ADVERTISEMENT

ಬೆಂಬಲಿಗರ ಜತೆ ಯಡಿಯೂರಪ್ಪ ರಹಸ್ಯ ಸಭೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಇಲ್ಲಿನ ಕೆಎಲ್‌ಇ ಸಂಸ್ಥೆಯ ಅತಿಥಿಗೃಹದಲ್ಲಿ  ತಮ್ಮ ಬೆಂಬಲಿಗ ಶಾಸಕರು, ಸಂಸದರ ರಹಸ್ಯ ಸಭೆ ನಡೆಸಿ ಹೊಸ ಪಕ್ಷ ಸ್ಥಾಪಿಸುವ ಕುರಿತು ಚರ್ಚಿಸಿದರು.

ಈಗಾಗಲೇ ಬಿಜೆಪಿ ತೊರೆಯುವ ಸೂಚನೆ ನೀಡಿರುವ ಯಡಿಯೂರಪ್ಪ, ಹೊಸ ಪಕ್ಷದ ರಚನೆ ಕುರಿತು ಪ್ರಸ್ತಾಪಿಸಿ,  ಈ ಭಾಗದಲ್ಲಿ ಹೊಸ ಪಕ್ಷದ ಸಂಘಟನೆಗೆ ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು ಎಂದು ಸಭೆಯಲ್ಲಿ ಭಾಗವಹಿಸಿದ್ದ ಅವರ ಬೆಂಬಲಿಗರು ಹೇಳಿದರು.

 ಇದಕ್ಕೆ ತಕ್ಷಣ ಒಪ್ಪದ ಅವರ ಬೆಂಬಲಿಗರು, `ನೀವು ಈಗಲೇ ಬಿಜೆಪಿಯಿಂದ ಹೊರ ನಡೆಯುವುದು  ಸರಿಯಲ್ಲ. ಪಕ್ಷದಲ್ಲಿ ಉನ್ನತ ಸ್ಥಾನದ ಬಗ್ಗೆ ಮತ್ತೊಮ್ಮೆ ಹೈಕಮಾಂಡ್ ಜೊತೆಗೆ ಮಾತನಾಡುವುದು ಒಳಿತು. ಯಾವುದಕ್ಕೂ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳಬಾರದು~ ಎಂದು ಮನವಿ ಮಾಡಿದರು.

ಬೆಂಬಲಿಗರ ಒತ್ತಡಕ್ಕೆ ಮಣಿಯದ ಯಡಿಯೂರಪ್ಪ, `ಬಿಜೆಪಿ ಹೈಕಮಾಂಡ್ ಜೊತೆಗೆ ಚರ್ಚಿಸುವ ಅಗತ್ಯವಿಲ್ಲ. ಅವರ ಮೇಲೆ ಒತ್ತಡ ತರುವುದು ಸರಿಯಲ್ಲ. ನಮ್ಮ ದಾರಿ ನಾವು ಹುಡುಕಿಕೊಳ್ಳೋಣ~ ಎಂದರು.

`ಯಡಿಯೂರಪ್ಪ ಅವರು ಗುರುವಾರ ರಾತ್ರಿ ಇಲ್ಲಿಯೇ ವಾಸ್ತವ್ಯ ಹೂಡಿದ್ದರಿಂದ ಅವರನ್ನು ಭೇಟಿ ಮಾಡಿ ಮಾತನಾಡಿದೆವು. ರಾಜಕಾರಣದ ಬಗೆಗೂ ಚರ್ಚೆ ನಡೆಯಿತು. ವಿಶೇಷವೇನೂ ಇಲ್ಲ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ `ಪ್ರಜಾವಾಣಿ~ಗೆ ತಿಳಿಸಿದರು.

`ಯಡಿಯೂರಪ್ಪ ಅವರು ಕೆಎಲ್‌ಇ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದರು. ಬೆಳಿಗ್ಗೆ ಅವರೊಂದಿಗೆ ವಾಯು ವಿಹಾರಕ್ಕೆ ತೆರಳಿದ್ದೆ. ಯಾವುದೇ ಅಧಿಕೃತ ಸಭೆ ನಡೆದಿಲ್ಲ~ ಎಂದು ಸಂಸದ ಸುರೇಶ ಅಂಗಡಿ ತಿಳಿಸಿದರು.

ಸಭೆಯಲ್ಲಿ ಉಮೇಶ ಕತ್ತಿ ಅವರಲ್ಲದೇ ಮಾಜಿ ಸಚಿವ ಲಕ್ಷ್ಮಣ ಸವದಿ, ಸಂಸದರಾದ ಡಾ. ಪ್ರಭಾಕರ ಕೋರೆ, ಸುರೇಶ ಅಂಗಡಿ, ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಶಂಕರಗೌಡ ಪಾಟೀಲ ಮತ್ತಿತರರು ಭಾಗವಹಿಸಿದ್ದರೆಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.