ADVERTISEMENT

ಭಾರತೀಯ ಭಾಷೆಗಳಲ್ಲಿ ಭೈರಪ್ಪ ಕೃತಿ ವೈವಿಧ್ಯ ಚರ್ಚೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2012, 19:30 IST
Last Updated 8 ಜನವರಿ 2012, 19:30 IST

ಬೆಂಗಳೂರು: `ತಮ್ಮ ಬರಹಗಳ ಮೂಲಕ ಜೀವನದ ಹಲವು ಮೂಲಭೂತ ಪ್ರಶ್ನೆಗಳಿಗೆ ಹುಡುಕಾಟ ನಡೆಸಿದ ದೊಡ್ಡ ಸಾಹಿತಿ ಎಸ್. ಎಲ್. ಭೈರಪ್ಪ~ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಇಂದ್ರನಾಥ ಚೌಧರಿ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಸರಸ್ವತೀ ಸಮ್ಮಾನ್ ಪುರಸ್ಕೃತ ಡಾ.ಎಸ್.ಎಲ್. ಭೈರಪ್ಪ ಅಭಿನಂದನಾ ಸಮಿತಿ ಭೈರಪ್ಪನವರ ಬರಹದ ಕುರಿತು ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

`ಪ್ರಾದೇಶಿಕ ಭಾಷೆಯಾದ ಕನ್ನಡದಲ್ಲಿ ಬರೆದು ಅಖಿಲ ಭಾರತೀಯ ಮಟ್ಟದ ಸ್ಥಾನ ಪಡೆದ ಹೆಗ್ಗಳಿಕೆ ಭೈರಪ್ಪ ಅವರದ್ದು. ಅವರು ತತ್ವಶಾಸ್ತ್ರಜ್ಞರೂ, ಕಾದಂಬರಿಕಾರರೂ ಆಗಿರುವುದರಿಂದ ಅವೆರಡೂ ಜೊತೆಯಾಗಿ ಅವರ ಬರಹದಲ್ಲಿ ಕಾಣುತ್ತವೆ. ಬದುಕನ್ನು ಒಳಗಣ್ಣಿಂದ ನೋಡುತ್ತಾ, ಅದನ್ನು ತಮ್ಮ ಓದುಗರಿಗೂ ದರ್ಶಿಸುವ ಅವರು ಅರ್ಥ ಹಾಗೂ ಮಾನಸಿಕ ದೂರವನ್ನು ತಮ್ಮ ಸಾಹಿತ್ಯದಲ್ಲಿ ಸಮರ್ಥವಾಗಿ ನಿಭಾಯಿಸಿದವರು. ಅವರ ಎಲ್ಲಾ ಕಾದಂಬರಿ ಹಾಗೂ ಬರಹಗಳಲ್ಲೂ ಇದು ಸಾಬೀತಾಗಿದೆ~ ಎಂದು ಅವರು ಹೇಳಿದರು.

ADVERTISEMENT

`ಸಾವು ಭೈರಪ್ಪನವರನ್ನು ಕಾಡಿದ ಮುಖ್ಯ ಸಮಸ್ಯೆ. ತಮ್ಮ ಕುಟುಂಬ ಸದಸ್ಯರ ಸಾವನ್ನು ಕಣ್ಣಾರೆ ಕಂಡು, ಘೋರವಾದ ಕಷ್ಟದೊಂದಿಗೆ ಬದುಕನ್ನು ಕಟ್ಟಿಕೊಂಡವರು ಅವರು. ಇದೇ ಅವರ ಸಾಹಿತ್ಯದ ಮೂಲ ದ್ರವ್ಯವೂ ಆಗಿದೆ. ಜೀವನದಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಪ್ರಾಮಾಣಿಕ ಬದುಕನ್ನು ನಡೆಸಿದ ಅವರ ಸಾಹಿತ್ಯ ಜನಪದದ ಬೇರು ಹಾಗೂ ಶಾಸ್ತ್ರದ ರೆಂಬೆಗಳೊಂದಿಗೆ ದೊಡ್ಡ ಮರವಾಗಿ ಬೆಳೆದಿದೆ. ವಿವಾದಗಳೂ ಭೈರಪ್ಪನವರ ಜನಪ್ರಿಯತೆಗೆ ಕಾರಣವಾಗಿದ್ದು ಅವರ ಪಾಲಿನ ಅದೃಷ್ಟ~ ಎಂದು ಅವರು ನುಡಿದರು.

