ADVERTISEMENT

ಬ್ಯಾರಿ ಮಹಿಳಾ ಸಂಸ್ಕೃತಿ ಅನಾವರಣಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2011, 19:30 IST
Last Updated 27 ಮಾರ್ಚ್ 2011, 19:30 IST
ಬ್ಯಾರಿ ಮಹಿಳಾ ಸಂಸ್ಕೃತಿ ಅನಾವರಣಗೊಳ್ಳಲಿ
ಬ್ಯಾರಿ ಮಹಿಳಾ ಸಂಸ್ಕೃತಿ ಅನಾವರಣಗೊಳ್ಳಲಿ   

ಮಂಗಳೂರು: ‘ಬ್ಯಾರಿ ಮಹಿಳೆಯರ ಧ್ವನಿ ಮನೆಯ ಒಳ ಅಂಗಳಕ್ಕೆ ಸೀಮಿತವಾಗಿದೆ. ಸಾಹಿತ್ಯ ಪ್ರಪಂಚದಲ್ಲಿ ಬ್ಯಾರಿ ಮಹಿಳೆಯರ ಧ್ವನಿ ಅನಾವರಣ    ಆಗಿಲ್ಲ’ ಎಂದು ಮುಂಬೈ ಕನ್ನಡ ವಿಶ್ವವಿದ್ಯಾಲಯದ ಮಾಜಿ ಮುಖ್ಯಸ್ಥ ಪ್ರೊ. ತಾಳ್ತಜೆ ವಸಂತ ಕುಮಾರ್ ಭಾನುವಾರ  ಅಭಿಪ್ರಾಯಪಟ್ಟರು.

 ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಇಲ್ಲಿನ ಪುರಭವನದಲ್ಲಿ ಏರ್ಪಡಿಸಿದ್ದ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.

 ‘ವಿಶ್ವದಾದ್ಯಂತ 20ನೇ ಶತಮಾನದ ಆರಂಭದಲ್ಲಿ  ಮಹಿಳಾ ಅಭಿವ್ಯಕ್ತಿ ಚುರುಕುಗೊಂಡಿತು. ಬಹುಜನ ಸಮುದಾಯದ ಮಹಿಳೆಯರ ಬದುಕು ಸಾಹಿತ್ಯದಲ್ಲಿ ಸಾಕಷ್ಟು ಅಭಿವ್ಯಕ್ತಿಗೊಂಡಿದೆ. ಬ್ಯಾರಿ ಮಹಿಳೆಯರೂ ಈ ನಿಟ್ಟಿನಲ್ಲಿ ಮುಂದೆ ಬರಬೇಕಿದೆ’ ಎಂದರು.

ಬ್ಯಾರಿ ಸಾಹಿತ್ಯಕ್ಕೆ ಕೊಡುಗೆ ನೀಡಿದ ಕೆ.ಪಿ.ಅಬ್ದುಲ್ ಕಾದರ್ ಕುತ್ತೆತ್ತೂರು, ಬ್ಯಾರಿ ಭಾಷೆಗೆ ಕೊಡುಗೆ ನೀಡಿದ ಮಹಮ್ಮದ್ ಮಾರಿಪಳ್ಳ ಹಾಗೂ ಕಲಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ರಹೀಂ ಬಿ.ಸಿ. ರೋಡ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಅವರು ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಮಾಡಿದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಂಬಾತನಯ ಮುದ್ರಾಡಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಯು.ಟಿ. ಖಾದರ್, ಅಕಾಡೆಮಿ ಅಧ್ಯಕ್ಷ ಎಂ.ಬಿ.ಅಬ್ದುಲ್ ರಹಮಾನ್, ರಿಜಿಸ್ಟ್ರಾರ್ ಉಮರಬ್ಬ, ಸದಸ್ಯರಾರ, ಪ್ರೊ. ಬಿ.ಎಂ. ಇಚ್ಲಂಗೋಡು, ಬಿ.ಎ. ಸಂಶುದ್ದೀನ್ ಮಡಿಕೇರಿ, ಅಬ್ದುಲ್ ರಝಾಕ್ ಅನಂತಾಡಿ, ರಹೀಂ ಉಚ್ಚಿಲ್, ಉಮರ್ ಫಾರೂಕ್, ಖಾಲಿದ್ ಚಿಕ್ಕಮಗಳೂರು, ಅಬ್ದುಲ್ ರಝಾಕ್, ಪಿ.ಮಹಮ್ಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.