ADVERTISEMENT

ಬಿಜೆಪಿ ವಿರುದ್ಧ ಕಾನೂನು ಸಮರ: ಪರಮೇಶ್ವರ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:30 IST
Last Updated 20 ಜನವರಿ 2011, 19:30 IST

ಬಂಗಾರಪೇಟೆ:  ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ನಡೆಸಿರುವ ಭ್ರಷ್ಟಾಚಾರಗಳ ವಿರುದ್ಧ ಕಾನೂನು ಚೌಕಟ್ಟಿನಡಿ ಪ್ರತಿಭಟಿಸಲು ಕಾಂಗ್ರೆಸ್ ತೀರ್ಮಾನಿಸಲಿದೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.

ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ಗುರುವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ‘ನಾವು 60 ವರ್ಷದಿಂದ ಮಾಡದಿರುವ ಭ್ರಷ್ಟಾಚಾರ, ದುರಾಡಳಿತ, ಸ್ವಜನ ಪಕ್ಷಪಾತವನ್ನು ಬಿಜೆಪಿ ಸರ್ಕಾರ ಕೇವಲ ಎರಡೂವರೆ ವರ್ಷದಲ್ಲಿ ಮಾಡಿದೆ’ ಎಂದರು.

‘ಸರ್ಕಾರವು ಸಾವಿರಾರು ಕೋಟಿ ಮೌಲ್ಯದ ಸಾವಿರಾರು ಎಕರೆ ಭೂಮಿಯನ್ನು ವಿವಿಧ ಯೋಜನೆಗಳ ಹೆಸರಿನಲ್ಲಿ ಕಳ್ಳತನ ಮಾಡಿರುವ ವಿಷಯವಾಗಿ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲು ವಕೀಲರ ವೇದಿಕೆಯು ರಾಜ್ಯಪಾಲರ ಅನುಮತಿಗೆ ಮನವಿ ಕೋರಿತ್ತು. ಈ ಸಂಬಂಧ ರಾಜ್ಯಪಾಲರು ಯಾವುದೇ ನಿರ್ಣಯವನ್ನು ತೆಗೆದುಕೊಳ್ಳದಂತೆ ಸಂಪುಟ ನಿರ್ಣಯಯನ್ನು ತೆಗೆದುಕೊಂಡು ನಿರ್ಣಯದ ಪ್ರತಿಯನ್ನು ರಾಜ್ಯಪಾಲರಿಗೆ ರವಾನಿಸಿರುವ ಕೃತ್ಯ ಪ್ರಜಾತಂತ್ರ ವ್ಯವಸ್ಥೆಗೆ ಮಾಡಿರುವ ಅಪಮಾನ.  ತಪ್ಪು ಮಾಡದಿದ್ದ ಮೇಲೆ ಈ ರೀತಿಯ ಬಂದ್ ಎಚ್ಚರಿಕೆಯ ಅವಶ್ಯಕತೆ ಏನಿತ್ತು?’ ಎಂದು ಕೇಳಿದರು.

ಪ್ರಕಟಿಸಿದ ಯಾವುದೇ ಯೋಜನೆಗೆ ಸರ್ಕಾರ ಹೇಳಿದಷ್ಟು ಅನುದಾನ ಮಂಜೂರು ಮಾಡಿಲ್ಲ. ಮುಖ್ಯಮಂತ್ರಿ ಕಳೆದ ಬಜೆಟ್‌ನಲ್ಲಿ ರೂ. 62 ಸಾವಿರ ಕೋಟಿ ಅನುದಾನ ಮಂಡಿಸಿ ಪ್ರಚಾರ ಗಿಟ್ಟಿಸಿದ್ದರು. ಆದರೆ ಈಚೆಗೆ ಅವರೇ ನಡೆಸಿರುವ ಪರಿಶೀಲನೆ ಸಭೆಯಲ್ಲಿ 62 ಸಾವಿರ ಕೋಟಿ ಬಜೆಟ್ ಪೈಕಿ ಕೇವಲ ಶೇ. 40 ಮಂಜೂರಾಗಿರುವುದು ಚರ್ಚೆಯಾಗಿದೆ. ಇನ್ನೊಂದೂವರೆ ತಿಂಗಳಿನ ಅವಧಿಯಲ್ಲಿ ಉಳಿದ ಅನುದಾನವನ್ನು ಖರ್ಚು ಮಾಡುವುದು ಕಷ್ಟಸಾಧ್ಯವೆಂದು ಸಭೆಯಲ್ಲಿ ಅಧಿಕಾರಿಗಳೇ ಅವರಿಗೆ ತಿಳಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.