ಬೆಂಗಳೂರು: `ರಾಜ್ಯದ ಸದಾನಂದಗೌಡರ ನೇತೃತ್ವದ ಸರ್ಕಾರವನ್ನು ಕೆಡವಲು ಹೊರಟಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಪಕ್ಷದ ಹೈಕಮಾಂಡ್ ಕಠಿಣ ಕ್ರಮ ಕೈಗೊಳ್ಳಬೇಕು~ ಎಂದು ಬಿಜೆಪಿ ಹಿರಿಯರ ವೇದಿಕೆಯ ಅಧ್ಯಕ್ಷ ಬಿ.ಬಿ.ಶಿವಪ್ಪ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ರಾಜ್ಯದಲ್ಲಿ ಜೆಡಿಎಸ್ ಜೊತೆ ಸೇರಿ ಆಡಳಿತಕ್ಕೆ ಮುಂದಾಗುವ ಮೂಲಕ ಬಿ.ಎಸ್.ಯಡಿಯೂರಪ್ಪ ಪಕ್ಷದ ಸಿದ್ಧಾಂತಗಳನ್ನು ಮೊದಲ ಬಾರಿಗೆ ಗಾಳಿಗೆ ತೂರಿದರು. ಅಲ್ಲಿಂದ ಇಲ್ಲಿಯವರೆಗೂ ಅವರು ಪಕ್ಷದ ತತ್ವಗಳಿಗೆ ಬದ್ಧರಾಗದೇ, ಪಕ್ಷದ ಹಿರಿಯ ನಾಯಕರ ಮಾತನ್ನೂ ಲೆಕ್ಕಿಸದೇ ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಿರುವುದು ಸರಿಯಲ್ಲ. ರಾಷ್ಟ್ರಮಟ್ಟದಲ್ಲಿ ಬಿಜೆಪಿ ಪಕ್ಷದ ವರ್ಚಸ್ಸನ್ನು ಕಳೆಯುತ್ತಿರುವ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಬೇಕು~ ಎಂದು ಅವರು ಆಗ್ರಹಿಸಿದರು.
`ಬಿಜೆಪಿಯಲ್ಲಿ ಯಾವುದೇ ಹಿರಿಯರ ವೇದಿಕೆಯೂ ಇಲ್ಲ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ಮಾತು ನಿಜ. ಆದರೆ ಪಕ್ಷವನ್ನು ಕಟ್ಟಿ ಬೆಳೆಸಿದ ನಮಗೆ ಪಕ್ಷದ ವರ್ಚಸ್ಸು ಹಾಳಾಗುತ್ತಿರುವುದನ್ನು ಸಹಿಸಲಾಗುತ್ತಿಲ್ಲ. ಹೀಗಾಗಿ ಹಿರಿಯರ ವೇದಿಕೆಯಿಂದ ಪಕ್ಷದೊಳಗಿನ ಕೆಟ್ಟ ರಾಜಕಾರಣವನ್ನು ಟೀಕಿಸುವ ಹಕ್ಕು ನಮಗಿದೆ. ರಾಜ್ಯ ರಾಜಕೀಯ ಬೆಳವಣಿಗೆಯ ಬಗ್ಗೆ ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಡಲು ಇದೇ 25 ರಂದು ದೆಹಲಿಗೆ ತೆರಳಲು ನಿಶ್ಚಯಿಸಲಾಗಿದೆ~ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.