ADVERTISEMENT

ಬಿಜೆಪಿ ಬಿಕ್ಕಟ್ಟು, ವರಿಷ್ಠರಲ್ಲಿ ಭಿನ್ನಮತ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 19:30 IST
Last Updated 21 ಮಾರ್ಚ್ 2012, 19:30 IST

ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ಒಂದೇ ಗುರಿ. ಆದರೆ, ಈ ವಿಷಯದಲ್ಲಿ ಬಿಜೆಪಿ ಹೈಕಮಾಂಡ್‌ಗೆ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ. ಗುರಿ ಸಾಧನೆಗೆ ಮಾಜಿ ಮುಖ್ಯಮಂತ್ರಿ ಬುಧವಾರ ರಾತ್ರಿ ದೆಹಲಿಗೆ ಬಂದಿಳಿದಿದ್ದರೂ ಪರ-ವಿರುದ್ಧದ ನಿಲುವಿನಿಂದಾಗಿ ವರಿಷ್ಠರ ಮಧ್ಯೆ ಭಿನ್ನಮತ ಮುಂದುವರಿದಿದೆ. ಇದರಿಂದಾಗಿ ರಾಜ್ಯ ಬಿಜೆಪಿ ಬಿಕ್ಕಟ್ಟಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ.

ಮಾಜಿ ಮುಖ್ಯಮಂತ್ರಿ ಭವಿಷ್ಯ ನಿರ್ಧರಿಸಲು ಬಿಜೆಪಿ ಸಂಸದೀಯ ಮಂಡಳಿ ಸಭೆ ಸೇರಬೇಕು. ಅದುವರೆಗೂ ಯಡಿಯೂರಪ್ಪ ಕಾಯಬೇಕು. ಪಕ್ಷದ ಪ್ರಮುಖ ನಾಯಕರು ಪ್ರತ್ಯೇಕವಾಗಿ ಸಮಾಲೋಚಿಸುತ್ತಿದ್ದರೂ ಒಮ್ಮತ ಮೂಡಿಲ್ಲ. `ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುವರೇ?~ ಎಂಬ ಪ್ರಶ್ನೆಗೆ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಅನಂತ ಕುಮಾರ್, ಧರ್ಮೇಂದ್ರ ಪ್ರಧಾನ್, ವೆಂಕಯ್ಯ ನಾಯ್ಡು, ರವಿಶಂಕರ್ ಪ್ರಸಾದ್ ಸೇರಿದಂತೆ ಯಾರ ಬಳಿಯೂ ಖಚಿತ ಉತ್ತರವಿಲ್ಲ. ಎಲ್ಲರದೂ `ಏನಾಗುತ್ತೆ ನೋಡೋಣ~ ಎಂಬ ಒಂದೇ ಮಂತ್ರ.

ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ, ಸುಷ್ಮಾ ಸ್ವರಾಜ್ ಸೇರಿದಂತೆ ಕೆಲವು ಮುಖಂಡರು ಯಡಿಯೂರಪ್ಪ ಅವರಿಗೆ ಮತ್ತೆ ಪಟ್ಟ ಕಟ್ಟಲು ಶತಾಯಗತಾಯ ವಿರೋಧ ಮಾಡುತ್ತಿದ್ದಾರೆ. ಅಡ್ವಾಣಿ ಮಾಜಿ ಮುಖ್ಯಮಂತ್ರಿಗೆ ನಿಷ್ಠರಾಗಿರುವ ಲೋಕಸಭಾ ಸದಸ್ಯರಿಗೆ ನೇರವಾಗಿ `ಭ್ರಷ್ಟಾಚಾರ~ ಕುರಿತು ಪ್ರಶ್ನಿಸಿದ್ದಾರೆ.  ಯಡಿಯೂರಪ್ಪ ಅವರ ರಾಜೀನಾಮೆ ಪಡೆದ ಸಮಿತಿಯೇ ಪುನಃ ಸೇರಿ ನಿರ್ಧರಿಸಬೇಕೆಂದು ಸುಷ್ಮಾ ಹೇಳಿದ್ದಾರೆ. `ಯಡಿಯೂರಪ್ಪನವರ ವಿಷಯದಲ್ಲಿ ಏಕಪಕ್ಷೀಯ ನಿರ್ಧಾರ ಸಾಧ್ಯವಿಲ್ಲ~ ಎಂಬುದೇ ಇದರರ್ಥ ಎಂದು ಅಡ್ವಾಣಿಗೆ ಹತ್ತಿರದ ಮೂಲಗಳು ಹೇಳಿವೆ.

