ADVERTISEMENT

ಬೆಂಗಳೂರು ಅಮ್ಮನ ಕೂಚುಪುಡಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST
ಬೆಂಗಳೂರು ಅಮ್ಮನ ಕೂಚುಪುಡಿ
ಬೆಂಗಳೂರು ಅಮ್ಮನ ಕೂಚುಪುಡಿ   

ಮಂಗಳೂರು:  ದೇಹದ ಒಂದು ಭಾಗ ಶಿವ, ಇನ್ನೊಂದು ಭಾಗ ಪಾರ್ವತಿ, ಎರಡೂ ಸೇರಿಕೊಂಡಾಗ ಅದು ಶಕ್ತಿಯಾಗುತ್ತದೆ ಎಂಬುದನ್ನು ಅವರು ಹೃದಯಂಗಮವಾಗಿ ಬಿಂಬಿಸಿದರು. ತಾಂಡವ ನೃತ್ಯ, ಶೃಂಗಾರ ರಸಭಾವಗಳೆಲ್ಲ ಅಲ್ಲಿ ಸೃಷ್ಟಿಗೊಂಡಿದ್ದವು...

17ನೇ ರಾಷ್ಟ್ರೀಯ ಯುವಜನೋತ್ಸವದ ಪ್ರಯುಕ್ತ ಇಲ್ಲಿ ಶನಿವಾರ ನಡೆದ ಎರಡನೇ ದಿನದ ಸ್ಪರ್ಧಾ ಕಾರ್ಯಕ್ರಮದಲ್ಲಿನ ಕೂಚುಪುಡಿ ವಿಭಾಗದಲ್ಲಿ ಇದ್ದ ಒಟ್ಟು ಹತ್ತು ಮಂದಿ ಸ್ಪರ್ಧಿಗಳಲ್ಲಿ ಗಮನ ಸೆಳೆದವರು 6 ವರ್ಷದ ಬಾಲಕನ ತಾಯಿ, ಬೆಂಗಳೂರಿನ ಅರ್ಚನಾ ಪುಣ್ಯೇಶ್.

ಸ್ಪರ್ಧೆಯ ಬಳಿಕ ಅವರು `ಪ್ರಜಾವಾಣಿ~ಯೊಂದಿಗೆ ತಮ್ಮ ಅನುಭವ ಹಂಚಿಕೊಂಡರು. `ನಾನು ಮೂರನೇ ಬಾರಿಗೆ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಂಡಿದ್ದೇನೆ. ಕಳೆದ ಬಾರಿ ನನಗೆ ದ್ವಿತೀಯ ಸ್ಥಾನ ಲಭಿಸಿತ್ತು. 2001ರಲ್ಲಿ ಹಿಸ್ಸಾರ್‌ನಲ್ಲಿ ನಡೆದ ರಾಷ್ಟ್ರೀಯ ಯುವಜನೋತ್ಸವದಲ್ಲಿ ಮೊದಲ ಬಾರಿ ಭಾಗವಹಿಸಿದ್ದೆ. ಅರ್ಧನಾರೀಶ್ವರ ಎಂಬುದು ಕೂಚುಪುಡಿಯಲ್ಲಿನ ಒಂದು ಸಾಂಪ್ರದಾಯಿಕ ನೃತ್ಯ. ಈ ಬಾರಿ ಪ್ರಥಮ ಸ್ಥಾನ ಗಳಿಸುವ ವಿಶ್ವಾಸ ಇದೆ~ ಎಂದರು.

ADVERTISEMENT

ಪುಣ್ಯೇಶ್ 18 ವರ್ಷಗಳಿಂದ ಕೂಚುಪುಡಿ ನೃತ್ಯಾಭ್ಯಾಸ ಮಾಡುತ್ತಿದ್ದು, ರಾಜಾಜಿನಗರದಲ್ಲಿ ನೃತ್ಯ ಶಾಲೆಯನ್ನೂ ನಡೆಸುತ್ತಿದ್ದಾರೆ. ಸುನಂದಾ ದೇವಿ ಮತ್ತು ಧರಣಿ ಕಶ್ಯಪ್ ಅವರಲ್ಲಿ ಕೂಚುಪುಡಿ ಕಲಿತ ಇವರುಮ ಈಗ 65ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗುರುವಾಗಿದ್ದಾರೆ- ಗುರಿ ತೋರಿಸುತ್ತಿದ್ದಾರೆ.

`ಬೇರೆ ಕಡೆಗೆ ಹೋಲಿಸಿದರೆ ಮಂಗಳೂರಿನಲ್ಲಿ ತುಂಬಾ ಚೆನ್ನಾಗಿ ವ್ಯವಸ್ಥೆ ಮಾಡಿದ್ದಾರೆ. ಊಟ, ವಸತಿ ಎಲ್ಲವೂ ಚೆನ್ನಾಗಿದೆ. ಇಲ್ಲಿ ಕಲಾರಸಿಕರು ನೀಡಿದ ಪ್ರೋತ್ಸಾಹವೂ ಉತ್ತೇಜನಕಾರಿ~ ಎಂದು ಬಾಯ್ತುಂಬಾ ಹೊಗಳಿದರು.

ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಹರಿಯಾಣದ ರಿದಂ ಬಾಲೋನಿ ಅವರಿಗಿನ್ನೂ 16 ಮೀರಿಲ್ಲ. ಆದರೆ ನೃತ್ಯದಲ್ಲಿ ಪ್ರೌಢ  ಅಭಿನಯ ನೀಡಿದರು. ವಿಶೇಷವೆಂದರೆ ಅವರ ಕೂಚುಪುಡಿ ನೃತ್ಯಗುರು ಮುಕ್ತಾ ನಾಗೇಶ್ ಮೂಲತಃ ಮಂಗಳೂರಿನವರಂತೆ! ಮಧ್ಯಪ್ರದೇಶದ ರಾಶಿ ದಾಸ್, ನೃತ್ಯದ ಮೂಲಕ ಮಹಿಶಾಸುರ ಮರ್ದಿನಿ ಮೆರುಗು ಕಟ್ಟಿಕೊಟ್ಟರು. ಛತ್ತೀಸ್‌ಗಢದ ಪೂಜಾ ರಾಜೇಂದ್ರನ್ ಶಿವ-ಪಾರ್ವತಿ ಚಿತ್ರಣ ಮುಂದಿಟ್ಟರು. ತಮಿಳುನಾಡಿನ ಪಿ.ವೈಷ್ಣವಿ, ಕೇರಳದ ಅಶ್ವತಿ ಜುಗೇಶ್, ಪಂಜಾಬ್‌ನ ಸುರಭಿ ಯಾದವ್, ಒಡಿಶಾದ ಶ್ವೇತಾ ನಾಯಕ್, ಆಂಧ್ರದ ಸುದೀಶಾ ಇತರ ಸ್ಪರ್ಧಿಗಳಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.