ADVERTISEMENT

ಬಿಎಸ್‌ವೈ ಸನ್ಯಾಸ ಸ್ವೀಕರಿಸಲಿ:ಲೇವಡಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ಚಿಕ್ಕಮಗಳೂರು: `ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗೌರವ ಇದ್ದರೆ ತಕ್ಷಣ ರಾಜಕೀಯ ಸನ್ಯಾಸ ಸ್ವೀಕರಿಸಬೇಕು~ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದರು.

ನಗರದಲ್ಲಿ ಭಾನುವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಮತದಾರರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಮರ್ಪಣಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಯಡಿಯೂರಪ್ಪ ಅವರ ರಾಜಕೀಯ ನಡೆ ಬಗ್ಗೆ ಪ್ರತಿಕ್ರಿಯಿಸಿ, ರಾಜಕಾರಣದಲ್ಲಿ ಮುಂದುವರಿಯುವ ನೈತಿಕತೆ ಮಾಜಿ ಮುಖ್ಯಮಂತ್ರಿಗೆ ಉಳಿದಿಲ್ಲ. ಕನಿಷ್ಠ ಗೌರವ ಉಳಿಸಿಕೊಳ್ಳಲು ತಕ್ಷಣವೇ ರಾಜಕೀಯ ಸನ್ಯಾಸ ಸ್ವೀಕರಿಸುವುದು ಸೂಕ್ತ ಎಂದು ಹೇಳಿದರು.

ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಹೋರಾಟ ಕೂಡ ರಾಜಕೀಯ ಪ್ರೇರಿತವಾದುದು. ಈ ಹೋರಾಟದ ಹಿಂದೆ ಬಿಜೆಪಿಯ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆ ಫಲಿತಾಂಶ ಪಕ್ಷದ ನಿರೀಕ್ಷೆಯಂತೆಯೇ ಮುಂದಿನ ರಾಜಕೀಯ ದಿಕ್ಸೂಚಿಯಾಗಿದೆ. ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎನ್ನುವುದನ್ನು ಫಲಿತಾಂಶ ಈಗಲೇ ತೋರಿಸಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.