ADVERTISEMENT

ಭಾರತೀಯ ವಿಜ್ಞಾನ ಲೋಕದ ರಸಋಷಿ

ಪ್ರೊ.ರೊದ್ದಂ ನರಸಿಂಹ
Published 17 ನವೆಂಬರ್ 2013, 19:30 IST
Last Updated 17 ನವೆಂಬರ್ 2013, 19:30 IST

‘ನಮ್ಮ ರಾಯರು –ಸಿಎನ್‌ಆರ್‌ ರಾವ್‌ ಅವರನ್ನು ಗೆಳೆಯರ ಬಳಗದಲ್ಲಿ ಕರೆಯುವುದೇ ಹಾಗೆ. ಈ ರಾಯರು ಭಾರತೀಯ ವಿಜ್ಞಾನ ಕ್ಷೇತ್ರದ ರಾಯಭಾರಿಯೂ ಹೌದು’ ಎಂಬು­ದನ್ನು ವಿಜ್ಞಾನಿಗಳ ಸಂಕುಲ ತುಂಬು ಅಂತಃಕರ­ಣದಿಂದ ಒಪ್ಪಿಕೊಂ­ಡಿದೆ. ಐದು ದಶಕಗಳ ಕಾಲ ವಿಜ್ಞಾನ ಲೋಕದ ಸಂಶೋಧಕರಾಗಿ, ವಕ್ತಾರ­ರಾಗಿ ಅವರು ಮಾಡಿದ ಕೆಲಸವೇನು ಕಡಿಮೆಯೇ?

ವೈಜ್ಞಾನಿಕ ಬೆಳವಣಿಗೆ ಮೂಲಕ ದೇಶವನ್ನು ಎತ್ತರೆತ್ತರಕ್ಕೆ ಕೊಂಡೊಯ್ಯ­ಬೇಕು ಎಂಬ ತುಡಿತ ಇಟ್ಟುಕೊಂಡು ದುಡಿದ ಈ ರಸಾಯನ ವಿಜ್ಞಾನಿ ಎಲ್ಲ ಅರ್ಥದಲ್ಲೂ ದೇಶಭಕ್ತ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ಆಗಿನ ನಿರ್ದೇ­ಶಕ ಸತೀಶ್‌ ಧವನ್‌, ರಾಯರ ಅಸಾಧಾರಣ ಕರ್ತೃತ್ವ ಶಕ್ತಿ ಕಂಡು ಅವರಿಗೆ ಪ್ರೀತಿಯಿಂದ ‘ಡೈನಮೋ’ (ಅಸಾಧಾರಣ ಶಕ್ತಿ) ಎಂದು ಕರೆದಿದ್ದರು.

ರಾಯರ ಜತೆಗಿನ ಒಡನಾಟ ನೆನಪಿಸಿ­ಕೊಂಡರೆ ಕಾಲ ಆರೂವರೆ ದಶಕ ಸರ್ರನೇ ಹಿಂದೆ ಸರಿಯುತ್ತದೆ. ಆಚಾರ್ಯ ಪಾಠಶಾಲೆಯಲ್ಲಿ ನಾನೂ, ಅವರೂ ವರ್ಗಪಾಠಿಗಳು. ವಿಭಾಗ ಮಾತ್ರ ಬೇರೆ, ಬೇರೆ. ಆ ದಿನಗಳಲ್ಲಿ ಅತ್ಯಂತ ಚುರು­ಕಿನ ಸ್ವಭಾಗದ ಹುಡುಗ ಅವರಾಗಿದ್ದರು. ಅವರ ಮುಖದಲ್ಲಿ, ಹೊಳೆಯುವ ಕಣ್ಣುಗಳಲ್ಲಿ ಆ ಚುರುಕುತನ ಪ್ರತಿಫಲಿಸುತ್ತಿತ್ತು.