ಯಡಿಯೂರಪ್ಪನವರ ವಿರುದ್ಧದ ಒಂದು ಪ್ರಕರಣ (ಗಣಿ ಕಂಪೆನಿಗಳ ದೇಣಿಗೆ) ಇತ್ಯರ್ಥವಾಗಿರಬಹುದು. ಇನ್ನು 8 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ದೇಣಿಗೆ ಪ್ರಕರಣದ ದೂರನ್ನು (ಎಫ್‌ಐಆರ್) ಹೈಕೋರ್ಟ್ ವಜಾ ಮಾಡಿರಬಹುದು.

ಇದೇ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಕೇಳಿರುವ `ಸಮಾಜ ಪರಿವರ್ತನಾ ಸಮುದಾಯ~ದ ಮಧ್ಯಂತರ ಅರ್ಜಿ ಸುಪ್ರೀಂ ಕೋರ್ಟ್ ಅರಣ್ಯ ಪೀಠದ ಮುಂದಿದೆ. ಈ ಆರೋಪಗಳನ್ನು ಕುರಿತು ಸಿಇಸಿ ಪರಿಶೀಲಿಸುತ್ತಿದೆ. ಅಕಸ್ಮಾತ್ ಮಾಜಿ ಮುಖ್ಯಮಂತ್ರಿ ವಿರುದ್ಧ ಸಿಬಿಐ ತನಿಖೆಗೆ ಶಿಫಾರಸು ಮಾಡಿದರೆ ಮತ್ತೆ ರಾಜೀನಾಮೆ ಪಡೆಯಲಾಗುವುದೇ ಎಂದು ಮೂಲಗಳು ಪ್ರಶ್ನಿಸಿವೆ.

ಸಂಸತ್ತಿನ ಅಧಿವೇಶನ ನಡೆಯುತ್ತಿದೆ. ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಆಗಿ ನೇಮಕ ಮಾಡಿದರೆ ಸಂಸತ್ತನ್ನು ಎದುರಿಸುವುದು ಹೇಗೆ? ರಾಜಕೀಯ ಎದುರಾಳಿಗಳನ್ನು ನಿಭಾಯಿಸುವುದು ಹೇಗೆ? ಈ ವಾಸ್ತವ ಪ್ರತಿಯೊಬ್ಬ ನಾಯಕರಿಗೂ ಗೊತ್ತಿದೆ. ಶಾಸಕರನ್ನು ಅಪಹರಿಸಿ `ರೆಸಾರ್ಟ್~ಗೆ ಹೊತ್ತೊಯ್ದು ಬ್ಲಾಕ್ ಮೇಲ್ ಮಾಡಿದ ಪರಿ ವರಿಷ್ಠರಿಗೆ ಬೇಸರ ತರಿಸಿದೆ. ಈ ರೀತಿಯ ಬ್ಲಾಕ್‌ಮೇಲ್ ತಂತ್ರಗಳಿಗೆ ಮಣೆ ಹಾಕಿದರೆ ಬಿಜೆಪಿ ಅಧಿಕಾರದಲ್ಲಿರುವ ಉಳಿದ ರಾಜ್ಯಗಳಿಗೆ ಯಾವ ಸಂದೇಶ ಹೋಗಲಿದೆ ಎಂದು ಮೂಲಗಳು ಕೇಳಿವೆ.

