ADVERTISEMENT

ಭೂಸ್ವಾಧೀನ: ಅಧಿಸೂಚನೆ ಭಾಗಶಃ ರದ್ದು

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

ಬೆಂಗಳೂರು: ಬಳ್ಳಾರಿಯಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗಾಗಿ ಸ್ವಾಧೀನಪಡಿಸಿಕೊಂಡ 950 ಎಕರೆ ಜಮೀನಿನ ಪೈಕಿ ಸುಮಾರು 250 ಎಕರೆ ಜಮೀನಿಗೆ ಸಂಬಂಧಿಸಿದಂತೆ ಹೊರಡಿಸಲಾದ ಅಧಿಸೂಚನೆಯನ್ನು ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.

2009ರ ಮೇ 23ರಂದು ಹೊರಡಿಸಲಾಗಿದ್ದ ಅಂತಿಮ ಅಧಿಸೂಚನೆ ಇದಾಗಿದೆ. ಈ ಪೈಕಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ 78 ರೈತರ ಜಮೀನುಗಳಿಗೆ ಮಾತ್ರ ಹೈಕೋರ್ಟ್ ಆದೇಶ ಅನ್ವಯ ಆಗಲಿದೆ.

`ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದಾಗ ತಮ್ಮ ಜಮೀನನ್ನು ಸ್ವಾಧೀನಪಡಿಸಿಕೊಳ್ಳದಂತೆ ಅರ್ಜಿದಾರರು ಸಲ್ಲಿಸಿರುವ ಆಕ್ಷೇಪಣೆಗಳನ್ನು ಆಲಿಸದೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇದು ನಿಯಮಬಾಹಿರ. ಆದುದರಿಂದ ಕಾನೂನುಬದ್ಧವಾಗಿ ಅರ್ಜಿದಾರರ ಅಹವಾಲು ಆಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಿ~ ಎಂದು ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ವಿಶೇಷ ಭೂಸ್ವಾಧೀನ ಅಧಿಕಾರಿಗೆ ಆದೇಶಿಸಿದ್ದಾರೆ. ಆದುದರಿಂದ, ಹೈಕೋರ್ಟ್ ಮೊರೆ ಹೋಗಿರುವ ರೈತರ 250 ಎಕರೆ ಜಮೀನು ಹಾಗೂ ಅದರ ಸ್ವಾಧೀನದ `ಭವಿಷ್ಯ~ ಈಗ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕೈಯಲ್ಲಿದೆ.

ಅರ್ಜಿದಾರರ ಆರೋಪವೇನು? ಸಿರಿವಾರ, ಚಾಗನೂರು ಹಾಗೂ ತಗ್ಗಿನಬೂದಿಹಾಳು ಬಳಿಯ ಜಮೀನಿನ ವಿವಾದ ಇದಾಗಿದೆ. ಭೂಸ್ವಾಧೀನ ಪ್ರಶ್ನಿಸಿ ಇವರು ಸಲ್ಲಿಸಿದ್ದ ಅರ್ಜಿಯನ್ನು ಬಳ್ಳಾರಿಯ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ  2010ರ ಏಪ್ರಿಲ್ 24ರಂದು ವಜಾಗೊಳಿಸಿತ್ತು. ಇದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

`ಬಳ್ಳಾರಿಯಲ್ಲಿ ಈಗಾಗಲೇ ಎರಡು ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿವೆ. ಒಂದು ನಾಗರಿಕ ವಿಮಾನ ನಿಲ್ದಾಣವಿದ್ದರೆ, ಬಳ್ಳಾರಿಯಿಂದ ಸುಮಾರು 25 ಕಿ.ಮೀ. ದೂರದಲ್ಲಿ `ಜಿಂದಾಲ್ ಸ್ಟೀಲ್ಸ್~ ಒಡೆತನದ ಏರ್‌ಸ್ಟ್ರಿಪ್ ಇದೆ. ನಾಗರಿಕ ವಿಮಾನ ನಿಲ್ದಾಣಕ್ಕೆ ದಿನಂಪ್ರತಿ ಕನಿಷ್ಠ 30 ಪ್ರಯಾಣಿಕರೂ ಬಾರದ ಕಾರಣ ಅದನ್ನು ಮುಚ್ಚಲಾಗಿದೆ. ಪರಿಸ್ಥಿತಿ ಹೀಗಿರುವಾಗ ಇನ್ನೊಂದು ನಿಲ್ದಾಣಕ್ಕೆ ಮುಂದಾಗಿರುವುದು ಉಚಿತವಲ್ಲ. ಗಣಿ ಧಣಿಗಳ ಅನುಕೂಲಕ್ಕೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ~ ಎಂದು ಅವರು ದೂರಿದ್ದರು. 

ಕೃಷಿ ಜಮೀನು ಸ್ವಾಧೀನ: `ಬಳ್ಳಾರಿಯಿಂದ ಸುಮಾರು 30-35 ಕಿ.ಮೀ. ಅಂತರದಲ್ಲಿ ಇರುವ ಪಾಪನಾಯಕನಹಳ್ಳಿ ಬಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬಹಳ ಹಿಂದೆಯೇ ಜಾಗ ಗೊತ್ತು ಮಾಡಲಾಗಿದೆ.

ಆದರೆ ಅದನ್ನು ಬಿಟ್ಟು ಈಗ ಕೃಷಿ ಜಮೀನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಅರೆನೀರಾವರಿ ಯೋಜನೆ ಅಡಿ ತುಂಗಭದ್ರಾ ಆಯಕಟ್ಟು ಪ್ರದೇಶಲ್ಲಿ ಇರುವ ಕೃಷಿ ಜಮೀನು ಇದಾಗಿದೆ. ಇಲ್ಲಿ ಹಲವಾರು ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಇಲ್ಲಿ ನಿಲ್ದಾಣ ನಿರ್ಮಾಣವಾದರೆ ರೈತರು ಬೀದಿ ಪಾಲಾಗಬೇಕಾಗುತ್ತದೆ~ ಎನ್ನುವುದು ಅವರ ಆರೋಪವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.