ADVERTISEMENT

ಬೆಳಗಾವಿ: ಕಾರಾಗೃಹದಲ್ಲಿ ಟಿವಿ, ತಂಬಾಕು, ಸಿಮ್‌ ಕಾರ್ಡ್‌ ಪತ್ತೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 12:40 IST
Last Updated 17 ಏಪ್ರಿಲ್ 2018, 12:40 IST

ಬೆಳಗಾವಿ: ಇಲ್ಲಿನ ಹಿಂಡಲಗಾದಲ್ಲಿರುವ ಕೇಂದ್ರ ಕಾರಾಗೃಹದಲ್ಲಿನ ಕೈದಿಗಳ ಬ್ಯಾರಕ್‌ಗಳ ಮೇಲೆ ಪೊಲೀಸರು ಮಂಗಳವಾರ ದಿಢೀರ್‌ ದಾಳಿ ಮಾಡಿ ಶೋಧ ನಡೆಸಿದ್ದು, ಟಿವಿ, ರೇಡಿಯೊ, ತಂಬಾಕು ಪೊಟ್ಟಣಗಳು ಸೇರಿದಂತೆ ಹಲವು ನಿಷೇಧಿತ ವಸ್ತುಗಳು ಪತ್ತೆಯಾಗಿವೆ.

ನಗರ ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ ನೇತೃತ್ವದಲ್ಲಿ ಡಿಸಿಪಿಗಳಾದ ಸೀಮಾ ಲಾಟ್ಕರ್‌ ಹಾಗೂ ಮಹಾನಿಂಗ ನಂದಗಾವಿ ಮಾರ್ಗದರ್ಶನದಲ್ಲಿ 15 ಪೊಲೀಸ್‌ ಅಧಿಕಾರಿಗಳು ಮತ್ತು 200 ಮಂದಿ ಸಿಬ್ಬಂದಿ ಬೆಳಿಗ್ಗೆ 7ರಿಂದ 10.30ರವರೆಗೆ ಎಲ್ಲ ಬ್ಯಾರಕ್‌ಗಳಲ್ಲೂ ಲೋಹಶೋಧಕಗಳ ನೆರವಿನಿಂದ ತಪಾಸಣೆ ನಡೆಸಿದರು.

ಜೈಲಿನೊಳಕ್ಕೆ ನಿಷೇಧಿತ ವಸ್ತುಗಳನ್ನು ಕೊಂಡೊಯ್ಯಲಾಗುತ್ತಿದೆ ಹಾಗೂ ವಿಚಾರಣಾಧೀನ ಕೈದಿಗಳಿಗೆ ಮಾದಕ ವಸ್ತುಗಳ ಪೂರೈಕೆ ಆಗುತ್ತಿದೆ ಎಂಬ ಮಾಹಿತಿ ಆಧರಿಸಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಟ್ಟಿದ್ದ 1.50 ಕೆ.ಜಿ. ತಂಬಾಕು ದೊರೆತಿದೆ.

ADVERTISEMENT

‘ಎಲ್ಲ ಬ್ಯಾರಕ್‌ಗಳು ಹಾಗೂ ಸಂಶಯಾಸ್ಪದ ಸ್ಥಳಗಳನ್ನು ಪರಿಶೀಲಿಸಲಾಗಿದೆ. ಎಲ್‌ಜಿ ಕಂಪನಿಯ ಪ್ಲ್ಯಾಟ್ರಾನ್ ಟಿವಿ, ಕೆಂಪು ಬಣ್ಣದ ಸಣ್ಣ ರೇಡಿಯೊ, 4 ಸ್ಟೀಲ್‌ ತಟ್ಟೆಗಳು, 2 ಪ್ಲಾಸ್ಟಿಕ್ ಬಾಟಲಿಗಳು, ಸ್ವಲ್ಪ ಸಕ್ಕರೆ ಹಾಗೂ ಬೂಸ್ಟ್‌ ಇದ್ದ 2 ಪ್ಲಾಸ್ಟಿಕ್‌ ಡಬ್ಬಿಗಳು, 2 ಸುಣ್ಣದ ಪಾಕೆಟ್‌ಗಳು, 2 ಚೈನಿ ತಂಬಾಕು ಪಾಕೆಟ್‌ಗಳು, 5 ರಾಜೇಶ ಬೀಡಿ ಕಟ್ಟುಗಳು, 4 ಬೆಂಕಿ ಕಡ್ಡಿ ಪೊಟ್ಟಣ, ತಲಾ ಅರ್ಧ ಕೆ.ಜಿ.ಯ 4 ಗೋಧಿ ಹಿಟ್ಟು, ಮ್ಯಾಗಿ ನೋಡಲ್ಸ್‌ ಪಾಕೆಟ್‌, ಒಣ ಮೀನುಗಳಿದ್ದ ಪ್ಲಾಸ್ಟಿಕ್‌ ಡಬ್ಬಿ, 6 ಹಲಸಿನ ಹಪ್ಪಳದ ಪಾಕೆಟ್‌ಗಳು, 2 ಉದ್ದಿನ ಹಪ್ಪಳದ ಪಾಕೆಟ್‌ಗಳು, ತಲಾ ಅರ್ಧ ಕೆ.ಜಿ.ಯಷ್ಟು ಅವಲಕ್ಕಿ ಪಾಕೆಟ್‌ಗಳು ಪತ್ತೆಯಾಗಿವೆ’ ಎಂದು ಆಯುಕ್ತ ಡಿ.ಸಿ. ರಾಜಪ್ಪ ತಿಳಿಸಿದರು.

