ADVERTISEMENT

ಭದ್ರತಾ ಲೋಪ ತನಿಖೆಗೆ ಸಿ.ಎಂ ಆದೇಶ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 19:38 IST
Last Updated 7 ಮಾರ್ಚ್ 2018, 19:38 IST
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ (ಸಂಗ್ರಹ ಚಿತ್ರ)   

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಮೇಲೆ ನಡೆದ ಹಲ್ಲೆ ಘಟನೆಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಥ ಘಟನೆ ಹಿಂದೆಂದೂ ಸಂಭವಿಸಿರಲಿಲ್ಲ ಎಂದು ಪ್ರತಿಕ್ರಿಯಿಸಿದರು.

‘ಲೋಕಾಯುಕ್ತರಿಗೆ ಆರೋಪಿ 3–4 ಕಡೆ ಇರಿದಿದ್ದಾನೆ. ಕಚೇರಿ ಒಳಗೆ ಹೋಗಿ ಈ ಕೃತ್ಯ ಎಸಗಿದ್ದಾನೆ. ಶೆಟ್ಟಿ ಅವರ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದೇನೆ’ ಎಂದರು.

‘ಆರೋಪಿ ಇರಿದಿರುವುದು ನೋಡಿದರೆ ಕೊಲೆ ಮಾಡಲು ಯತ್ನಿಸಿದಂತಿದೆ. ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಭದ್ರತಾ ಲೋಪ ನಡೆದಿಯೇ ಎಂದೂ ಪರೀಶೀಲಿಸುವಂತೆ ಮತ್ತು ಹಾಗೇನಾದರೂ ಆಗಿದ್ದರೆ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದ್ದೇನೆ’ ಎಂದು ಹೇಳಿದರು.

ADVERTISEMENT

ಕಾನೂನು ಕ್ರಮ: ‘ಯಾವ ಕಾರಣಕ್ಕೆ ಈ ಕೃತ್ಯ ನಡೆದಿದೆ ಎಂದು ತನಿಖೆ ನಡೆಯುತ್ತಿದೆ. ಆರೋಪಿ ಯಾರೇ ಆಗಿದ್ದರೂ ಅವನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

ಬಿಜೆಪಿ ಅವಧಿಯಲ್ಲಿ ಕೊಲೆಗಳು ಆಗಿರಲಿಲ್ಲವೇ?: ‘ಇದೊಂದು ದುರದೃಷ್ಟಕರ ಘಟನೆ. ಬಿಜೆಪಿ ಆಡಳಿತ ಅವಧಿಯಲ್ಲಿ ಕೊಲೆಗಳು ನಡೆದಿರಲಿಲ್ಲವೇ. ನಾವು ಮಾನವ ಸಮಾಜದಲ್ಲಿದ್ದೇವೆ. ಸಾಮಾಜಿಕ ವ್ಯವಸ್ಥೆಯಲ್ಲಿ ಇಂಥ ಘಟನೆಗಳು ಸಹಜ. ಅಮೆರಿಕ ಅಧ್ಯಕ್ಷರನ್ನೇ ಗುಂಡಿಕ್ಕಿ ಹತ್ಯೆ ಮಾಡಿಲ್ಲವೇ’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಪ್ರಶ್ನಿಸಿದರು.

ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿ: ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಒಳ್ಳೆಯ ಅಧಿಕಾರಿಗಳಿಗೆ ಉಳಿಗಾಲ ಇಲ್ಲ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ದೂರಿದರು.

‘ಗೃಹಸಚಿವ ರಾಮಲಿಂಗಾ ರೆಡ್ಡಿ ಅವರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುತ್ತಿಲ್ಲ. ಅವರು ತನ್ನ ಚೇಲಾ ಕೆಂಪಯ್ಯನವರ ಮಾತು ಕೇಳುತ್ತಾರೆ. ರಾಜ್ಯದಲ್ಲಿ ತಕ್ಷಣ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರಬೇಕು’ ಎಂದೂ ಶೋಭಾ ಆಗ್ರಹಿಸಿದರು.

‘ಕಾನೂನು ಸುವ್ಯವಸ್ಥೆ ಕುಸಿತ’
‘ಲೋಕಾಯುಕ್ತ ಕಚೇರಿಯಲ್ಲೇ ನ್ಯಾಯಮೂರ್ತಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದು ರಾಜ್ಯದಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆಗೆ ಸಾಕ್ಷಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಟೀಕಿಸಿದ್ದಾರೆ.

‘ರಾಜ್ಯದಲ್ಲಿ ಗೂಂಡಾರಾಜ್ ಇದೆ. ಲೋಕಾಯುಕ್ತ ನ್ಯಾಯಮೂರ್ತಿ ಮೇಲೆ ಹಲ್ಲೆ ಮಾಡುವಷ್ಟು ಧೈರ್ಯ ಬಂದಿರುವುದು ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎನ್ನುವುದರ ಪ್ರತೀಕ. ಆರೋಪಿಗೆ ಕಠಿಣ ಶಿಕ್ಷೆ ಆಗುವಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಇದು ಎಲ್ಲ ದುಷ್ಕರ್ಮಿಗಳಿಗೆ ಎಚ್ಚರಿಕೆಯಾಗಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.

ನಿದ್ದೆಯಿಂದ ಎದ್ದೇಳಿ: ‘ಮುಖ್ಯಮಂತ್ರಿಯವರೇ ನಿದ್ದೆಯಿಂದ ಇನ್ನಾದರೂ ಎದ್ದೇಳಿ. ಮೊಹಮದ್‌ ನಲಪಾಡ್‌ ಗೂಂಡಾಗಿರಿಯಿಂದ ಈಗಾಗಲೇ ಬೆಂಗಳೂರು ನಡುಗಿ ಹೋಗಿದೆ. ಈಗ ಲೋಕಾಯುಕ್ತರಿಗೇ ಇರಿಯಲಾಗಿದೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಇದಕ್ಕಿಂತ ಇನ್ನೇನು ಬೇಕು’ ಎಂದು ಶಾಸಕ ಆರ್. ಅಶೋಕ ಪ್ರಶ್ನಿಸಿದರು.

ಗೂಂಡಾ ರಾಜ್ಯವೇ: ದೇವೇಗೌಡ
‘ಲೋಕಾಯುಕ್ತ ನ್ಯಾಯಮೂರ್ತಿಗೇ ಒಬ್ಬ ಚಾಕುವಿನಿಂದ ಇರಿಯುತ್ತಾನೆ ಎಂದರೆ ನಾವು ಯಾವ ರಾಜ್ಯದಲ್ಲಿದ್ದೇವೆ, ಇದೇನು ಗೂಂಡಾ ರಾಜ್ಯವೇ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಪ್ರಶ್ನಿಸಿದರು.

‘ಸರ್ಕಾರ ಲೋಕಾಯುಕ್ತವನ್ನು ಮುಗಿಸಿತು. ಇದೀಗ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೇ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ. ಇದನ್ನು ನೋಡಿದರೆ ನಾವೆಲ್ಲಿದ್ದೇವೆ. ಇದು ಎಂಥ ರಾಜ್ಯ ಎಂಬುದೇ ಅರ್ಥವಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲೋಕಾಯುಕ್ತರಿಗೇ ರಕ್ಷಣೆ ಇಲ್ಲದ ಮೇಲೆ ಮತ್ಯಾರಿಗೆ ಅವರು ರಕ್ಷಣೆ ಕೊಡುತ್ತಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ’ ಎಂದೂ ಗೌಡರು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.