`ಮರಾಠಿ ಓದುಗರ ದೃಷ್ಟಿಯಲ್ಲಿ ಭೈರಪ್ಪ~ ಪ್ರಬಂಧ ಮಂಡಿಸಿದ ಪುಣೆಯ ಡಾ. ಸುಪ್ರಿಯಾ ಸಹಸ್ರಬುದ್ಧೆ, `ಕನ್ನಡ ಹಾಗೂ ಮರಾಠಿ ಭಾಷೆಯ ನಡುವಿನ ಸೇತುವಾಗಿ ಭೈರಪ್ಪ ಅವರ ಬರಹಗಳು ಮುಖ್ಯವಾಗುತ್ತವೆ. ಯಾವುದೇ ಪಂಥಗಳಿಗೆ ಸೇರದೇ, ಕೇವಲ ತಮ್ಮ ವಿಚಾರಗಳನ್ನು ಹೇಳುತ್ತಾ ಹೇಗುವ ಭೈರಪ್ಪ ಅವರ `ಆವರಣ~ ಕೃತಿಯನ್ನು ನಿಷೇಧಿಸುವಂತೆ ಎಷ್ಟೇ ವಿರೋಧ ವ್ಯಕ್ತವಾದರೂ ಅದು ಕನ್ನಡ ಹಾಗೂ ಮರಾಠಿಯಲ್ಲೂ ನಿಷೇಧವಾಗಿಲ್ಲ. ಬರಹಗಾರನನ್ನು ವ್ಯವಸ್ಥೆಯಿಂದ ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದಕ್ಕೆ ಇದು ಸಾಕ್ಷಿ~ ಎಂದರು.

`ಇಂಟರ್‌ನೆಟ್ ಮಾಧ್ಯಮದ ಮೂಲಕ ಇಂದು ಮರಾಠಿಯ ಎಲ್ಲಾ ಓದುಗರಿಗೂ ಭೈರಪ್ಪ ಪರಿಚಿತರು. ಮಹಾರಾಷ್ಟ್ರದ ಸಾಹಿತ್ಯ ವಿದ್ಯಾರ್ಥಿಗಳು ಅವರ ಬದುಕು ಬರಹಗಳ ವಿಷಯದಲ್ಲಿ ಎಂಫಿಲ್, ಪಿಎಚ್‌ಡಿ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ~ ಎಂದು  ನುಡಿದರು.

ಬಂಗಾಳಿ ಸಾಹಿತ್ಯದಲ್ಲಿ ಭೈರಪ್ಪ ವಿಷಯವಾಗಿ ಮಾತನಾಡಿದ ಕೋಲ್ಕತ್ತದ ಬೆತ್ಯುನ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ. ಪುಷ್ಪ ಮಿಶ್ರ, `ಭೈರಪ್ಪ ಅವರ `ಪರ್ವ~ ಕಾದಂಬರಿ ಮಹಾಭಾರತದ ಪುನರ್‌ನಿರ್ಮಾಣ. ಮಹಾಭಾರತವನ್ನು ತಮ್ಮದೇ ಆದ ಭಿನ್ನ ದೃಷ್ಟಿಕೋನದಿಂದ ನೋಡುವ ಪ್ರಯತ್ನ ಇದು. ನಿರೂಪಣೆ, ಸಾಮಾಜಿಕ ಪ್ರಜ್ಞೆ, ಮನಶಾಸ್ತ್ರೀಯ ನೋಟಗಳಿಂದ ಅವರ ಬರಹ ಮುಖ್ಯವೆನಿಸುತ್ತದೆ~ ಎಂದು ಅವರು ಹೇಳೀದರು.

ಅಧ್ಯಕ್ಷತೆ ವಹಿಸಿದ್ದ ಶತಾವಧಾನಿ ಆರ್. ಗಣೇಶ್, `ಮನುಷ್ಯ ಜೀವನವನ್ನು ಇಷ್ಟು ಆಳಕ್ಕಿಳಿದು ನೋಡಿದ್ದು ವ್ಯಾಸ ಮುನಿ ಮಾತ್ರ. ವ್ಯಾಸನ ನಂತರ ಭೈರಪ್ಪ ಅಂತಹ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಭೈರಪ್ಪ ಅವರನ್ನು ಮತ್ತೊಬ್ಬ ವ್ಯಾಸರು ಎಂದರೆ ತಪ್ಪಲ್ಲ~ ಎಂದರು.

