ADVERTISEMENT

ಬೇಲೇಕೇರಿ: ಸಿಬಿಐ ಸಾಕ್ಷ್ಯ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST

ಕಾರವಾರ: ಬೇಲೆಕೇರಿ ಬಂದರಿನಲ್ಲಿ 2010ರಲ್ಲಿ ನಡೆದ ಅದಿರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಂಗಳವಾರ ಐವರಿಂದ (ಪಂಚರಿಂದ) ಸಾಕ್ಷ್ಯಗಳನ್ನು ಸಂಗ್ರಹಿಸಿತು.

ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಸಿಬಿಐ ಎಎಸ್ಪಿ- ಬಿ.ದಾಸ, ಇನ್‌ಸ್ಪೆಕ್ಟರ್ ರಾಜಶೇಖರ್ ಅವರನ್ನೊಳಗೊಂಡ ಇಬ್ಬರ ತಂಡ ಮಂಗಳವಾರ ಐದು ಜನರನ್ನು ವಿಚಾರಣೆಗೊಳಪಡಿಸಿ ಸಾಕ್ಷ್ಯಗಳನ್ನು ಕಲೆಹಾಕಿತು.

ಒಬ್ಬೊಬ್ಬರನ್ನು ಸುಮಾರು ಹತ್ತರಿಂದ ಇಪ್ಪತ್ತು ನಿಮಿಷಗಳ ಕಾಲ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ ಅವರಿಂದ ಮಾಹಿತಿ ಸಂಗ್ರಹಿಸಿದರು.

'ಅದಿರು ವಶಕ್ಕೆ ಪಡೆದುಕೊಂಡ ಸಂದರ್ಭದಲ್ಲಿ ಪ್ರಕರಣಕ್ಕೆ ತಕ್ಷಣವೇ ಮುಗಿಯಲಿದೆ ಎಂದು ಪಂಚನಾಮೆಗೆ ಸಹಿ ಹಾಕಿದ್ದೆವು. ಪ್ರಕರಣದ ತನಿಖೆ ಸಿಐಡಿ ನಡೆಸುತ್ತಿದ್ದ ಸಂದರ್ಭದಲ್ಲಿ 3-4 ಸಲ ನಮ್ಮನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಸಿಬಿಐ ವಿಚಾರಣೆಗೆ ಸಂಬಂಧಿಸಿದಂತೆ ನಾಲ್ಕು ದಿನಗಳ ಹಿಂದೆ ನೋಟಿಸ್ ಬಂದಿತ್ತು. ಆಗಾಗ ನಡೆಯುತ್ತಿರುವ ಈ ವಿಚಾರಣೆ ನಮಗೆ ಕಿರಿಕಿರಿ ತಂದಿದೆಯಲ್ಲದೆ ದಿನದ ಕೂಲಿಗೂ ಕತ್ತರಿ ಹಾಕಿದೆ' ಎಂದು ವಿಚಾರಣೆ ಬಂದವರೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.

ತನಿಖೆಯ ಕುರಿತು ಸಿಬಿಐ ಅಧಿಕಾರಿಗಳನ್ನು ಕೇಳಿದಾಗ `ಅದಿರು ಕಳ್ಳತನಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ವಿಚಾರಣೆ ಮಾಡಲು ಇಲ್ಲಿಗೆ ಆಗಮಿಸಿದ್ದೇವೆ' ಎಂದಷ್ಟೇ ಉತ್ತರಿಸಿದರು.

ಅದಿರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎಂಟು ತಿಂಗಳಿಂದ ಸಿಬಿಐ ವಿಚಾರಣೆ ನಡೆಸುತ್ತಿದೆ. ಕೆಲವರನ್ನು ಈಗಾಗಲೇ ಬೆಂಗಳೂರಿಗೆ ಕರೆಯಿಸಿ ವಿಚಾರಣೆ ನಡೆಸಲಾಗಿದೆ. ಬೆಂಗಳೂರಿಗೆ ಬರಲು ಸಾಧ್ಯವಾಗದೇ ಇರುವವರಿಗೆ ಅವರಿದ್ದ ಸ್ಥಳಕ್ಕೆ ಹೋಗಿ ಸಿಬಿಐ ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.