ನಮ್ಮ ಶಾಲಾ ಸಮಾರಂಭಕ್ಕೆ ಒಮ್ಮೆ ಸಿ.ವಿ.ರಾಮನ್‌ ಅವರನ್ನು ಅತಿಥಿ­ಗಳನ್ನಾಗಿ ಕರೆದಿ­ದ್ದರು. ಸಮಾರಂಭ ಸುಸೂತ್ರವಾಗಿ ನಡೆಯಲು ನಾವೆಲ್ಲ ಸ್ವಯಂಸೇವಕರಾಗಿ ಕೆಲಸ ಮಾಡಿದೆವು. ಜಗತ್ತು ಕಂಡ ಆ ಶ್ರೇಷ್ಠ ವಿಜ್ಞಾನಿ ಮಾಡಿದ ಭಾಷಣ ನಮ್ಮನ್ನು ಎಷ್ಟೊಂದು ಪ್ರಭಾವಿತ­ರನ್ನಾಗಿ ಮಾಡಿತ್ತೆಂದರೆ ವಿಜ್ಞಾನ ಧರ್ಮವನ್ನು ಆಗಲೇ ನಾವು ಸ್ವೀಕರಿಸಿಬಿಟ್ಟಿದ್ದೆವು. ಬೇರೆ ಆಯ್ಕೆ­ಗಳೇ ನಮ್ಮ ಮುಂದಿರಲಿಲ್ಲ. ನಮ್ಮ ಶಾಲೆಯಲ್ಲಿ ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಆಟ ಹೆಚ್ಚಾಗಿತ್ತು. ಆದರೆ, ರಾಯರು ಆಡಿದ್ದನ್ನು ನಾನು ಎಂದಿಗೂ ನೋಡಿಲ್ಲ.

ಹೈಸ್ಕೂಲು ಶಿಕ್ಷಣ ಮುಗಿದ ಬಳಿಕ ರಸಾಯನ ವಿಜ್ಞಾನದ ಕಡೆಗೆ ಅವರು ಹೊರಳಿದರೆ, ಎಂಜಿನಿ­ಯರಿಂಗ್‌ ಕ್ಷೇತ್ರ ನನ್ನನ್ನು ಕರೆದು ಅಪ್ಪಿಕೊಂಡಿತು. ಬನಾರಸ ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈ­ಸಿದ ಸಿಎನ್‌ಆರ್‌, ಪಿಎಚ್‌.ಡಿ ಸಂಶೋಧನೆಗಾಗಿ ಅಮೆರಿಕಕ್ಕೆ ತೆರಳಿದರು. ಅವರು ಹೋದ ಕೆಲವು ವರ್ಷಗಳ ನಂತರ ನಾನೂ ಅದೇ ದೇಶಕ್ಕೆ ಹೋದೆ. ವಾಪಸು ಬರುವಾಗ –ಅವರೇ ಮೊದಲು ಬಂದಿದ್ದು– ಇಬ್ಬರೂ ‘ಐಐಎಸ್‌ಸಿ’­ಯಲ್ಲಿ ಕೆಲಸಕ್ಕೆ ಸೇರಿದ್ದೆವು. ಅಮೆರಿಕದ ನೆರ­ವಿನೊಂದಿಗೆ ಕಾನ್ಪುರದಲ್ಲಿ ಐಐಟಿ ಆರಂಭಿಸಿ­ದಾಗ, ರಾಯರನ್ನು ರಸಾಯನ ವಿಜ್ಞಾನ ವಿಭಾ­ಗದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಯಿತು. ಆಗ ಅವರಿಗೆ ಹೆಚ್ಚೆಂದರೆ 32 ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಷ್ಟು ದೊಡ್ಡ ಜವಾಬ್ದಾರಿ ಹೊತ್ತ ಬೇರೆ ಪ್ರಾಧ್ಯಾಪಕರು ಸಿಗುವುದು ಅಪರೂಪ.

ರಸಾಯನ ವಿಜ್ಞಾನ ವಿಭಾಗವನ್ನು ರಾಯರು ವಿಶಾಲವಾಗಿ ಕಟ್ಟಿ ಬೆಳೆಸಿದ ರೀತಿ, ಅವರ ಮುಂದಾ­ಲೋಚನಾ ಕ್ರಮ ಕಂಡು ದೇಶದ ವಿಜ್ಞಾನ ರಂಗ ವಿಸ್ಮಯಪಟ್ಟಿತು. ಕೇಂದ್ರ ಸರ್ಕಾರ ರಚಿಸಿದ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿಯಲ್ಲಿ ಸಿಎನ್‌ಆರ್‌ ಅವರನ್ನು ಯುವ ಸದಸ್ಯರನ್ನಾಗಿ ನೇಮಿಸ­ಲಾಯಿತು. ಬಳಿಕ ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿ ಸದಸ್ಯ­ರಾಗಿ, ಅಧ್ಯಕ್ಷರಾಗಿ ಅವರು ಮಾಡಿದ ಸಾಧನೆ ಅನನ್ಯ, ಅಪ್ರತಿಮ.

