ADVERTISEMENT

ಬೀದಿ ದೀಪ ನಿರ್ವಹಣೆ ಖಾಸಗೀಕರಣ

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 19:30 IST
Last Updated 20 ಜೂನ್ 2012, 19:30 IST
ಬೀದಿ ದೀಪ ನಿರ್ವಹಣೆ ಖಾಸಗೀಕರಣ
ಬೀದಿ ದೀಪ ನಿರ್ವಹಣೆ ಖಾಸಗೀಕರಣ   

ಹುಬ್ಬಳ್ಳಿ: ರಾಜ್ಯದಲ್ಲಿ ಮೊದಲ ಬಾರಿಗೆ ಬೀದಿ ದೀಪ ನಿರ್ವಹಣೆ ಹೊಣೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಿಭಾಯಿಸುವ ಪ್ರಾಯೋಗಿಕ ಯೋಜನೆಯನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.

ಹಾಲಿ ಅವಳಿ ನಗರದ ವ್ಯಾಪ್ತಿಯಲ್ಲಿರುವ 39,000 ಬೀದಿ ದೀಪಗಳ ನಿರ್ವಹಣೆ  ಮಾಡುತ್ತಿರುವ ಪಾಲಿಕೆ ಪ್ರತಿ ವರ್ಷ ರೂ 7 ಕೋಟಿ ವಿದ್ಯುತ್ ಬಿಲ್ ಪಾವತಿಸುತ್ತಿದೆ.

ನೂತನ ಯೋಜನೆ ಪ್ರಕಾರ, ಪಾಲಿಕೆಗೆ ನಿಗದಿತ ಠೇವಣಿ ಪಾವತಿಸಿ ನಿರ್ವಹಣೆ ಜವಾಬ್ದಾರಿಯನ್ನು ಆರು ವರ್ಷದ  ಅವಧಿಗೆ ಖಾಸಗಿ ಕಂಪೆನಿ ಗುತ್ತಿಗೆ ಪಡೆದುಕೊಳ್ಳಲಿದೆ. ಗುತ್ತಿಗೆ ಪಡೆದ ನಂತರ ಎಲ್ಲ 39,000 ವಿದ್ಯುತ್ ದೀಪಗಳನ್ನು ಬದಲಿಸಿ ಕಡಿಮೆ ವಿದ್ಯುತ್ ಬಳಸುವ ಬಲ್ಪ್‌ಗಳನ್ನು ಅಳವಡಿಸಲಿದೆ.
 
ಇದರೊಂದಿಗೆ ಬೆಳಕಾಗುತ್ತಿದ್ದಂತೆಯೇ ಸ್ವಯಂ ಚಾಲಿತವಾಗಿ ಕಡಿಮೆ ವಿದ್ಯುತ್ ಬಳಕೆಯಾಗುವ ತಾಂತ್ರಿಕತೆಯನ್ನು ಕೂಡ  ಅಳವಡಿಸುತ್ತದೆ. ಈ ಪರಿವರ್ತನೆಯಿಂದಾಗಿ ವರ್ಷಕ್ಕೆ ಶೇ 40ರಷ್ಟು ವಿದ್ಯುತ್ ಉಳಿತಾಯವಾಗಲಿದೆ.

ಹೀಗೆ ಉಳಿತಾಯವಾದ ವಿದ್ಯುತ್‌ನಿಂದ (ಪಾಲಿಕೆ ಈಗ ವರ್ಷಕ್ಕೆ ರೂ 7 ಕೋಟಿ ಪಾವತಿಸುತ್ತಿದೆ) ಉಳಿದ ಹಣವನ್ನು ಸಂಸ್ಥೆ ಪಡೆಯಲಿದೆ. ಇದರಲ್ಲಿ ಶೇ 10ರಷ್ಟನ್ನು ಪಾಲಿಕೆಗೇ ಮರುಪಾವತಿಸುತ್ತದೆ. ನಿಗದಿತ ಅವಧಿಯವರೆಗೆ ಬೀದಿ ದೀಪಗಳ ನಿರ್ವಹಣೆ ಹಾಗೂ ಮೇಲ್ವಿಚಾರಣೆ ನಡೆಸುವ ಸಂಸ್ಥೆ ಒಪ್ಪಂದದ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆಯೇ ಯಥಾಸ್ಥಿತಿಯಲ್ಲಿ ಪಾಲಿಕೆಗೆ ಬಿಟ್ಟುಕೊಡಲಿದೆ.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ನಿರ್ವಹಣೆಯಲ್ಲಿ ಬಳಕೆಯಾಗುತ್ತಿದ್ದ ಈ ವ್ಯವಸ್ಥೆಯನ್ನು ಮೊದಲ ಬಾರಿಗೆ ಪಾಲಿಕೆ ವ್ಯಾಪ್ತಿಯ ಬೀದಿ ದೀಪಗಳ ನಿರ್ವಹಣೆಗೂ ವಿಸ್ತರಿಸಲಾಗುತ್ತಿದೆ. ಅವಳಿ ನಗರದಲ್ಲಿ ಯೋಜನೆಯ ಯಶಸ್ಸು ಅವಲಂಬಿಸಿ ರಾಜ್ಯದ ಉಳಿದ ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ.

