಆರ್ ರದ್ದು ಮಾಡಿದ್ದು, ಅದನ್ನು ಹೊರತುಪಡಿಸಿ ಅವರ ವಿರುದ್ಧ ಇರುವ ಇತರ ಪ್ರಕರಣಗಳ ಬಗ್ಗೆಯೂ ಚರ್ಚೆ ನಡೆಸಿದರು ಎಂದು ಗೊತ್ತಾಗಿದೆ. ಸುಪ್ರೀಂಕೋರ್ಟ್ ನೇಮಿಸಿರುವ ಉನ್ನತಾಧಿಕಾರ ಸಮಿತಿ (ಸಿಇಸಿ) ವಿಚಾರಣೆ ಇದೇ 16ರಂದು ಇದ್ದು, ಅದು ಯಾವ ರೀತಿಯ ಶಿಫಾರಸುಗಳನ್ನು ಮಾಡಬಹುದು ಎಂಬುದರ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ.

ಇದಕ್ಕೂ ಮುನ್ನ ಈ ಇಬ್ಬರೂ ಅಡ್ವಾಣಿ ಜತೆಗೂ ಮಾತುಕತೆ ನಡೆಸಿದರು. ಪ್ರಮಾಣ ವಚನ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಕೇವಲ ಹತ್ತು ನಿಮಿಷಗಳ ಕಾಲ ಸಮಾಲೋಚನೆ ನಡೆಸಿದ್ದು, ರಾಜ್ಯದ ಬಿಜೆಪಿಯಲ್ಲಿನ ಬೆಳವಣಿಗೆಗಳ ಬಗ್ಗೆ ಅಡ್ವಾಣಿ ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.

ಹುಬ್ಬಳ್ಳಿಗೆ ಇಲ್ಲ: ಹುಬ್ಬಳ್ಳಿ ಕಾರ್ಯಕ್ರಮಕ್ಕೆ ತಾವು ಬರುವುದಿಲ್ಲ ಎಂದು ಗಡ್ಕರಿ ಅವರು ನೇರವಾಗಿಯೇ ಹೇಳಿದರು ಎನ್ನಲಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.