ಮುಂಚೂಣಿ ನಾಯಕರು: ಸಾಮಾನ್ಯವಾಗಿ ರಸಾ­ಯನ ವಿಜ್ಞಾನ ಎಂದರೆ ದ್ರವರೂಪದ ಕಲ್ಪನೆ ಎಲ್ಲ­­ರಲ್ಲೂ ಬರುತ್ತದೆ. ಆದರೆ, ರಾಯರು ಆಯ್ದುಕೊಂಡಿದ್ದು ಘನಸ್ಥಿತಿ ಹಾಗೂ ಪದಾರ್ಥ ರಸಾಯನ ವಿಜ್ಞಾನವನ್ನು. ಈ ವಿಭಾಗದಲ್ಲಿ ಜಗತ್ತಿನ ವಿಜ್ಞಾನ ಲೋಕಕ್ಕೆ ಮುಂಚೂಣಿ ನಾಯಕರು ಅವರು.

ಅಬ್ಬಬ್ಬಾ, ವಿಜ್ಞಾನದ ಮೇಲೆ ಅವರಿಗೆ ಎಷ್ಟೊಂದು ಪ್ರೀತಿ! ‘ವಿಜ್ಞಾನವಿಲ್ಲದೆ ನನ್ನ ಜೀವ­ನವೇ ಇಲ್ಲ’ ಎಂದೊಮ್ಮೆ ಅವರೇ ಹೇಳಿದ್ದರು. ವಿಜ್ಞಾನಿಯಾಗಿ ಸಂಶೋಧನೆ ಮೂಲ ತತ್ವವನ್ನು ಚಾಚೂತಪ್ಪದೆ ಪಾಲಿಸಿದ ರಾಯರು, ಯುವ ವಿಜ್ಞಾನಿಗಳ ದೊಡ್ಡ ಪಡೆಯನ್ನೇ ಕಟ್ಟಿದ್ದಾರೆ. ನಮ್ಮ ಕಾಲದಲ್ಲಿ ‘apply apply, no reply’ ಎಂಬ ತಮಾಷೆ ಮಾತು ಪ್ರಚಲಿತದಲ್ಲಿ ಇತ್ತು. ಸರ್ಕಾರದ ಕಡೆಯಿಂದ ಯಾವ ಸೌಲಭ್ಯಗಳೂ ಸಿಗುತ್ತಿರಲಿಲ್ಲ. ಅದನ್ನು ಸುಳ್ಳು ಮಾಡಿದವರು ರಾಯರು. ವಿಜ್ಞಾನಿಗಳಿಗೆ, ವಿಜ್ಞಾನ ಸಂಸ್ಥೆಗಳಿಗೆ ಅವರು ಬೆನ್ನೆಲುಬಾಗಿ ನಿಂತವರು.

ಆಟಗಾರನೊಬ್ಬ ಶತಕ ಬಾರಿ­ಸುವುದು, ಗಾಯ­ಕನೊಬ್ಬ ಕಛೇರಿ ನಡೆಸುವುದು ನೇರವಾಗಿ ಜನರ ಮುಂದೆ ನಡೆಯುವ ಕ್ರಿಯೆಗಳು. ಆದರೆ, ವಿಜ್ಞಾನಿಗಳ ಸಾಧನೆ ಹಾಗಲ್ಲ. ಅವು ಸುಲಭ­ವಾಗಿ ಬೆಳಕಿಗೆ ಬರುವುದಿಲ್ಲ. ರಾಯರ ಕಿರೀಟ­ದಲ್ಲಿ ಎಷ್ಟೆಲ್ಲ ಸಾಧನೆಗಳ ತುರಾಯಿಗಳಿವೆ; ಜನ­ಸಾ­ಮಾನ್ಯರಿಗೆ ಅದರ ಅರಿವೇ ಇಲ್ಲ.

