ADVERTISEMENT

ಬಿಸಿಯೂಟ ಸಹಾಯಕರ ನೇಮಕಾತಿ ಎಸ್‌ಡಿಎಂಸಿಗೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 19:59 IST
Last Updated 13 ಜುಲೈ 2013, 19:59 IST

ಬೆಂಗಳೂರು: ಸ್ವಯಂ ಸೇವಾ ಸಂಸ್ಥೆಗಳು (ಎನ್‌ಜಿಒ) ಬಿಸಿಯೂಟ ಸರಬರಾಜು ಮಾಡುತ್ತಿರುವ ಶಾಲೆಗಳಿಗೆ ಅಡುಗೆ ಸಹಾಯಕರನ್ನು ನೇಮಕ ಮಾಡುವ ಹೊಣೆಯನ್ನು ಮತ್ತೆ ಆಯಾ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಗೆ (ಎಸ್‌ಡಿಎಂಸಿ) ನೀಡಲಾಗಿದೆ.

ಅಡುಗೆ ಸಹಾಯಕರ ನೇಮಕಾತಿ ಜವಾಬ್ದಾರಿಯನ್ನು ಸರ್ಕಾರ 2012ರ ನವೆಂಬರ್‌ನಲ್ಲಿ ಎನ್‌ಜಿಒಗಳಿಗೆ ವಹಿಸಿತ್ತು. ಇದು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಹಾಗೂ ಶಾಲಾಭಿವೃದ್ಧಿ ಸಮಿತಿಗಳ ಪರಮಾಧಿಕಾರಕ್ಕೆ ವಿರುದ್ಧವಾದುದು ಎಂದು ಎಸ್‌ಡಿಎಂಸಿ ಗಳು, ಶಿಕ್ಷಣ ತಜ್ಞರು ಮತ್ತು ಕೆಲವು ಎನ್‌ಜಿಒ ಗಳಿಂದಲೇ ಭಾರೀ ವಿರೋಧ ವ್ಯಕ್ತವಾಗಿತ್ತು.

ಆದಕಾರಣ ತನ್ನ ಆದೇಶದಲ್ಲಿ ಸ್ವಲ್ಪ ಬದಲಾವಣೆ ಮಾಡಿರುವ ಸರ್ಕಾರ, ನೇಮಕಾತಿ ಜವಾಬ್ದಾರಿಯನ್ನು ಮುಖ್ಯ ಶಿಕ್ಷಕರು ಹಾಗೂ ಎಸ್‌ಡಿಎಂಸಿಗಳಿಗೆ ನೀಡಿರುವುದಾಗಿ ಜುಲೈ 1ರಂದು ಮರು ಆದೇಶ ಹೊರಡಿಸಿದೆ. ಆದರೆ ಅಡುಗೆ ಸಹಾಯಕರಿಗೆ ಸಂಬಳ ನೀಡುವ ಜವಾಬ್ದಾರಿಯನ್ನು ಎನ್‌ಜಿಒಗಳಿಗೆ ನೀಡಿದೆ.

ರಾಜ್ಯದ 6,155 ಶಾಲೆಗಳ ಒಟ್ಟು 10,51,812 ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಅಡಿ 104 ಎನ್‌ಜಿಒಗಳು ಊಟ ಸರಬರಾಜು ಮಾಡುತ್ತಿವೆ. ಕೇಂದ್ರ ಸರ್ಕಾರ ಮಂಜೂರಾತಿ ನೀಡಿರುವ 1,14,653 ಅಡುಗೆಯವರ ಸಂಖ್ಯೆಯಲ್ಲಿ ಒಟ್ಟು 1,08,209 ಅಡುಗೆಯವರು ಕಾರ್ಯ ನಿರ್ವಹಿಸುತ್ತಿದ್ದು, ಉಳಿಕೆ 6,444 ಅಡುಗೆಯವರನ್ನು ಎನ್‌ಜಿಒಗಳು ಊಟ ಸರಬರಾಜು ಮಾಡುತ್ತಿರುವ ಶಾಲೆಗಳಲ್ಲಿ ನೇಮಕ ಮಾಡಿಕೊಳ್ಳಬೇಕಿದೆ.

ಕೆಲವು ಎನ್‌ಜಿಒಗಳು ಅಡುಗೆ ಸಹಾ ಯಕರನ್ನು ನೇಮಕ ಮಾಡಿಕೊಳ್ಳುವಲ್ಲಿ ವಿಳಂಬ ನೀತಿ ಅನುಸರಿಸುತ್ತಿವೆ. ಇದ ರಿಂದ ಮಕ್ಕಳಿಗೆ ಬಿಸಿಯೂಟ ಬಡಿಸುವ ಕೆಲಸವನ್ನು ಶಾಲಾ ಶಿಕ್ಷಕರುಗಳೇ ನಿರ್ವಹಿಸುತ್ತ್ದ್ದಿದಾರೆ. ಇದು ಶಿಕ್ಷಕರಿಗೆ ಹೊರೆ ಯಾಗಿದೆ. ಆದ್ದರಿಂದ ಮುಖ್ಯ ಶಿಕ್ಷಕರು ಮತ್ತು ಎಸ್‌ಡಿಎಂಸಿಗಳೇ ನಿಯಾಮಾನುಸಾರ ಸಹಾಯಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಆದೇಶಿಸಿದೆ.

ಆಯುಕ್ತರ ಜತೆ ಚರ್ಚೆ
`ನಾನು ಸರ್ಕಾರಿ ಶಾಲೆಗಳ ಪರವಾಗಿ ಕೆಲಸ ನಿರ್ವಹಿಸುವವ. ಎನ್‌ಜಿಒಗಳಿಂದ ಲಾಭ ಬಯ ಸುವವ ಅಲ್ಲ. ಅಡುಗೆ ಸಹಾಯಕರ ನೇಮಕಾತಿ ಜವಾಬ್ದಾರಿಯನ್ನು ಶಾಲೆಯ ಮುಖ್ಯ ಶಿಕ್ಷಕರು ಮತ್ತು ಎಸ್‌ಡಿಎಂಸಿಗಳಿಗೆ ನೀಡಲಾಗಿದ್ದರೂ, ಸಂಬಳ ನೀಡುವ ಅಧಿಕಾರ ಎನ್‌ಜಿಒಗಳಿಗೆ ಇರುವ ಬಗ್ಗೆ ಈ ಹಿಂದಿನ ಆಯುಕ್ತರು ಇದ್ದಾಗ ತೀರ್ಮಾನಿಸಲಾಗಿತ್ತು.

ADVERTISEMENT

ಬದಲಾವಣೆ ಕುರಿತು ಹೊಸದಾಗಿ ಬಂದಿರುವ ಆಯುಕ್ತರೊಂದಿಗೆ ಚರ್ಚಿಸಲಾಗುವುದು'. ಎಸ್. ಜಯಕುಮಾರ, ಜಂಟಿ ನಿರ್ದೇಶಕ, ಮಧ್ಯಾಹ್ನ ಬಿಸಿಯೂಟ ಯೋಜನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.