ADVERTISEMENT

ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ವಂಚನೆ ಆರೋಪ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿಗೆ  ಕೋಟ್ಯಂತರ ರೂಪಾಯಿ ನಷ್ಟ ಮಾಡಿರುವ ಆರೋಪ ಹೊತ್ತ ಮಾಲೂರು ಕ್ಷೇತ್ರದ ಶಾಸಕ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಅವರ ರಾಜಕೀಯ ಭವಿಷ್ಯವನ್ನು ಸಿಬಿಐ ವಿಶೇಷ ಕೋರ್ಟ್ ನಿರ್ಧಾರ ಮಾಡಲಿದೆ.

ಕಾರಣ, ಸಿಬಿಐ ನಡೆಸಿರುವ ತನಿಖೆಯ ಅಂತಿಮ ವರದಿ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ನ್ಯಾಯಮೂರ್ತಿ ಎನ್.ಆನಂದ  ಅವರು ವಿಶೇಷ ಕೋರ್ಟ್‌ಗೆ ಶನಿವಾರ ಆದೇಶಿಸಿದ್ದಾರೆ.

`ಬಾಲಾಜಿ ಕೃಪ ಎಂಟರ್‌ಪ್ರೈಸಸ್~ ಮಾಲೀಕರೂ ಆಗಿರುವ ಬಿಜೆಪಿಯ ಶೆಟ್ಟಿ ಅವರು, ನಗರದ ವಿವಿಧ ಕಡೆಗಳಲ್ಲಿ ಹಂಚಿಕೆ ಮಾಡಿರುವ ನಿವೇಶನಗಳಿಗೆ  ಸಂಬಂಧಿಸಿದಂತೆ ಬ್ಯಾಂಕ್‌ಗೆ ವಂಚನೆ ಮಾಡಿರುವ ಆರೋಪ ಇದಾಗಿದೆ.
ಹೆಗಡೆ ನಗರ, ಹೆಗ್ಗನಹಳ್ಳಿ, ಕುದ್ರಿನಗರಗಳಲ್ಲಿ ಶೆಟ್ಟಿ ಅವರು ಬಡಾವಣೆಗಳನ್ನು ರಚಿಸಿ, ಅಲ್ಲಿನ ನಿವೇಶನಗಳನ್ನು ವಿವಿಧ ವ್ಯಕ್ತಿಗಳಿಗೆ ಹಂಚಿಕೆ ಮಾಡಿದ್ದರು.

ಈ ಪೈಕಿ 181 ಮಂದಿಗೆ ಬ್ಯಾಂಕ್‌ನ ನಗರದ ಗಾಂಧಿನಗರ ಶಾಖೆಯು 7.17 ಕೋಟಿ ರೂಪಾಯಿ ಸಾಲ ನೀಡಿತ್ತು. ಆದರೆ ಸಾಲದ ಮರುಪಾವತಿ ಆಗಲಿಲ್ಲ. ಈ ಬಗ್ಗೆ  ಬ್ಯಾಂಕ್ ತನಿಖೆ ನಡೆಸಿದಾಗ, ನಿವೇಶನದಾರರೆಲ್ಲ ವಿವಿಧ ಕಂಪೆನಿಗಳ (ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಎಚ್‌ಎಎಲ್, ಬಿಇಎಂಎಲ್, ಬಿಎಸ್‌ಎನ್‌ಎಲ್ ಮುಂತಾದವುಗಳು) ಹೆಸರಿನಲ್ಲಿ ನಕಲಿ ವೇತನ ಪ್ರಮಾಣ ಪತ್ರ ನೀಡಿರುವುದು ಬೆಳಕಿಗೆ ಬಂತು.

ಈ ಹಿನ್ನೆಲೆಯಲ್ಲಿ 2008ರ ಜನವರಿ 30ರಂದು ಬ್ಯಾಂಕ್‌ನ ವಿಚಕ್ಷಣ ದಳದ ಪ್ರಧಾನ ಅಧಿಕಾರಿಗಳು ಶೆಟ್ಟಿ ಅವರೇ ಇದಕ್ಕೆ ಕಾರಣಕರ್ತರು ಎಂದು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ  ಸಿಬಿಐ ಕೋರ್ಟ್‌ನಲ್ಲಿ ಅವರ ವಿರುದ್ಧ ತನಿಖೆ  ನಡೆದಿತ್ತು.

ಇದರ ರದ್ದತಿಗೆ ಶೆಟ್ಟಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮ ಮೇಲೆ ವಿನಾಕಾರಣ ಸುಳ್ಳು ಆರೋಪ ಹೊರಿಸಲಾಗಿದೆ. ತಮ್ಮ ಸಂಸ್ಥೆ (ಬಾಲಾಜಿ ಎಂಟರ್‌ಪ್ರೈಸಸ್) ಬ್ಯಾಂಕ್‌ನಿಂದ ಪಡೆದಿರುವ ಸಂಪೂರ್ಣ ಹಣವನ್ನು ಸಂದಾಯ ಮಾಡಿರುವ ಬಗ್ಗೆ ದಾಖಲೆ ಇದೆ. ಆದರೂ ಈ ಆರೋಪ ಹೊರಿಸಲಾಗಿದ್ದು, ದೂರಿನ ಅನ್ವಯ ಮುಂದೆ ತೆಗೆದುಕೊಳ್ಳಬಹುದಾದ ಪ್ರಕ್ರಿಯೆಯನ್ನು ರದ್ದು ಮಾಡುವಂತೆ ಕೋರಿದ್ದಾರೆ.

ಸೀಲು ತೆರೆಯಲು ಆದೇಶ
 ತನಿಖಾ ವರದಿಯು ಸದ್ಯ ಸೀಲು ಮಾಡಿದ ಲಕೋಟೆಯಲ್ಲಿ ಹೈಕೋರ್ಟ್ ಸುಪರ್ದಿಯಲ್ಲಿ ಇದೆ. ಈ ಸೀಲನ್ನು ತೆರೆದು ಅದನ್ನು ಸಿಬಿಐ ತನಿಖಾಧಿಕಾರಿಗಳಿಗೆ ನೀಡುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ.

`ಸಿಬಿಐ ಪರ ವಕೀಲರ ಸಮ್ಮುಖದಲ್ಲಿ ಲಕೋಟೆಯನ್ನು ತೆರೆದು ಅದನ್ನು ತನಿಖಾಧಿಕಾರಿಗಳಿಗೆ ನೀಡಿ. ನಂತರ ಅದನ್ನು ತನಿಖಾಧಿಕಾರಿಗಳು ಸಂಬಂಧಿತ ಕೋರ್ಟ್‌ಗೆ (ಸಿಬಿಐ ವಿಶೇಷ ನ್ಯಾಯಾಲಯ) ವರದಿಯನ್ನು ನೀಡಬೇಕು. ಈ ವರದಿಯ ಆಧಾರದ ಮೇಲೆ ಕೋರ್ಟ್ ಮುಂದಿನ ಕ್ರಮ ತೆಗೆದುಕೊಳ್ಳಲಿ~ ಎಂದು ತೀರ್ಪಿನಲ್ಲಿ ಉಲ್ಲೇಖ ಮಾಡಲಾಗಿದೆ.

ಇದೇ ಆರೋಪದಲ್ಲಿ ಶಾಸಕ ಡಿ.ಸುಧಾಕರ್ ಕೂಡ ಸಿಲುಕಿದ್ದಾರೆ. ಆದರೆ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳು ಮುಂದೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.