‘ಪ್ಲಾಸ್ಟಿಕ್ ಚೀಲದಲ್ಲಿ ಹುರಿದ ಶೇಂಗಾ ಕೂಡ ಪತ್ತೆಯಾಗಿದೆ (ಅದು ಕೆಟ್ಟು ಹೋಗಿದೆ). ಪ್ಲಾಸ್ಟಿಕ್‌ ಡಬ್ಬಿಯಲ್ಲಿ ನೂಡಲ್ಸ್‌ ಇತ್ತು. ಪ್ಲಾಸ್ಟಿಕ್‌ ಚೀಲದಲ್ಲಿದ್ದ 1 ಕೆ.ಜಿ. ಮೈದಾ ಹಿಟ್ಟು, 4 ಪಾಕೆಟ್‌ ಉದ್ದಿನ ಬೇಳೆ ಹಿಟ್ಟು (1 ಕೆ.ಜಿ.), ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಟ್ಟಿದ್ದ ಕೊತ್ತಂಬರಿ ಕಾಳುಗಳು, ಪ್ಲಾಸ್ಟಿಕ್‌ ಡಬ್ಬಿಯಲ್ಲಿ ಮಸಾಲ ಪದಾರ್ಥ, 25 ಮಸಾಲ ಪಾಕೆಟ್‌ಗಳು, 200 ಗ್ರಾಂ.ನಷ್ಟು ತೊಗರಿ ಬೇಳೆ (ಪ್ಲಾಸ್ಟಿಕ್ ಚೀಲದಲ್ಲಿದ್ದದ್ದು), 200 ಗ್ರಾಂ.ನ 2 ಚಿಲ್ಲಿ ಪಾಕೆಟ್‌ಗಳು, ₹ 1,495 ನಗದು, ಸ್ಟೀಲ್‌ ತಂಬಿಗೆ, ಸ್ಟೀಲ್ ತವಾ, ಅಲ್ಯುಮಿನಿಯಂ ಪಾತ್ರೆ, ಕೊಬ್ಬರಿ ತುರಿಯುವ ಸ್ಟೀಲ್‌ ವಸ್ತು, ಪ್ಲಾಸ್ಕ್‌, ಸಾಸ್‌ ಬಾಟಲಿಗಳು (ಒಂದು ತುಂಬಿದ್ದು ಹಾಗೂ 4 ಖಾಲಿ), ಅರ್ಧ ಕೆ.ಜಿ. ಬಾಟಲಿಯಲ್ಲಿ ಅಡುಗೆ ಎಣ್ಣೆ, ಒಣ ರೊಟ್ಟಿಗಳು ತುಂಬಿದ್ದ 2 ಪ್ಲಾಸ್ಟಿಕ್‌ ಚೀಲಗಳು, ನಾಲ್ಕು ಮೊಬೈಲ್‌ ಸಿಮ್ ಕಾರ್ಡ್‌ಗಳು (ಐಡಿಯಾ, ಡೊಕೊಮೊ, ವೊಡಾಫೋನ್, ಬಿಎಸ್‌ಎನ್‌ಎಲ್) ಸಿಕ್ಕಿವೆ’ ಎಂದು ಮಾಹಿತಿ ನೀಡಿದರು.

ವಶಪಡಿಸಿಕೊಂಡ ವಸ್ತುಗಳನ್ನು ಗ್ರಾಮೀಣ ಪೊಲೀಸ್‌ ಠಾಣೆಗೆ ಹಸ್ತಾಂತರ ಮಾಡಲಾಗಿದೆ. ಜೈಲಿನೊಳಗೆ ನಿಷೇಧಿತ ವಸ್ತುಗಳನ್ನು ಕೊಂಡೊಯ್ದಿರುವ ಸಂಬಂಧ ಅಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕಾರಾಗೃಹ ಡಿಜಿಪಿ, ಎಡಿಜಿಪಿ ಅವರ ಸೂಚನೆ ಮೇರೆಗೆ ತಪಾಸಣೆ ನಡೆಸಲಾಯಿತು. ಈ ವೇಳೆ ಕಂಡುಬಂದ ಸಂಗತಿಗಳನ್ನೂ ಅವರ ಗಮನಕ್ಕೆ ತರಲಾಗಿದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.