ADVERTISEMENT

ಬೆಲೆ ಏರಿಕೆ: 9 ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 16:55 IST
Last Updated 3 ಫೆಬ್ರುವರಿ 2011, 16:55 IST

ಬೆಂಗಳೂರು: ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದ ವಿರುದ್ಧ ಎಡ ಪಕ್ಷಗಳು, ಜೆಡಿಎಸ್ ಸೇರಿದಂತೆ ಎಲ್ಲ ಜಾತ್ಯತೀತ ಪಕ್ಷಗಳು ಇದೇ 9ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಿವೆ. ಅದಕ್ಕೆ ಪೂರಕವಾಗಿ 8ರಂದು ರಾಜ್ಯದ ರಾಜಧಾನಿಯಲ್ಲೂ ರ್ಯಾಲಿ ನಡೆಯಲಿದೆ.

ಗುರುವಾರ ಸಿಪಿಎಂ, ಸಿಪಿಐ ಮತ್ತು ಫಾರ್ವರ್ಡ್ ಬ್ಲಾಕ್ ಮುಖಂಡರೊಡನೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ‘ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರದ ವಿರುದ್ಧದ ರಾಷ್ಟ್ರವ್ಯಾಪಿ ಆಂದೋಲನದ ಭಾಗವಾಗಿ ದೆಹಲಿ, ಬೆಂಗಳೂರಿನಲ್ಲಿ ರ್ಯಾಲಿ ನಡೆಯಲಿದೆ’ ಎಂದು ತಿಳಿಸಿದರು.

‘ಫೆ. 9ರಂದು ದೆಹಲಿಯಲ್ಲಿ ನಡೆಯುವ ರ್ಯಾಲಿಯಲ್ಲಿ ನಾನು ಸಹ ಭಾಗವಹಿಸುತ್ತೇನೆ. ಅದೇ ದಿನ ಸಂಜೆ ಒಂಬತ್ತು ಜಾತ್ಯತೀತ ಪಕ್ಷಗಳ ಮುಖಂಡರ ಸಭೆ ನಡೆಯಲಿದೆ. 2ಜಿ ತರಂಗಾಂತರ ಹಗರಣವೂ ಸೇರಿದಂತೆ ಭ್ರಷ್ಟಾಚಾರದ ವಿಷಯದಲ್ಲಿ ಮುಂದಿನ ನಡೆ ಕುರಿತು ನಿರ್ಧರಿಸಲಾಗುವುದು’ ಎಂದರು.

ರಾಜಭವನದ ಎದುರು ಧರಣಿ: ‘ದೆಹಲಿಯಲ್ಲಿ ನಡೆಯುವ ಬೃಹತ್ ಪ್ರತಿಭಟನೆಗೆ ಪೂರಕವಾಗಿ ಫೆ. 8ರಂದು ಬೆಂಗಳೂರಿನಲ್ಲಿ ರ್ಯಾಲಿ ನಡೆಸಲಾಗುವುದು. ರಾಜಭವನದವರೆಗೂ ರ್ಯಾಲಿಯಲ್ಲಿ ತೆರಳಿ ಅಲ್ಲಿ ಧರಣಿ ನಡೆಸಲಾಗುವುದು. ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದು, ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಣ್ತೆರೆಸುವ ಉದ್ದೇಶದಿಂದ ಆಂದೋಲನ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಕಲಾಪಕ್ಕೆ ಅಡ್ಡಿ ಸಲ್ಲ: 2ಜಿ ತರಂಗಾಂತರ ಹಗರಣಕ್ಕೆ ಸಂಬಂಧಿಸಿದಂತೆ ದೂರಸಂಪರ್ಕ ಖಾತೆಯ ಮಾಜಿ ಸಚಿವ ಎ.ರಾಜಾ ಅವರನ್ನು ಈಗಾಗಲೇ ಸಿಬಿಐ ಬಂಧಿಸಿದೆ. ಇನ್ನೂ ಜಂಟಿ ಸಂಸದೀಯ ಸಮಿತಿ ತನಿಖೆಗೆ ಪಟ್ಟು ಹಿಡಿದು ಸಂಸತ್ ಕಲಾಪಕ್ಕೆ ಅಡ್ಡಿ ಮಾಡುವುದು ಸರಿಯಲ್ಲ. ಕಲಾಪಕ್ಕೆ ಅಡ್ಡಿಪಡಿಸುವ ಬಿಜೆಪಿಯ ನಿರ್ಧಾರವನ್ನು ಜಾತ್ಯತೀತ ಪಕ್ಷಗಳು ಬೆಂಬಲಿಸುವುದಿಲ್ಲ ಎಂದರು.

‘ಭ್ರಷ್ಟಾಚಾರದ ವಿಷಯದಲ್ಲಿ ನಮ್ಮ ಹೋರಾಟ ಕೇವಲ 2ಜಿ ತರಂಗಾಂತರ ಹಗರಣಕ್ಕೆ ನಿಲ್ಲುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಹಗರಣಗಳೂ ಸೇರಿದಂತೆ ಎಲ್ಲ ಬಗೆಯ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇವೆ’ ಎಂದು ಹೇಳಿದರು.

ಸಿಪಿಎಂ ಮುಖಂಡ ಜಿ.ಎನ್.ನಾಗರಾಜ್ ಮಾತನಾಡಿ, ಹೆಚ್ಚುತ್ತಿರುವ ಕಾಳಸಂತೆಕೋರರು, ಮುಂಗಡ ವ್ಯಾಪಾರ, ಕಾರ್ಪೋರೇಟ್ ಸಂಸ್ಥೆಗಳು ಆಹಾರ ವಸ್ತುಗಳ ವ್ಯಾಪಾರದಲ್ಲಿ ಪಾಲ್ಗೊಂಡಿರುವುದು ಮತ್ತು ಆಹಾರ ಧಾನ್ಯಗಳ ಕೊರತೆಯೇ ಬೆಲೆ ಏರಿಕೆಗೆ ಕಾರಣ. ಈ ಸಮಸ್ಯೆಗೆ ಪರಿಹಾರ ದೊರಕಿಸುವಂತೆ ಆಗ್ರಹಿಸಿ ಹೋರಾಟ ನಡೆಯಲಿದೆ ಎಂದರು.

ಸಿಪಿಐ ಮುಖಂಡ ಎಚ್.ವಿ.ಅನಂತಸುಬ್ಬರಾವ್, ಫಾರ್ವರ್ಡ್ ಬ್ಲಾಕ್ ಮುಖಂಡ ಜಿ.ಆರ್.ಶಿವಶಂಕರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.