ADVERTISEMENT

ಬೆಂಬಲಿಗರ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ

ಪರಿವರ್ತನಾ ಸಮಾವೇಶದಲ್ಲಿ ಬಿಜೆಪಿ ಸೇರ್ಪಡೆ ಇಲ್ಲ: ಹಾಲಾಡಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 19:30 IST
Last Updated 11 ನವೆಂಬರ್ 2017, 19:30 IST
ಬೆಂಬಲಿಗರ ಅಭಿಪ್ರಾಯ  ಪಡೆದು ಅಂತಿಮ ತೀರ್ಮಾನ
ಬೆಂಬಲಿಗರ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ   

ಕುಂದಾಪುರ: ಸೋಮವಾರ ಇಲ್ಲಿ ನಡೆಯುವ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಸಾಮಾನ್ಯ ಪ್ರಜೆಯಂತೆ ಪಾಲ್ಗೊಳ್ಳುವೆ. ಸಮಾವೇಶದ ವೇದಿಕೆ ಮೇಲೆ ಹೋಗುವುದಿಲ್ಲ. ಸಮಾವೇಶದಲ್ಲಿ ಪಕ್ಷಕ್ಕೆ ಸೇರುವುದಿಲ್ಲ. ಬೆಂಬಲಿಗರ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ತೆಗೆದುಕೊಳ್ಳುವೆ ಎಂದು ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.

"ಬಿಜೆಪಿ ಸೇರುವ ವೇಳೆ ಯಾವುದೇ ಷರತ್ತು ವಿಧಿಸುವುದಿಲ್ಲ. ಕಾರ್ಯಕರ್ತನಾಗಿ ದುಡಿಯುವೆ. ಯಾವುದೇ ಹುದ್ದೆಗೆ ಇಲ್ಲಿಯತನಕ ಅರ್ಜಿ ಹಾಕಿ ಪಡೆದಿಲ್ಲ. ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದೇನೆ. ಪಕ್ಷೇತರ ಶಾಸಕನಾಗಿರುವ ನಾನು ರಾಜಕೀಯ ಪಕ್ಷವನ್ನು ಸೇರಲು ತಾಂತ್ರಿಕ ಸಮಸ್ಯೆ ಇರುವುದರಿಂದ ಸೇರ್ಪಡೆಯನ್ನು ನಂತರದ ದಿನದಲ್ಲಿ ತಿಳಿಸುವೆ. ಬೇರೆ ಪಕ್ಷಗಳಿಂದ ಕೂಡಾ ಆಹ್ವಾನ ಬಂದಿತ್ತು. ಆದರೆ ನಾನು ಹೋಗಿಲ್ಲ’ ಎಂದು ಅವರು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹಿಂದಿನ ಪರಿಸ್ಥಿತಿ ಈಗ ಇಲ್ಲ. ಈಗ ಕಾಲ ಬದಲಾಗಿದೆ. ಅಧಿಕಾರದ ಆಸೆಯಿಂದ ಪಕ್ಷಕ್ಕೆ ಸೇರಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುವ ಮಾಹಿತಿಗೆ ನಾನ್ಯಾಕೆ ತಲೆಕೆಡಸಿಕೊಳ್ಳಲಿ. ನಾನು ಬಿಜೆಪಿ ಬಿಟ್ಟು ಯಾವುದೇ ಪಕ್ಷಕ್ಕೂ ಹೋಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ವಿಧಾನ ಪರಿಷತ್‌ ಸದಸ್ಯರಾದ ಪ್ರತಾಪಚಂದ್ರ ಶೆಟ್ಟಿ ಅವರ ಜತೆಗೆ ಮಾತನಾಡದೆ 23 ವರ್ಷ ಕಳೆದಿವೆ. ಹಾಗಿರುವಾಗ ಪ್ರವಾಸಿ ಮಂದಿರದಲ್ಲಿ ಅವರ ಭೇಟಿ ಸಾಧ್ಯವೆ? ಎಲ್ಲ ಜಾತಿ ಜನಾಂಗದವರ ಮನೆಯ ಎದುರು ನನ್ನ ಭಾವಚಿತ್ರ ಇವೆ. ಅವನ್ನು ತೆಗೆಯಿರಿ ಎಂದು ಹೇಳಲು ಆಗಲ್ಲ. ಅಭಿಮಾನದಿಂದ ಹಾಕಿಕೊಂಡಿದ್ದಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.