ADVERTISEMENT

ಬಿಜೆಪಿ ಮುಖಂಡರ ವಿರುದ್ಧ ಶಾಸಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 19:59 IST
Last Updated 3 ಜೂನ್ 2013, 19:59 IST

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪಕ್ಷದ ರಾಜ್ಯ ನಾಯಕರ ವರ್ತನೆಯೇ ಕಾರಣ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಸೋಮವಾರ ನಡೆಯಿತು.

`ನಮ್ಮದೇ ಸರ್ಕಾರ ಇದ್ದರೂ ಚುನಾವಣೆಗೆ ಸರಿಯಾದ ರೀತಿಯಲ್ಲಿ ತಯಾರಿ ನಡೆಸಲಿಲ್ಲ. ಜನರನ್ನು ತಲುಪುವ ಹಾಗೆ ಪ್ರಚಾರ ಮಾಡಲಿಲ್ಲ. ಅಭ್ಯರ್ಥಿಗಳಿಗೆ ಅಗತ್ಯ ಹಣಕಾಸಿನ ನೆರವೂ ನೀಡಲಿಲ್ಲ' ಎಂದು ಶಾಸಕರು, ನಾಯಕರ ವಿರುದ್ಧ ರೇಗಾಡಿದರು ಎನ್ನಲಾಗಿದೆ.

ವಿಧಾನಸಭೆ ಅಧಿವೇಶನದ ಹಿನ್ನೆಲೆಯಲ್ಲಿ ಕರೆದಿದ್ದ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇವಲ ನಾಯಕರು ಭಾಷಣ ಮಾಡಿ, ನಂತರ ಅಲ್ಲಿಗೇ ಸಭೆಯನ್ನು ಮುಕ್ತಾಯಗೊಳಿಸಲು ಯೋಚಿಸಲಾಗಿತ್ತು.

ಆದರೆ, ಶಾಸಕರಾದ ಕೆ.ಜಿ.ಬೋಪಯ್ಯ, ಸುರೇಶಗೌಡ, ಅರವಿಂದ ಲಿಂಬಾವಳಿ, ಗೋ.ಮಧುಸೂದನ್ ಸೇರಿದಂತೆ ಇತರರು ಮಾತನಾಡುವ ಇಚ್ಛೆ ವ್ಯಕ್ತಪಡಿಸಿದರು.

ಸುರೇಶಗೌಡ ಮಾತನಾಡಿ, `ನಾವು ಇಲ್ಲಿ ನಿಮ್ಮ ಭಾಷಣ ಕೇಳಲು ಬಂದಿಲ್ಲ. ನಮ್ಮ ಮಾತುಗಳನ್ನೂ ನೀವು ಕೇಳಬೇಕು' ಎಂದು ಏರುಧ್ವನಿಯಲ್ಲಿ ಆಗ್ರಹಪಡಿಸಿದರು.

`ಅಭಿವೃದ್ಧಿ ಒಂದರಿಂದಲೇ ಚುನಾವಣೆ ಗೆಲ್ಲುವುದು ಕಷ್ಟ. ನನ್ನ ಕ್ಷೇತ್ರದಲ್ಲಿ 900 ಕೋಟಿ ರೂಪಾಯಿಗಳ ಅಭಿವೃದ್ಧಿ ಕೆಲಸ ಆಗಿದೆ. ಇಷ್ಟಾದರೂ ಜಾತಿ ಮತ್ತು ಹಣ ಹೆಚ್ಚು ಕೆಲಸ ಮಾಡಿತು. ಅದನ್ನು ಮೆಟ್ಟಿ ನಿಂತು ಇಲ್ಲಿಗೆ ಬರಲು ಪಟ್ಟ ಕಷ್ಟ ಏನು ಎನ್ನುವುದು ನಿಮಗ್ಯಾರಿಗೂ ಗೊತ್ತಿಲ್ಲ' ಎಂದು ಆಕ್ಷೇಪಿಸಿದರು ಎನ್ನಲಾಗಿದೆ.