ನಾನು ವೈಜ್ಞಾನಿಕ ಸಲಹಾ ಮಂಡಳಿ ಸದಸ್ಯ­ನಾಗಿದ್ದಾಗ ರಾಯರೂ, ನಾನೂ ಒಟ್ಟಾಗಿ ಭೂವಿಜ್ಞಾನ ಸಚಿವಾಲಯದ ಅಗತ್ಯವನ್ನು ಪ್ರತಿ­ಪಾದಿಸಿದೆವು. ಅದು ಅಸ್ತಿತ್ವಕ್ಕೆ ಬಂದು ಐದು ವರ್ಷ­ಗಳಲ್ಲಿ ಎಷ್ಟೊಂದು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ ಗೊತ್ತೆ? ಮೊನ್ನೆ ಒಡಿಶಾದಲ್ಲಿ ಅಪ್ಪಳಿಸಿದ ಚಂಡಮಾರು­ತದ ಕುರಿತು ಮುಂಚಿ­ತವಾಗಿ ಮಾಹಿತಿ ಕೊಟ್ಟ ಪರಿಣಾಮ, ಅಪಾರ ಪ್ರಮಾಣದ ಸಾವು–ನೋವು ತಪ್ಪಿದ ಉದಾಹರಣೆ ಕಣ್ಣ ಮುಂದೆಯೇ ಇದೆ.

ಭಾರತೀಯ ಔಷಧಿ ಸಂಶೋಧನಾ ಪರಿಷತ್ತಿಗೆ ಸ್ವಾಯತ್ತ ಸ್ಥಾನಮಾನ, ಅಗತ್ಯ ಅನುದಾನ ಸಿಗು­ವಂತೆ ಮಾಡಿದ ಕೀರ್ತಿ ಕೂಡ ನಮ್ಮ ರಾಯ­ರದು. ಪದವಿ ಪೂರೈಸಿದ ವಿದ್ಯಾರ್ಥಿಗಳು ನೇರ­ವಾಗಿ ಸಂಶೋಧನಾ ಕ್ಷೇತ್ರಕ್ಕೆ ಧುಮುಕಲು ದೇಶದ ಐದು ಕಡೆ ಭಾರತೀಯ ವಿಜ್ಞಾನ ಸಂಶೋ­ಧನಾ ಸಂಸ್ಥೆ (ಐಐಎಸ್‌ಸಿಆರ್‌) ಸ್ಥಾಪಿಸಲು ಕಾರಣವಾದವರೂ ಅವರೇ.

ಜವಾಹರಲಾಲ್‌ ನೆಹರೂ ಅವರ ಜನ್ಮ ಶತ­ಮಾನೋತ್ಸವದ ವರ್ಷದಲ್ಲಿ ಅವರ ಹೆಸರಿನಲ್ಲಿ ಸ್ಥಾಪನೆಯಾದ ವೈಜ್ಞಾನಿಕ ಸಂಶೋಧನಾ ಸಂಸ್ಥೆಯ ಮೊದಲ ನಿರ್ದೇಶಕರಾಗಿ ಅದನ್ನು ದೇಶದ ಅಗ್ರಗಣ್ಯ ಸಂಸ್ಥೆಯಾಗಿ ಬೆಳೆಸಿದವರೂ ಅವರೇ. ಗೋವಾದ ಚಾರ್ಲ್ಸ್‌ ಕೊಡಿಯಾ ಎಂಬ ವಾಸ್ತುಶಾಸ್ತ್ರಜ್ಞನನ್ನು ಕರೆತಂದು ವಿಶಿಷ್ಟವಾದ ಕ್ಯಾಂಪಸ್‌ ರೂಪಿಸಿದ್ದನ್ನು ನಾನು ಮರೆತಿಲ್ಲ. ಕ್ಯಾಂಪಸ್‌ನ ಒಂದು ಬದಿಯಲ್ಲಿ ಇರುವ ಮರ­ಗಳು ಅಲ್ಲಿ ಕೆಲಸ ಮಾಡುವವರಿಗೆ ಹಿತಾ­ನುಭವ ನೀಡುತ್ತವೆ. ಕಾರ್ಯ ನಿಮಿತ್ತ ತೆರಳಿ­ದಾಗ ಅಮೆರಿಕ, ಇಂಗ್ಲೆಂಡ್‌ ಸೇರಿದಂತೆ ದೇಶದ ಹೊರಗಡೆ ನಾವು ಸಂಧಿಸಿದ್ದೇವೆ. ಆಗೆಲ್ಲ ದೇಶಕ್ಕೆ ವೈಜ್ಞಾನಿಕವಾಗಿ ಏನು ಕೊಡುಗೆ ಕೊಡಬೇಕು ಎನ್ನುವುದರ ಸುತ್ತಲೇ ಅವರ ಮಾತು ಗಿರಿಕಿ ಹೊಡೆಯುತ್ತದೆ.

