ADVERTISEMENT

‘ಬುಡಕಟ್ಟು ಸಂಸ್ಕೃತಿಯಲ್ಲಿ ಆಧುನಿಕ ಆವಿಷ್ಕಾರ’

ಗುರುವ ಕೊರಗ ಜನ್ಮ ಶತಮಾನೋತ್ಸವದಲ್ಲಿ ಟಾಕಪ್ಪ ಕಣ್ಣೂರು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 19:30 IST
Last Updated 28 ಮಾರ್ಚ್ 2018, 19:30 IST
ಜನ್ಮ ಶತಮಾನೋತ್ಸವ ಸಂಭ್ರಮ ಸಮಾವೇಶ ಮತ್ತು ವಿಚಾರ ಸಂಕಿರಣದಲ್ಲಿ ಶತಾಯುಷಿ ಗುರುವ ಕೊರಗ ಅವರನ್ನು ಮಾಹೆ ಕುಲಾಧಿಪತಿ ಡಾ. ಎಚ್‌.ಎಸ್‌ ಬಲ್ಲಾಳ ಸನ್ಮಾನಿಸಿದರು. –ಪ್ರಜಾವಾಣಿ ಚಿತ್ರ
ಜನ್ಮ ಶತಮಾನೋತ್ಸವ ಸಂಭ್ರಮ ಸಮಾವೇಶ ಮತ್ತು ವಿಚಾರ ಸಂಕಿರಣದಲ್ಲಿ ಶತಾಯುಷಿ ಗುರುವ ಕೊರಗ ಅವರನ್ನು ಮಾಹೆ ಕುಲಾಧಿಪತಿ ಡಾ. ಎಚ್‌.ಎಸ್‌ ಬಲ್ಲಾಳ ಸನ್ಮಾನಿಸಿದರು. –ಪ್ರಜಾವಾಣಿ ಚಿತ್ರ   

ಉಡುಪಿ: ‘ಬುಡಕಟ್ಟು ಜನಾಂಗದ ಸಂಸ್ಕೃತಿಯಲ್ಲಿ ಆಧುನಿಕ ಬದುಕಿನ ಆವಿಷ್ಕಾರಗಳಿವೆ. ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಮಣಿಪಾಲ ಉನ್ನತ ಶಿಕ್ಷಣ ಕೇಂದ್ರ, ಎಂಜಿಎಂ ಕಾಲೇಜುಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಶತಾಯುಷಿ ಗುರುವ ಕೊರಗ ಜನ್ಮ ಶತಮಾನೋತ್ಸವ ಸಂಭ್ರಮ ಸಮಾವೇಶ ಹಾಗೂ ವಿಚಾರ ಸಂಕಿರಣ, ಸಂವಾದ ಮತ್ತು ಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬುಡಕಟ್ಟು ಪಂಗಡಗಳಲ್ಲಿ ಒಂದಾಗಿರುವ ಈ ಕೊರಗ ಜನಾಂಗವು ಕೂಡ ತನ್ನದೇ ಆದ ಇತಿಹಾಸ, ಆಚಾರ ವಿಚಾರ, ಸಂಸ್ಕೃತಿ, ಉಡುಗೆ ತೊಡುಗೆ, ಮನರಂಜನೆ ಮತ್ತು ಭಾಷೆಯನ್ನು ಹೊಂದಿದೆ. ಇದನ್ನು ಉಳಿಸಿಕೊಳ್ಳಲು ಎಲ್ಲ ಸಮುದಾಯಗಳು ಒಟ್ಟಾಗಿ ಹೆಜ್ಜೆ ಹಾಕಬೇಕಾಗಿದೆ. ಶೋಷಣೆ, ಅನುಕರಣೆ ಮತ್ತು ಆಧುನೀಕರಣಗಳ ಬಿರುಗಾಳಿಗೆ ಸಿಲುಕಿ ಇಂದು ಸಮುದಾಯವೇ ಅವನತಿಯ ಅಂಚಿನಲ್ಲಿದೆ ಎಂದು ಹೇಳಿದರು.

ADVERTISEMENT

ಸಮುದಾಯದ ಜನರ ಬಗ್ಗೆ ಸಾಕಷ್ಟು ವಿದ್ವಾಂಸರು ಅಧ್ಯಯನ ಮಾಡಿದ್ದಾರೆ. ಆದರೂ ಸಮಾಜ ಹಿಂದುಳಿದಿದೆ. ಸಂಶೋಧನೆಗಳು ಕೇವಲ ಅವರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರೆ ಸಾಲದು. ಅವರನ್ನು ಅಸ್ಪೃಶ್ಯರಂತೆ ನೋಡುವುದನ್ನು ನಿಲ್ಲಿಸಿ, ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿ
ಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರಯತ್ನ ಮಾಡಬೇಕು ಎಂದರು.

ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ಸಿ.ಬಿ. ವಿಜಯ ಬಲ್ಲಾಳ್‌ ಮಾತನಾಡಿ, ಬುಡಕಟ್ಟು ಜನಾಂಗ ತಯಾರಿಸುವ ವಸ್ತುಗಳಿಗೆ ಸೂಕ್ತ ಬೆಲೆ ಹಾಗೂ ಪ್ರೋತ್ಸಾಹವನ್ನು ನೀಡಬೇಕು ಎಂದರು.

*
ಬುಡಕಟ್ಟು ಜನಾಂಗದವರು ತಯಾರಿಸುವ ಸಾಂಪ್ರದಾಯಿಕ ವಸ್ತುಗಳಿಗೆ ಮಾರುಕಟ್ಟೆ ಒದಗಿಸಲು, ಜಿಲ್ಲೆಯಲ್ಲಿ ಥೀರ್ಮ್‌ ಪಾರ್ಕ್‌ ನಿರ್ಮಾಣವಾಗಬೇಕು.
–ಪ್ರೊ. ಎಸ್‌.ಎ ಕೃಷ್ಣಯ್ಯ, ಅಕಾಡೆಮಿ ಸದಸ್ಯ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.