ADVERTISEMENT

ಬಿಎಸ್‌ವೈ, ಪುತ್ರರಿಗೆ ನಿರ್ಣಾಯಕ ದಿನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 19:30 IST
Last Updated 14 ಅಕ್ಟೋಬರ್ 2011, 19:30 IST

ಬೆಂಗಳೂರು: ಭೂಹಗರಣದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜಾಮೀನು ಕುರಿತಾದ ತೀರ್ಪನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಶನಿವಾರ ಪ್ರಕಟಿಸಲಿದೆ.

ಇವರ ಜೊತೆ, ಇದೇ ಹಗರಣದಲ್ಲಿ ಆರೋಪಿಗಳಾಗಿರುವ ಅವರ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಶಾಸಕರಾದ ಹೇಮಚಂದ್ರ ಸಾಗರ್, ಕೃಷ್ಣಯ್ಯ ಶೆಟ್ಟಿ ಸೇರಿದಂತೆ ಇತರ ಆರೋಪಿಗಳ ಕುರಿತಾದ ಆದೇಶವೂ ಪ್ರಕಟಗೊಳ್ಳಲಿದೆ.
 
ನಿರೀಕ್ಷಣಾ ಜಾಮೀನು ಕೋರಿ ಇವರೆಲ್ಲರೂ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ಆದೇಶ ಹೊರಡಿಸಲಿದ್ದಾರೆ.

ಎಲ್ಲ ಆರೋಪಿಗಳೂ ಆದೇಶ ಹೊರಡಿಸುವ ದಿನ ಕಡ್ಡಾಯವಾಗಿ ಹಾಜರು ಇರಲೇಬೇಕು ಎಂದು ನ್ಯಾಯಾಧೀಶರು ಕಳೆದ ಬಾರಿ ತಿಳಿಸಿರುವ ಹಿನ್ನೆಲೆಯಲ್ಲಿ ಪ್ರಕರಣ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ವಕೀಲ ಸಿರಾಜಿನ್ ಬಾಷಾ ದಾಖಲು ಮಾಡಿರುವ ಐದು ಪ್ರತ್ಯೇಕ ದೂರುಗಳ ಪೈಕಿ 2 ಮತ್ತು 3ನೇ ದೂರಿನ ಪ್ರಕರಣ ಇದಾಗಿದೆ.

ಕುತೂಹಲದ ಬೆಳವಣಿಗೆ: ಈ ಮಧ್ಯೆ, ಶುಕ್ರವಾರ ಹೈಕೋರ್ಟ್‌ನಲ್ಲಿ ಕುತೂಹಲದ ಬೆಳವಣಿಗೆಯೊಂದು ನಡೆದಿದೆ. ಯಡಿಯೂರಪ್ಪನವರ ಪರ ಆದೇಶ ಹೊರಡಿಸಿದ್ದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಈ ಪ್ರಕರಣದ ವಿಚಾರಣೆಯನ್ನು ಮುಂದುವರಿಸದಂತೆ ಕೋರಿ ಬಾಷಾ ಅವರು ನ್ಯಾ.ಪಾಟೀಲ್ ಅವರ ಮುಂದೆ ಪ್ರಮಾಣ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ನ್ಯಾ.ಪಾಟೀಲ್ ಮಧ್ಯಂತರ ತಡೆ ನೀಡಿದ್ದರು. ಇವರು ಹೊರಡಿಸಿದ್ದ ಆದೇಶಕ್ಕೆ ವಿಭಾಗೀಯ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಆದೇಶವನ್ನು ರದ್ದು ಮಾಡಿತ್ತು. ಆದರೆ ಈ ಪ್ರಕರಣದ ಅಂತಿಮ ವಿಚಾರಣೆ ನ್ಯಾ. ಪಾಟೀಲ್ ಅವರ ಮುಂದೆಯೇ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಬೇರೆ ನ್ಯಾಯಮೂರ್ತಿಗಳಿಗೆ ಪ್ರಕರಣವನ್ನು ವರ್ಗಾಯಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಮನವಿಗೆ ಆಕ್ಷೇಪ: ಇದಕ್ಕೆ ಯಡಿಯೂರಪ್ಪ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.
 
`ನ್ಯಾಯಮೂರ್ತಿಗಳ ಬದಲಾವಣೆಗೆ ಕೋರುವುದು ನ್ಯಾಯಾಂಗ ನಿಂದನೆಗೆ ಸಮ. ಈ ಹಿನ್ನೆಲೆಯಲ್ಲಿ ಬಾಷಾ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲು ಮಾಡಬೇಕು~ ಎಂದು ವಾದಿಸಿದರು.
 
ಬಾಷಾ ಅವರ ಮನವಿಗೆ ಆಕ್ಷೇಪಣೆ ಸಲ್ಲಿಸಲು ತಮಗೆ ಕಾಲಾವಕಾಶ ಬೇಕು ಎಂದು ಅವರು ಕೋರಿದರು. ಪ್ರಮಾಣ ಪತ್ರ ಕುರಿತಾಗಿ ನ್ಯಾ.ಪಾಟೀಲ್ ಶನಿವಾರ ಆದೇಶ ಹೊರಡಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.