ADVERTISEMENT

ಭಾರಿ ಮಳೆ- ದೋಣಿ ಸಮುದ್ರಪಾಲು: 35 ಲಕ್ಷ ಹಾನಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 9:30 IST
Last Updated 15 ಜೂನ್ 2011, 9:30 IST
ಭಾರಿ ಮಳೆ- ದೋಣಿ ಸಮುದ್ರಪಾಲು: 35 ಲಕ್ಷ ಹಾನಿ
ಭಾರಿ ಮಳೆ- ದೋಣಿ ಸಮುದ್ರಪಾಲು: 35 ಲಕ್ಷ ಹಾನಿ   

ಮಂಗಳೂರು: ಮಂಗಳವಾರ ರಾತ್ರಿ ಬೀಸಿದ ಭಾರಿ ಗಾಳಿ ಮಳೆಗೆ ಬೆಂಗ್ರೆಯಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ದೋಣಿಯೊಂದು ಸಮುದ್ರದಲ್ಲಿ ಮುಳುಗಿದ್ದು, ರೂ 35 ಲಕ್ಷ ಹಾನಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಮುಳುಗುತಿದ್ದ ದೋಣಿಯಲ್ಲಿದ್ದ ವಿಪಿನ್ ಸಮುದ್ರಕ್ಕೆ ಹಾರಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೋಣಿಯ ಅವಶೇಷಗಳು ಬೊಕ್ಕಪಟ್ಣ ಸಮುದ್ರ ಕಿನಾರೆಗೆ ಬಂದು ಬಿದ್ದಿದೆ.

ಸಮುದ್ರದಲ್ಲಿ ಭಾರಿ ತೂಫಾನಿನ ಹಿನ್ನೆಲೆಯಲ್ಲಿ ಮೇ 27ರಂದೇ ಶೈಲೇಜ್ ಅವರಿಗೆ ಸೇರಿದ ‘ಅಯ್ಯಪ್ಪ’ ದೋಣಿ ಮೀನುಗಾರಿಕೆ ಕೊನೆಗೊಳಿಸಿತ್ತು. ಧಕ್ಕೆಯಲ್ಲಿ ಸ್ಥಳಾವಕಾಶ ಇಲ್ಲದ ಹಿನ್ನೆಲೆಯಲ್ಲಿ  ಬೆಂಗ್ರೆಯಲ್ಲಿ ಲಂಗರು ಹಾಕಿತ್ತು.

ದೋಣಿಯನ್ನು ಗುರುವಾರ ದಡಕ್ಕೆತ್ತಲು ಮಾಲೀಕರು ನಿರ್ಧರಿಸಿದ್ದರಾದರೂ, ಮಂಗಳವಾರ ರಾತ್ರಿಯೇ ಗಾಳಿ ಮಳೆಗೆ ದೋಣಿಯ ಹಗ್ಗ ತುಂಡಾಗಿ ನೀರಿನ ರಭಸಕ್ಕೆ ಸಮುದ್ರಪಾಲಾಯಿತು ಎಂದು ಮೀನುಗಾರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಂಗಳೂರಿನಲ್ಲಿ ಮೂರು ಸಾವಿರಕ್ಕೂ ಅಧಿಕ ದೋಣಿಗಳಿದ್ದು, ಅವುಗಳನ್ನು ಮಳೆಗಾಲದಲ್ಲಿ ಲಂಗರು ಹಾಕಲು ಸ್ಥಳಾವಕಾಶ ಸಾಲದು. ಹಾಗಾಗಿ ಅನೇಕ ದೋಣಿಗಳನ್ನು ಧಕ್ಕೆಯಿಂದ ಹೊರಗಡೆಯೇ ನಿಲ್ಲಿಸಬೇಕಾಗುತ್ತದೆ. ಸೂಕ್ತ ರಕ್ಷಣೆ ಇಲ್ಲದ ಕಾರಣ, ಅವು ಗಾಳಿ ಮಳೆಗೆ ಹಾನಿಗೊಳಗಾಗುತ್ತವೆ. ಪ್ರತಿವರ್ಷ ಕನಿಷ್ಠ  2-3 ದೋಣಿಗಳು ಸಮುದ್ರಪಾಲಾಗುತ್ತಿವೆ. ಈ ಸಮಸ್ಯೆ ಬಗ್ಗೆ ಕಳೆದ 25 ವರ್ಷಗಳಿಂದ ನಿರಂತರವಾಗಿ ಸರ್ಕಾರದ ಗಮನಸೆಳೆದರೂ ಪ್ರಯೋಜನವಾಗಿಲ್ಲ ಎಂದು ಮೀನುಗಾರರೊಬ್ಬರು ಅಳಲು ತೋಡಿಕೊಂಡರು. 

 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.