`ಪಕ್ಷದಲ್ಲಿ ಜಾತಿ ಸಮೀಕರಣ ಸರಿಯಾಗಿ ಆಗಿಲ್ಲ. ಚುನಾವಣೆಯಲ್ಲಿ ಸರಿಯಾಗಿ ಪಕ್ಷದ ಕಡೆಯಿಂದ ಹಣ ಕೊಡಲಿಲ್ಲ. ಏನೂ ಕೊಡದೆ ಚುನಾವಣೆ ಗೆಲ್ಲುವುದು ಹೇಗೆ? ಕಷ್ಟ ಪಟ್ಟು ಗೆದ್ದು ಬಂದ ನಂತರ ನೀವೆಲ್ಲರೂ ನಮ್ಮ ಮೇಲೆ ಸವಾರಿ ಮಾಡುತ್ತೀರಿ' ಎಂದು ಸುರೇಶಗೌಡ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ಕೆ.ಜಿ.ಬೋಪಯ್ಯ ಅವರು ಪಕ್ಷದ ಸಂಘಟನಾ ಕಾರ್ಯದರ್ಶಿ ಸಂತೋಷ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು ಎಂದು ಗೊತ್ತಾಗಿದೆ. ಪಕ್ಷದ ಜಿಲ್ಲಾಧ್ಯಕ್ಷರ ನೇಮಕ ಸಂದರ್ಭದಲ್ಲಿ ಸ್ಥಳೀಯ ಮುಖಂಡರನ್ನು ಸಂಪರ್ಕಿಸುವ ಸೌಜನ್ಯವೂ ತೋರುತ್ತಿಲ್ಲ. ಎಲ್ಲವನ್ನೂ ಪಕ್ಷದ ಕಚೇರಿಯಲ್ಲಿ ಕುಳಿತುಕೊಂಡು ಹೇರುವುದಾದರೆ ನಾವ್ಯಾಕೆ ಇರಬೇಕು ಎಂದು ಪ್ರಶ್ನಿಸಿದರು ಎಂದು ಮೂಲಗಳು ತಿಳಿಸಿವೆ.

ಪರಿಷತ್ ಸದಸ್ಯ ಗೋ.ಮಧುಸೂದನ್ ಮಾತನಾಡಿ, ಪಕ್ಷಕ್ಕೆ ಇವತ್ತು ಯಡಿಯೂರಪ್ಪ ಅವರ ಅಗತ್ಯ ಇದೆ. ಹೀಗಾಗಿ ಅವರನ್ನು ವಾಪಸ್ ಕರೆತರಬೇಕು ಎಂದು ಆಗ್ರಹಪಡಿಸಿದರು. ಇದಕ್ಕೆ ಡಿ.ಎಸ್.ವೀರಯ್ಯ ಕೂಡ ಧ್ವನಿಗೂಡಿಸಿದರು ಎನ್ನಲಾಗಿದೆ.

`ಸಂಘ ಪರಿವಾರ ಸೇರಿದಂತೆ ಹಲವು ಸಹ ಸಂಘಟನೆಗಳ ಸಹಕಾರ ಇದ್ದರೂ ಬಿಜೆಪಿ ಗಳಿಸಿದ್ದು ಕೇವಲ ಶೇ 20ರಷ್ಟು ಮತ. ಆದರೆ, ಏನೂ ಇಲ್ಲದೆ ಯಡಿಯೂರಪ್ಪ ಶೇ 10ರಷ್ಟು ಮತ ಪಡೆದಿದ್ದಾರೆ. ಅವರು ನಮ್ಮಟ್ಟಿಗೆ ಇದ್ದಿದ್ದರೆ ನಾವು ಅಧಿಕಾರಕ್ಕೆ ಬರುವ ಸಾಧ್ಯತೆ ಇತ್ತು. ಹೀಗಾಗಿ ಅವರನ್ನು ವಾಪಸ್ ಪಕ್ಷಕ್ಕೆ ಕರೆತಂದು, ಸಂಘಟನೆ ಮಾಡಬೇಕು' ಎನ್ನುವ ಸಲಹೆಯನ್ನು ಮಧುಸೂದನ್ ನೀಡಿದರು ಎಂದು ಗೊತ್ತಾಗಿದೆ.

`ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವ ವಿಷಯದಲ್ಲಿ ಗೊಂದಲ ಇದೆ. ಮೊದಲು ಇದನ್ನು ನಿವಾರಿಸಬೇಕು. ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯೆಂದು ಗೋವಾದಲ್ಲಿ ನಡೆಯುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ನಿರ್ಣಯ ಅಂಗೀಕರಿಸಬೇಕು ಎಂದು ಅವರು ಆಗ್ರಹಪಡಿಸಿದರು. ಇದಕ್ಕೆ ಇತರ ಸದಸ್ಯರು ಕೂಡ ಬೆಂಬಲ ಸೂಚಿಸಿದರು ಎನ್ನಲಾಗಿದೆ. ಶಾಸಕರು ಇಷ್ಟೆಲ್ಲ ಅಸಮಾಧಾನ ಹೊರ ಹಾಕಿದರೂ ವೇದಿಕೆ ಮೇಲೆ ಕುಳಿತಿದ್ದ ಮುಖಂಡರಾದ ಜಗದೀಶ ಶೆಟ್ಟರ್, ಡಿ.ವಿ.ಸದಾನಂದ ಗೌಡ, ಅನಂತಕುಮಾರ್, ಪ್ರಹ್ಲಾದ ಜೋಶಿ ಹಾಗೂ ಆರ್.ಅಶೋಕ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.