`ಪರ್ವದ ಪ್ರವರ್ತಕ ಭೈರಪ್ಪ~ ವಿಷಯವಾಗಿ ನವದೆಹಲಿಯ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್‌ನ ನಿರ್ದೇಶಕಿ ಡಾ. ಕವಿತಾ ಶರ್ಮ, `ತೆಲುಗು ಸಾಹಿತ್ಯದಲ್ಲಿ ಭೈರಪ್ಪ~ ವಿಷಯವಾಗಿ ತೆಲುಗಿನ ವಿಮರ್ಶಕ ರಾಮತೀರ್ಥ ಪ್ರಬಂಧಗಳನ್ನು ಮಂಡಿಸಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಪ್ರಧಾನ ಗುರುದತ್ತ, ಹಿರಿಯ ಕವಿ ಡಾ. ಸುಮತೀಂದ್ರ ನಾಡಿಗ, ಸರಸ್ವತೀ ಸಮ್ಮಾನ್ ಪುರಸ್ಕೃತ ಡಾ.ಎಸ್.ಎಲ್.ಭೈರಪ್ಪ ಅಭಿನಂದನಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ, ಕಾರ್ಯದರ್ಶಿ ಡಾ. ಎಸ್.ಆರ್.ಲೀಲಾ ಇತರರು ಉಪಸ್ಥಿತರಿದ್ದರು.

ಮೊದಲ ಒಲವು ಸಂಗೀತ...

ವಿಚಾರ ಸಂಕಿರಣದಲ್ಲಿ ಸನ್ಮಾನ ಸ್ವೀಕರಿಸಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಎಲ್.ಭೈರಪ್ಪ, `ನನ್ನ ಮೊದಲ ಒಲವಿನ ಕ್ಷೇತ್ರ ಸಂಗೀತ. ಎರಡನೆಯದ್ದು ಸಾಹಿತ್ಯ. ನಾನು ಅನೇಕ ಬಾರಿ ಶ್ರೇಷ್ಠ ಸಂಗೀತಗಾರನಾಗಬೇಕೆಂಬ ಕನಸು ಕಂಡಿದ್ದೇನೆ. ಎಡ-ಬಲ ಎಂಬ ಪಂಥಗಳಿಲ್ಲದ ಕಲೆ ಸಂಗೀತ. ಅನೇಕ ರಸಗಳನ್ನು ಸಂಗೀತದ ಮೂಲಕ ಸೃಷ್ಟಿಸಲು ಸಾಧ್ಯವಿದೆ. ಸಂಗೀತವನ್ನು ಯಾವ ಬುದ್ಧಿ ಜೀವಿಗಳೂ ಟೀಕಿಸಲಾರರು. ನಮ್ಮ ಅನೇಕ ಬುದ್ಧಿಜೀವಿಗಳಿಗೆ ಸಂಗೀತ ಕಛೇರಿಗಳಿಗೆ ಹೋಗುವ, ಸಂಗೀತ ಕೇಳುವ ಹವ್ಯಾಸವೇ ಇಲ್ಲ. ಸಂಗೀತ ಮತ್ತು ಸಾಹಿತ್ಯದ ಸಂಗಮವಾದ `ಮಂದ್ರ~ ಕಾದಂಬರಿಯನ್ನು ಈ ಕಾರಣಕ್ಕಾಗೇ ನಮ್ಮ ಪ್ರಮುಖ ಟೀಕಾಕಾರರು ಟೀಕಿಸಲು ಮುಂದಾಗಲಿಲ್ಲ~ ಎಂದರು.

`ಲೇಖಕನಾದವನು ಟೀಕೆಗಳಿಗೆ ಗಮನ ಕೊಡದೇ ತನ್ನ ಬರವಣಿಗೆಯಲ್ಲಿ ಪ್ರಾಮಾಣಿಕವಾಗಿ ತೊಡಗಬೇಕು. ಜನರ ಮನಸ್ಸಿನಲ್ಲಿ ಉಳಿಯುವ ಸಾಹಿತ್ಯವನ್ನು ರಚಿಸಲು ಲೇಖಕ ಪ್ರಯತ್ನಿಸಬೇಕು. ಸಂಗೀತ ಸಭೆಗಳ ಮೂಲಕ ಉತ್ತಮ ಸಂಗೀತ ಹೊರಬರುತ್ತದೆ. ಹಾಗೆಯೇ ಹೆಚ್ಚು ಹೆಚ್ಚು ಸಾಹಿತ್ಯ ಸಭೆಗಳು ನಡೆದರೆ ಉತ್ತಮ ಸಾಹಿತ್ಯ ಹೊರಬರಲು ಸಾಧ್ಯವಾಗುತ್ತದೆ~ ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.