ADVERTISEMENT

ಬಿಸಿಲ ಝಳಕ್ಕೆ ತತ್ತರಿಸಿದ ವಿಜಯಪುರ ನಾಗರಿಕರು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST

ವಿಜಯಪುರ: ಈ ಬಾರಿ ಬೇಸಿಗೆ ಆರಂಭದಲ್ಲೇ ಬಿಸಿಲ ಝಳ ಹೆಚ್ಚಿದೆ. ಮಾರ್ಚ್‌ 15ರೊಳಗೆ ಜಿಲ್ಲೆಯ ಗರಿಷ್ಠ ತಾಪಮಾನ 39.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿರುವುದು ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ಇತಿಹಾಸ.

ತಿಂಗಳ ಆರಂಭದಿಂದಲೂ ಬೇಸಿಗೆಯ ಧಗೆ ಹೆಚ್ಚಿದೆ. ಎರಡು ದಿನ 33, ಒಂದು ದಿನ 34 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿರುವುದು ಹೊರತುಪಡಿಸಿದರೆ, ಉಳಿದ ದಿನಗಳಲ್ಲಿ 37 ಡಿಗ್ರಿ ಆಸುಪಾಸು ಗರಿಷ್ಠ ತಾಪಮಾನ ದಾಖಲಾಗಿದೆ. ಇದೇ 9ರಿಂದ 14ರ ವರೆಗೂ ಗರಿಷ್ಠ ತಾಪಮಾನ 37 ಡಿಗ್ರಿ ಆಸುಪಾಸು ನಿರಂತರವಾಗಿ ದಾಖಲಾಗಿದ್ದು, 12ರಂದು ಶನಿವಾರ ಮಧ್ಯಾಹ್ನ 39.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಇಲ್ಲಿಯ ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದ ಹವಾಮಾನ ಮುನ್ಸೂಚನಾ ವಿಭಾಗದ ಹವಾಮಾನ ತಜ್ಞ ಎಚ್‌. ವೆಂಕಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಹವಾಮಾನ ಮುನ್ಸೂಚನಾ ಕೇಂದ್ರ ನಗರದ ಹೊರವಲಯದಲ್ಲಿದೆ. ಇಲ್ಲಿನ ವಾತಾವರಣದ ಜತೆಗೆ ಹೊರಗಿನ ವಾತಾವರಣ ಹೋಲಿಸಿದರೆ ಕೊಂಚ ವ್ಯತ್ಯಾಸ ಕಂಡು ಬರಲಿದೆ. ನಗರ ‘ಬಿಸಿಯ ದ್ವೀಪ’ದ ವ್ಯಾಪ್ತಿಯೊಳಗೆ ಬರುವುದರಿಂದ ಹಿಟ್ನಳ್ಳಿಯಲ್ಲಿ ದಾಖಲಾಗುವ ಗರಿಷ್ಠ ತಾಪಮಾನಕ್ಕಿಂತ ಒಂದೆರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿರುತ್ತದೆ’ ಎಂದು ಮಾಹಿತಿ ನೀಡಿದರು.

‘ಈ ಬಾರಿ ರಾಜ್ಯದ ಕೆಲವೆಡೆ ಈಗಾಗಲೇ 38 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ. ಮಲೆನಾಡಿನ ಪರಿಸರ ಹೊಂದಿರುವ ಕೇರಳ ರಾಜ್ಯದಲ್ಲೂ ಗರಿಷ್ಠ ತಾಪಮಾನ ದಾಖಲಾಗಿದ್ದು, ಒಟ್ಟಾರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ತಾಪಮಾನದ ಪ್ರಮಾಣ ಈಚೆಗಿನ ವರ್ಷಗಳಲ್ಲಿ ಹಿಂದಿನ ವರ್ಷಗಳಿಗಿಂತಲೂ ಈ ಸಮಯದಲ್ಲಿ ಹೆಚ್ಚಿದೆ’ ಎಂದು ವೆಂಕಟೇಶ್‌ ಹೇಳಿದರು.

ದಾಖಲೆ: ‘ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ಹವಾಮಾನ ಮುನ್ಸೂಚನಾ ವಿಭಾಗದಲ್ಲಿನ 25 ವರ್ಷಗಳ ದಾಖಲೆಗಳ ಪ್ರಕಾರ ಜಿಲ್ಲೆಯಲ್ಲಿ 43 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ 2010 ಮೇ 19ರಂದು ದಾಖಲಾಗಿದೆ.

1996ರ ಮಾರ್ಚ್‌ 26ರಿಂದ 31ರ ವರೆಗೆ ನಿರಂತರ ಐದು ದಿನ ಜಿಲ್ಲೆಯ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ನಿಂದ 41 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. 2004ರ ಮಾರ್ಚ್‌ 19, 21, 22, 24ರಂದು ಸಹ ಜಿಲ್ಲೆಯ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಈಚೆಗಿನ ವರ್ಷಗಳಲ್ಲಿ ಮಾರ್ಚ್‌ ತಿಂಗಳಿನ ಗರಿಷ್ಠ ತಾಪಮಾನದ ದಾಖಲೆಯಿದು’ ಎಂದು ಮಾಹಿತಿ ಒದಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.