ರಷ್ಯಾದ ಜತೆ ಎಲ್ಲಿ ಹಂಚಿಕೊಳ್ಳುತ್ತೇವೋ ಎಂಬ ಭಯದಿಂದ ಅಮೆರಿಕ ದೊಡ್ಡ ಕಂಪ್ಯೂ­ಟರ್‌ ಕೊಡಲು ನಿರಾಕರಿಸಿದಾಗ, ಪ್ಯಾರಲಲ್‌ ಕಂಪ್ಯೂ­ಟಿಂಗ್‌ (ಸಣ್ಣ ಕಂಪ್ಯೂಟರ್‌ಗಳಿಗೆ ಹೊಣೆ­ಯನ್ನು ಹಂಚಿ ದೊಡ್ಡ ಕಂಪ್ಯೂಟರ್‌ ಕೆಲಸವನ್ನು ಮಾಡಿ­ಸುವುದು) ಸೂತ್ರವನ್ನು ರಾಯರೂ ನಾನೂ ಜತೆಯಾಗಿ ಸಿದ್ಧಪಡಿಸಿದೆವು. ಆಗಿನ ಪ್ರಧಾನಿ ರಾಜೀವ್‌ ಗಾಂಧಿ ಇದರಿಂದ ಪ್ರಭಾ­ವಿತರಾಗಿ ಕಂಪ್ಯೂಟರ್‌ ಅಭಿವೃದ್ಧಿ ಸಂಸ್ಥೆ (ಸಿಡಾಕ್‌) ಸ್ಥಾಪಿಸಿದರು.

ಸಭೆಗಳಲ್ಲಿ ಏನಾದರೂ ತಿಕ್ಕಾಟಗಳು ಶುರು­ವಾದರೆ ರಾಯರಿಂದ ತಮಾಷೆ ಪ್ರಸಂಗವೊಂದು ಸ್ಫೋಟಗೊಳ್ಳುವುದು ರೂಢಿ. ವಿನೋದ ಸ್ವಭಾ­ವದ ಸಿಎನ್‌ಆರ್‌, ವಾತಾವರಣ ತಿಳಿ­ಮಾಡು­ವಲ್ಲಿ ಸಿದ್ಧಹಸ್ತರು. ಮನುಷ್ಯ ಸ್ವಭಾವ ‘ಕೆಮೆಸ್ಟ್ರಿ’­ಯಲ್ಲೂ ಅವರು ಪ್ರವೀಣರು.ಹಿಂದೂಸ್ತಾನಿ ಸಂಗೀತವೆಂದರೆ ಅವರಿಗೆ ಪಂಚಪ್ರಾಣ. ಬಡವರ ಮೇಲೆ ಅದಮ್ಯವಾದ ಪ್ರೀತಿ.

ತಮ್ಮ ಸಾಧನೆಯಿಂದ ಅವರು ಯಾವಾ­ಗಲೋ ‘ಭಾರತ ರತ್ನ’ ಆಗಿದ್ದನ್ನು ಸರ್ಕಾರ ಈಗ ಅಧಿಕೃತವಾಗಿ ಘೋಷಿಸಿದೆ ಅಷ್ಟೇ. ನಮ್ಮ ಹೆಮ್ಮೆಯ ವಿಜ್ಞಾನಿಗೆ ಹೃದಯ ತುಂಬಿದ ಅಭಿನಂದನೆ.
ನಿರೂಪಣೆ: ಪ್ರವೀಣ ಕುಲಕರ್ಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.