ನಿರ್ವಹಣಾ ವೆಚ್ಚ ಉಳಿತಾಯ: `ಯೋಜನೆ ಜಾರಿಯಿಂದ, ವಿದ್ಯುತ್ ವೆಚ್ಚ ಪಾವತಿ ಹೊರತುಪಡಿಸಿ ಪಾಲಿಕೆಯಿಂದ ಆಗುತ್ತಿದ್ದ ನಿರ್ವಹಣಾ ವೆಚ್ಚ ಉಳಿತಾಯವಾಗಲಿದೆ. ಇಲ್ಲಿನ ಸಿಬ್ಬಂದಿ ಶ್ರಮವನ್ನು ಬೇರೆ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ~ ಎನ್ನುತ್ತಾರೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವಿದ್ಯುತ್ ನಿರ್ವಹಣಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಎಸ್.ಎಸ್.ಪಟಕೆ.

ಖಾಸಗಿ-ಸಾರ್ವಜನಿಕ ಸಹಭಾಗಿತ್ವದಡಿ ಬೀದಿ ದೀಪಗಳ ನಿರ್ವಹಣೆ ಕೈಗೆತ್ತಿಕೊಳ್ಳಲು ಈಗಾಗಲೇ ದೆಹಲಿ ಮೂಲದಸಿಟಿ ಲ್ಯೂಮ್, ಬೆಂಗಳೂರಿನ ಎಲ್ಪ್ರೊಟಿಕ್ನಾಲಜಿಸ್. ಹೈದರಾಬಾದ್‌ನ ಆರ್‌ಟಿಎಲ್ ಟೆಕ್ನಾಲಜಿಸ್ ಸಂಸ್ಥೆಗಳು ಆಸಕ್ತಿ ವ್ಯಕ್ತಪಡಿಸಿವೆ.

ಯೋಜನೆಗೆ ತಾಂತ್ರಿಕ ನೆರವು ನೀಡಲು ಧಾರವಾಡದ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ಸ್ ವಿಭಾಗದ ಮುಖ್ಯಸ್ಥ ವಿಜಯಮೂರ್ತಿ, ಹೆಸ್ಕಾಂ ಸಹಾಯಕ ಎಂಜಿನಿಯರ್ ಶಿಲ್ಪಾ ಹಾಗೂ ಪಾಲಿಕೆ ವಿದ್ಯುತ್ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಡಿ.ಐ.ಪತ್ತಾರ ಹಾಗೂ ಎ.ಐ. ಅರ್ಕಸಾಲಿ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಸಮಿತಿಯು ಯೋಜನಾ ವರದಿ ಸಿದ್ಧಪಡಿಸಿದ್ದು ಪಾಲಿಕೆ ಸಾಮಾನ್ಯಸಭೆಯಲ್ಲಿ ಅನುಮೋದನೆ ಪಡೆದ ನಂತರ  ಟೆಂಡರ್ ಕರೆಯಲಾಗುತ್ತದೆ ಎಂದು ಹೇಳುತ್ತಾರೆ.

ಷರತ್ತು: ಕಂಪನಿ ತನ್ನ ಜವಾಬ್ದಾರಿ ನಿರ್ವಹಣೆಯಲ್ಲಿ ವಿಫಲವಾದರೆ ಕಪ್ಪು ಪಟ್ಟಿಗೆ ಸೇರಿಸುವುದು, ಠೇವಣಿ ಹಣ ಮುಟ್ಟುಗೋಲು ಹಾಕಿಕೊಳ್ಳುವುದು ಸೇರಿದಂತೆ ಹಲವು  ಷರತ್ತುಗಳನ್ನು ಒಪ್ಪಂದದಲ್ಲಿ (ಎಂಒಯು) ಸೇರಿಸಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ಬೇಕಾದರೂ ಪಾಲಿಕೆ ಏಕಪಕ್ಷೀಯವಾಗಿ ಒಪ್ಪಂದವನ್ನು ರದ್ದುಗೊಳಿಸಬಹುದಾಗಿದೆ ಎಂದೂ ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.