ADVERTISEMENT

ಬೃಹತ್ ಬೈಕ್‌ ರ‍್ಯಾಲಿಗೆ ಸ್ವಾಮೀಜಿ ಚಾಲನೆ

ದಾವಣಗೆರೆ: ವಾಲ್ಮೀಕಿ ಜಯಂತ್ಯುತ್ಸವಕ್ಕೆ ಪೂರ್ವಭಾವಿಯಾಗಿ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 19:30 IST
Last Updated 3 ಅಕ್ಟೋಬರ್ 2017, 19:30 IST
ಬೈಕ್‌ ರ‍್ಯಾಲಿಗೆ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಚಾಲನೆ ನೀಡಿದರು.
ಬೈಕ್‌ ರ‍್ಯಾಲಿಗೆ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಚಾಲನೆ ನೀಡಿದರು.   

ದಾವಣಗೆರೆ: ವಾಲ್ಮೀಕಿ ಜಯಂತ್ಯುತ್ಸವಕ್ಕೆ ಪೂರ್ವಭಾವಿಯಾಗಿ ಜಿಲ್ಲಾ ವಾಲ್ಮೀಕಿ ನಾಯಕ ಯುವ ಘಟಕದಿಂದ ನಗರದ ಹೊಂಡದ ವೃತ್ತದಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್‌ ಬೈಕ್‌ ರ‍್ಯಾಲಿಗೆ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಚಾಲನೆ ನೀಡಿದರು.

ನಗರದ ಮದಕರಿ ನಾಯಕ ವೃತ್ತದಿಂದ ಆರಂಭವಾದ ರ‍್ಯಾಲಿಯು ದುರ್ಗಾಂಬಿಕಾ ದೇವಸ್ಥಾನ, ಕಾಳಿಕಾದೇವಿ ರಸ್ತೆ, ಮಂಡಿಪೇಟೆ, ಮಹಾನಗರ ಪಾಲಿಕೆ, ಅರುಣಾ ಚಿತ್ರಮಂದಿರ ವೃತ್ತ, ರಾಮ್‌ ಅಂಡ್‌ ಕೋ ವೃತ್ತ, ಎವಿಕೆ ಕಾಲೇಜು ರಸ್ತೆ, ಹದಡಿ ರಸ್ತೆ ಮಾರ್ಗವಾಗಿ ನಿಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನ ಬಳಿ ಸಮಾವೇಶಗೊಂಡಿತು.

ರ‍್ಯಾಲಿಯಲ್ಲಿ ದಾವಣಗೆರೆ ತಾಲ್ಲೂಕು ಒಳಗೊಂಡಂತೆ ಹರಿಹರ, ಹರಪನಹಳ್ಳಿ, ಜಗಳೂರು, ಚನ್ನಗಿರಿ ಹಾಗೂ ಹೊನ್ನಾಳಿ ತಾಲ್ಲೂಕುಗಳಿಂದಲೂ  ಸಮುದಾಯದ ಸಾವಿರಾರು ಮಂದಿ ಭಾಗವಹಿಸಿದ್ದರು. ರ‍್ಯಾಲಿಯಲ್ಲಿ ಹಾರ್ಲೆ ಡೇವಿಡ್‌ಸನ್‌ ಬೈಕ್‌ ಗಮನಸೆಳೆಯಿತು.

ADVERTISEMENT

‘ನಾಯಕ ಜನಾಂಗಕ್ಕೆ ಶೇ 7.5 ಮೀಸಲಾತಿಯನ್ನು ನಿಗದಿ ಮಾಡಬೇಕು. ಮದಕರಿ ನಾಯಕರ ಆಳ್ವಿಕೆ ಕಾಲದಲ್ಲಿ ನಿರ್ಮಾಣಗೊಂಡಿರುವ ಸ್ಮಾರಕಗಳನ್ನು ಅಭಿವೃದ್ಧಿಪಡಿಸಿ, ಪ್ರವಾಸಿ ಕೇಂದ್ರಗಳನ್ನಾಗಿ ಮಾಡಬೇಕು. ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಅವರ ಹೆಸರು ಇಡಬೇಕು ಎಂದು ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಲಾಗುವುದು ಎಂದು ವಾಲ್ಮೀಕಿ ನಾಯಕ ಸಮುದಾಯದ ಉಪಾಧ್ಯಕ್ಷ ಆರ್.ಲಕ್ಷ್ಮಣ ತಿಳಿಸಿದರು.

ಎಸ್‌.ವಿ.ರಾಮಚಂದ್ರ, ಯಶವಂತರಾವ್‌ ಜಾಧವ್, ಜಿಲ್ಲಾ ಪಂಚಾಯ್ತಿ ಸದಸ್ಯ ಓಬಳಪ್ಪ, ಹಾಲೇಶಪ್ಪ, ರಾಘು ದೊಡ್ಮನಿ, ಕುಂದವಾಡದ ಗಣೇಶ್‌, ಲಿಂಗರಾಜ್‌, ಪ್ರವೀಣ್‌ ಶಾಮನೂರು, ಗಣೇಶ್‌ ಹುಲ್ಮನಿ, ಲಿಂಗರಾಜ್‌ ಪಣಿಯಾಪುರ, ಶಿವಮೂರ್ತಿ, ಬಸವರಾಜ್‌ ಹಾಗೂ ಸಮುದಾಯದ ಮುಖಂಡರು ಬೈಕ್‌ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

5ಕ್ಕೆ ವಾಲ್ಮೀಕಿ ಪುತ್ಥಳಿ ಅನಾವರಣ: ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಅ.5ರಂದು ನಡೆಯುವ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಸದಸ್ಯ ವಿ.ಎಸ್‌.ಉಗ್ರಪ್ಪ ಅವರಿಗೆ ಬೆಳ್ಳಿ ಖಡ್ಗ ನೀಡಿ ಗೌರವಿಸಲಾಗುವುದು ಎಂದು ಸಮಾಜದ ಮುಖಂಡ ಆರ್‌.ಎಸ್‌.ಶೇಖರಪ್ಪ ತಿಳಿಸಿದರು.

ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಲ್ಮೀಕಿ ಪುತ್ಥಳಿಯ ಲೋಕಾರ್ಪಣೆ ಮಾಡಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರಿಗೆ ಅ. 4ರಂದು ನಿಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನದಿಂದ ನಾಲ್ಕು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಸಮುದಾಯದ ಜನರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮುಖಂಡರಾದ ಡಿ.ಸಿ.ಲಕ್ಷ್ಮಣ ನಾಯಕ, ಆರ್‌.ಎಸ್‌.ರಾಕೇಶ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ಮಾಹಿತಿಗಾಗಿ ಮೊ: 9886008828.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.