ಯಡಿಯೂರಪ್ಪ ಅವರನ್ನು ಬೆಂಬಲಿಸುತ್ತಿರುವ ನಾಯಕರ ಆಪ್ತ ಮೂಲಗಳು ತಮ್ಮದೇ ವಾದವನ್ನು ಮುಂದಿಡುತ್ತಿವೆ. ಯಡಿಯೂರಪ್ಪ ಅವರ ಮೇಲಿನ ದೂರನ್ನು ಹೈಕೋರ್ಟ್ ವಜಾ ಮಾಡಿದೆ. ಮಾಜಿ ಮುಖ್ಯಮಂತ್ರಿ ರಾಜೀನಾಮೆ ಪಡೆವ ಸಂದರ್ಭದಲ್ಲಿ ಆರೋಪದಿಂದ ಮುಕ್ತವಾದ ತಕ್ಷಣ ಮತ್ತೆ ಅಧಿಕಾರ ಕೊಡುವುದಾಗಿ ಭರವಸೆ ಕೊಡಲಾಗಿತ್ತು. ನಾವು ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಯಡಿಯೂರಪ್ಪ ಅವರಿಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಶಕ್ತಿ ಶೂನ್ಯ. ಇದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ಸಾಬೀತುಪಡಿಸಿದೆ.

ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿ ಕಾನೂನುಬದ್ಧವಾಗಿಲ್ಲ. ಮಾಜಿ ಮುಖ್ಯಮಂತ್ರಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಅವರಿಂದ ವಿವರಣೆ ಕೇಳಿಲ್ಲ. ಸಹಜ ನ್ಯಾಯ ತತ್ವಗಳನ್ನು ಉಲ್ಲಂಘಿಸಲಾಗಿದೆ. ಇದೇ ಆಧಾರದ ಮೇಲೆ ಹೈಕೋರ್ಟ್ ವಿಭಾಗೀಯ ಪೀಠ ಎಫ್‌ಐಆರ್ ವಜಾ ಮಾಡಿದೆ.
 
ಉಳಿದಿರುವ ಎಂಟು ಪ್ರಕರಣಗಳು ಗಂಭೀರ ಸ್ವರೂಪದವಲ್ಲ. ಅವು ಖಾಸಗಿ ದೂರುಗಳು. ಯಾರೂ ಬೇಕಾದರೂ ದಾಖಲಿಸಬಹುದು. ಭೂಸ್ವಾಧೀನ ಅಧಿಸೂಚನೆ ರದ್ದು ಯಾರು ಮಾಡಿಲ್ಲ.
 

ಎಲ್ಲ ಮುಖ್ಯಮಂತ್ರಿಗಳು ಮಾಡಿದ್ದಾರೆ. ಅಧಿಸೂಚನೆ ರದ್ದುಪಡಿಸಿ ಭೂಮಿಯನ್ನು ಅವುಗಳ ಮಾಲೀಕರಿಗೆ ಹಿಂತಿರುಗಿಸಿದ್ದಾರೆ. ಅವರಿಂದ ಭೂಮಿಯನ್ನು ಖರೀದಿಸಿದ್ದಾರೆ. ಇದು ಮಹಾಅಪರಾಧವಲ್ಲ. ಈ `ರಾಜಕೀಯ ನಾಟಕ~ದಲ್ಲಿ ಮುಖ್ಯಮಂತ್ರಿ ಸದಾನಂದಗೌಡರನ್ನು `ಬಲಿಪಶು~ ಮಾಡುವುದಿಲ್ಲ. ರಾಜಕೀಯ ಪುನರ್ವಸತಿ ಕಲ್ಪಿಸಲಾಗುವುದು. ಈ ಬಗ್ಗೆ ಅನುಮಾನ ಬೇಡ. ಅದೇನೇ ಇರಲಿ ಯಾವುದೇ ತೀರ್ಮಾನ ಸಂಸದೀಯ ಮಂಡಳಿ ಸಭೆಯಲ್ಲೇ ಆಗಬೇಕು. ಯಾರೋ ಒಬ್ಬರು ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದು ಈ ಮೂಲಗಳು ಪ್ರತಿಪಾದಿಸಿವೆ.

ಬುಧವಾರ ರಾತ್ರಿ ರಾಜಧಾನಿಗೆ ಬಂದಿಳಿದಿರುವ ಯಡಿಯೂರಪ್ಪ ಬಿಜೆಪಿ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದೆ. ಸದ್ಯಕ್ಕೆ ರಾಜ್ಯ ರಾಜಕಾರಣ ದೆಹಲಿಗೆ ಸ್ಥಳಾಂತರಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT