ADVERTISEMENT

ಬಿಎಸ್‌ವೈ ಬಿಡುಗಡೆ- ಇಂದು ತೀರ್ಪು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2011, 19:30 IST
Last Updated 3 ನವೆಂಬರ್ 2011, 19:30 IST
ಬಿಎಸ್‌ವೈ ಬಿಡುಗಡೆ- ಇಂದು ತೀರ್ಪು
ಬಿಎಸ್‌ವೈ ಬಿಡುಗಡೆ- ಇಂದು ತೀರ್ಪು   

ಬೆಂಗಳೂರು: ಭೂಹಗರಣದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರಿಗೆ ಹೈಕೋರ್ಟ್‌ನಿಂದ  ಗುರುವಾರ ಜಾಮೀನು ದೊರೆತರೂ ಬಿಡುಗಡೆ ಭಾಗ್ಯ ಮಾತ್ರ ದೊರೆತಿಲ್ಲ!

- ಕಾರಣ, ದೂರುದಾರ ವಕೀಲ ಸಿರಾಜಿನ್ ಬಾಷಾ ಅವರು ದಾಖಲು ಮಾಡಿರುವ ಎರಡನೇ ದೂರಿಗೆ ಸಂಬಂಧಿಸಿದಂತೆ ಅವರಿಗೆ ಷರತ್ತುಬದ್ಧ ಜಾಮೀನು ದೊರೆತಿದ್ದು, ಮೂರನೇ ದೂರಿನ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.

ಶುಕ್ರವಾರ ಬಾಷಾ ಪರ ವಕೀಲರು ವಾದ ಮುಗಿಸಲಿದ್ದು, ಆದೇಶದ ಉಕ್ತಲೇಖನ (ಡಿಕ್ಟೇಷನ್) ಆರಂಭ ಆಗಲಿದೆ. ಮಧ್ಯಾಹ್ನದ ವೇಳೆ ಯಡಿಯೂರಪ್ಪನವರ ಜೈಲುವಾಸದ ಭವಿಷ್ಯ ನಿರ್ಧಾರ ಆಗುವ ಸಾಧ್ಯತೆ ಇದೆ.

ಕೇರಳ ಹೈಕೋರ್ಟ್‌ಗೆ ವರ್ಗಾವಣೆಗೊಂಡಿರುವ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು ಅವರಿಗೆ ಮಧ್ಯಾಹ್ನ ಬೀಳ್ಕೊಡುಗೆ ಸಮಾರಂಭ ಇರುವ ಕಾರಣ, ಮಧ್ಯಾಹ್ನ ಕೋರ್ಟ್ ಕಲಾಪ ನಡೆಯುವುದಿಲ್ಲ. ಒಂದು ವೇಳೆ ಯಡಿಯೂರಪ್ಪನವರ ಪ್ರಕರಣದ ಉಕ್ತಲೇಖನ ಮಧ್ಯಾಹ್ನದ ವೇಳೆಗೆ ಮುಗಿಯದಿದ್ದರೆ, ಸೋಮವಾರವರೆಗೆ ತೀರ್ಪಿಗಾಗಿ ಕಾಯಬೇಕಿದೆ. ಇವರ ಜೊತೆ ಇತರ ಆರೋಪಿಗಳಾದ ಶಾಸಕರಾದ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಮತ್ತು ಹೇಮಚಂದ್ರ ಸಾಗರ್ ಅವರ ಭವಿಷ್ಯವೂ ನಿರ್ಧಾರವಾಗಲಿದೆ.

`ದೂರುದಾರ ಬಾಷಾ ಅವರು ಸಲ್ಲಿಸಿರುವ ದಾಖಲೆ ಒಂದರ ಆಧಾರದ ಮೇಲೆ ಜಾಮೀನು ಮಂಜೂರು ಮಾಡದೇ ಇರುವುದು ಸರಿಯಲ್ಲ. ಸಾಕ್ಷಿಗಳ ವಿಚಾರಣೆ  ಸೇರಿದಂತೆ ಆರೋಪ ಸಾಬೀತುಪಡಿಸಲು ಹಲವು ಪ್ರಕ್ರಿಯೆ ನಡೆಯಬೇಕಿದೆ. ಆದುದರಿಂದ ಈ ಹಂತದಲ್ಲಿಯೇ ಜಾಮೀನು ನಿರಾಕರಣೆ ಸರಿಯಲ್ಲ~ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

5 ಲಕ್ಷ ರೂಪಾಯಿ ಬಾಂಡ್, ಅಷ್ಟೇ ಮೊತ್ತದ ಎರಡು ಭದ್ರತೆ ನೀಡುವಂತೆ, ಸಾಕ್ಷ್ಯ ನಾಶಪಡಿಸದಂತೆ, ಲೋಕಾಯುಕ್ತ ವಿಶೇಷ ಕೋರ್ಟ್ ಅನುಮತಿ ಪಡೆಯದೆ ದೇಶ ಬಿಟ್ಟು ಹೋಗದಂತೆ, ಯಾವುದೇ ಅಪರಾಧ ಎಸಗದಂತೆ ಆದೇಶಿಸಲಾಗಿದೆ. ಇದಾವುದೇ ಷರತ್ತನ್ನು ಉಲ್ಲಂಘನೆ ಮಾಡಿದರೆ ಜಾಮೀನು ರದ್ದು ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.

ಅವಧಿ ವಿಸ್ತರಣೆ: ಈ ಮಧ್ಯೆ, ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ ಸೇರಿದಂತೆ ಇತರ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಇದೇ 15ರವರೆಗೆ ವಿಸ್ತರಿಸಿ ಲೋಕಾಯುಕ್ತ ಕೋರ್ಟ್ ಆದೇಶ ಹೊರಡಿಸಿದೆ. ಇವರ ಬಂಧನದ ಅವಧಿ ಗುರುವಾರಕ್ಕೆ ಮುಗಿದಿತ್ತು. ಈ ಹಿನ್ನೆಲೆಯಲ್ಲಿ ಕೃಷ್ಣಯ್ಯ ಶೆಟ್ಟಿ, ಯಡಿಯೂರಪ್ಪ ಅವರ ಪುತ್ರರಾದ ಸಂಸದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಅಳಿಯ ಆರ್.ಎನ್.ಸೋಹನ್‌ಕುಮಾರ್, ಶಾಸಕ ಡಾ.ಡಿ.ಹೇಮಚಂದ್ರ ಸಾಗರ್ ಸೇರಿದಂತೆ ಆರೋಪಿಗಳನ್ನು ಪೊಲೀಸರು ಕರೆ ತಂದಿದ್ದರು. ಆದರೆ, ಭದ್ರತೆ ಕೊರತೆಯಿಂದ ಯಡಿಯೂರಪ್ಪನವರನ್ನು ಹಾಜರುಪಡಿಸಲಾಗಿಲ್ಲ ಎಂದು ವಕೀಲರು ತಿಳಿಸಿದರು.
ಒಂದು ವೇಳೆ ಹೈಕೋರ್ಟ್‌ನಿಂದ ಆರೋಪಿಗಳಿಗೆ ಜಾಮೀನು ದೊರೆತರೆ, ಬಂಧನದ ಅವಧಿ ವಿಸ್ತರಿಸಿರುವ ಲೋಕಾಯುಕ್ತ ಕೋರ್ಟ್ ಆದೇಶ ರದ್ದುಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.