ADVERTISEMENT

ಬಿಜೆಪಿ ಮುಖಂಡರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 19:32 IST
Last Updated 10 ಜುಲೈ 2017, 19:32 IST
ಬಿಜೆಪಿ ಮುಖಂಡರ ವಿರುದ್ಧ ಎಫ್‌ಐಆರ್‌
ಬಿಜೆಪಿ ಮುಖಂಡರ ವಿರುದ್ಧ ಎಫ್‌ಐಆರ್‌   

ಮಂಗಳೂರು: ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಶವಯಾತ್ರೆ ವೇಳೆ ಕಲ್ಲು ತೂರಾಟಕ್ಕೆ ಪಿತೂರಿ ನಡೆಸಿರುವುದು ಮತ್ತು ಗಲಭೆಗೆ ಪ್ರಚೋದಿಸಿ ಆರೋಪದ ಮೇಲೆ ಬಿಜೆಪಿ ಹಾಗೂ ಬಜರಂಗದಳದ ಪ್ರಮುಖ ಮುಖಂಡರು ಸೇರಿದಂತೆ ಹಲವರ ವಿರುದ್ಧ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಿದ್ದು, ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ಸತ್ಯಜಿತ್‌ ಸುರತ್ಕಲ್‌, ಬಜರಂಗದಳ ಪ್ರಾಂತ ಸಂಯೋಜಕ ಶರಣ್‌ ಪಂಪ್‌ವೆಲ್‌, ಬಜರಂಗದಳದ ಮುಖಂಡ ಪ್ರದೀಪ್‌ ಪಂಪ್‌ವೆಲ್‌, ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಪೂಂಜ, ಬಜರಂಗದಳದ ದಕ್ಷಿಣ ಪ್ರಾಂತ ಗೋರಕ್ಷಾ ಪ್ರಮುಖ‌ ಮುರಳಿಕೃಷ್ಣ ಹಸಂತಡ್ಕ ಸೇರಿದಂತೆ ಬಿಜೆಪಿ ಹಾಗೂ ಬಜರಂಗದಳದ 20ಕ್ಕೂ ಹೆಚ್ಚು ಜನರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಶನಿವಾರ ಎಫ್‌ಐಆರ್‌ ದಾಖಲಾಗಿದೆ. ದಕ್ಷಿಣ ಕನ್ನಡ ಎಸ್‌ಪಿ ಸಿ.ಎಚ್‌.ಸುಧೀರ್‌ಕುಮಾರ್‌ ರೆಡ್ಡಿ ನೇತೃತ್ವದಲ್ಲಿ ಹಲವು ತಂಡಗಳು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿವೆ.

ಇವರ ವಿರುದ್ಧ ಕಾನೂನು ಬಾಹಿರವಾಗಿ ಗುಂಪು ಸೇರಿರುವುದು, ಗಲಭೆ ನಡೆಸಿರುವುದು, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು, ಶಾಂತಿಭಂಗ ಉಂಟುಮಾಡುವ ಉದ್ದೇಶದಿಂದ ನಿಂದನೆ ಮಾಡಿರುವುದು, ಅನುಚಿತ ವರ್ತನೆ, ಸರ್ಕಾರದ ಆದೇಶ ಉಲ್ಲಂಘನೆ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪಗಳಡಿ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಶರತ್‌ ಅವರ ಶವಯಾತ್ರೆ ವೇಳೆ ಬಂಟ್ವಾಳ ತಾಲ್ಲೂಕಿನ ಕೈಕಂಬದಿಂದ ಬಿ.ಸಿ.ರೋಡ್‌ವರೆಗಿನ ಮಾರ್ಗದಲ್ಲಿ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಈ ಮೊಕದ್ದಮೆ ದಾಖಲಿಸಲಾಗಿದೆ ಎಂದು  ಸುಧೀರ್‌ಕುಮಾರ್‌ ರೆಡ್ಡಿ ಪ್ರಜಾವಾಣಿಗೆ ತಿಳಿಸಿದರು.

ADVERTISEMENT

ಸತ್ಯಜಿತ್ ಮನೆ ಮೇಲೆ ದಾಳಿ: ಸುರತ್ಕಲ್‌ನಲ್ಲಿರುವ ಸತ್ಯಜಿತ್‌  ಅವರ ನಿವಾಸದ ಮೇಲೆ ಭಾನುವಾರ ತಡರಾತ್ರಿ 50ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿದ್ದು, ಆರೋಪಿಯ ಪತ್ತೆಗಾಗಿ ಶೋಧ ನಡೆಸಿದರು. ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಒಳಗೊಂಡ ತಂಡವು ದೀರ್ಘಕಾಲ ಮನೆಯನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿತು. ಆದರೆ, ಸತ್ಯಜಿತ್‌ ಪತ್ತೆಯಾಗಲಿಲ್ಲ. ಅವರ ಇರುವಿಕೆ ಕುರಿತು ಕುಟುಂಬದ ಸದಸ್ಯರ ವಿಚಾರಣೆ ನಡೆಸಿ ಪೊಲೀಸರು ಹಿಂದಿರುಗಿದರು.

ಮತ್ತೆ ಮೂವರ ಬಂಧನ

ಕಲ್ಲು ತೂರಾಟದಲ್ಲಿ ಭಾಗಿಯಾದ ಆರೋಪದ ಮೇಲೆ ಸೋಮವಾರ ಮೂವರನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆಗೆ ನಿಯೋಜಿಸಿರುವ ತಂಡಗಳಲ್ಲಿರುವ ಪೊಲೀಸರು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ ನಡೆಸಿ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಶವಯಾತ್ರೆ ಸಂದರ್ಭದಲ್ಲಿ ಪೊಲೀಸ್‌ ಇಲಾಖೆ ವತಿಯಿಂದ ಮಾಡಿರುವ ವಿಡಿಯೊ ರೆಕಾರ್ಡಿಂಗ್‌ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಲಭ್ಯವಾಗುತ್ತಿರುವ ವಿಡಿಯೊ ದೃಶ್ಯಾವಳಿಪರಿಶೀಲಿಸಿದ ಬಳಿಕ ಆರೋಪಿಗಳನ್ನು ವಶಕ್ಕೆ ಪಡೆಯಲಾಗುತ್ತಿದೆ ಎಂದು ಸುಧೀರ್‌ಕುಮಾರ್‌ ರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.