ADVERTISEMENT

ಭೂ ಕಬಳಿಕೆ ನಿಷೇಧಕ್ಕೆ ಸುಗ್ರೀವಾಜ್ಞೆ....

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 19:30 IST
Last Updated 8 ಸೆಪ್ಟೆಂಬರ್ 2011, 19:30 IST

ಬೆಂಗಳೂರು:  ಸರ್ಕಾರಿ ಜಮೀನುಗಳ ಒತ್ತುವರಿ ತಡೆಯುವ ಸಂಬಂಧ ಕೆಲವು ಬದಲಾವಣೆಗಳೊಂದಿಗೆ ಹೊಸದಾಗಿ ರೂಪಿಸಿರುವ ಕರ್ನಾಟಕ ಭೂ ಕಬಳಿಕೆ ನಿಷೇಧ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.

ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಮಸೂದೆ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಲಾಗಿದ್ದು, ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳುಹಿಸಿಕೊಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಅವರು ಸಂಪುಟದ ತೀರ್ಮಾನಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಭೂ ಕಬಳಿಕೆ ನಿಷೇಧ ಮಸೂದೆಯನ್ನು 2007ರಲ್ಲಿಯೇ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ಇದನ್ನು ರಾಷ್ಟ್ರಪತಿಗಳಿಗೆ ಕಳುಹಿಸಿಕೊಟ್ಟಿದ್ದರು. ಆದರೆ ಇದರಲ್ಲಿ ವಕ್ಫ್ ಮತ್ತು ಮುಜರಾಯಿ ಆಸ್ತಿಗಳನ್ನು ಸೇರಿಸಿಲ್ಲ ಎಂಬ ಕಾರಣಕ್ಕಾಗಿ ರಾಷ್ಟ್ರಪತಿಗಳು ಒಪ್ಪಿಗೆ ನೀಡಿರಲಿಲ್ಲ.

ಅವರ ಸಲಹೆಯಂತೆ ಈಗ ವಕ್ಫ್ ಮತ್ತು ಮುಜರಾಯಿ ಆಸ್ತಿಯನ್ನೂ ಒಳಗೊಂಡಂತೆ ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿ ಭೂ ಕಬಳಿಕೆ ನಿಷೇಧ ಮಸೂದೆ-2011 ಅನ್ನು ರೂಪಿಸಲಾಗಿದೆ. 2007ರ ಮಸೂದೆಯನ್ನು ವಾಪಸ್ ಪಡೆದು, ಹೊಸ ಮಸೂದೆ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಲಾಗುವುದು. ಮುಂಬರುವ ಅಧಿವೇಶನದಲ್ಲಿ ಭೂಕಬಳಿಕೆ ನಿಷೇಧ ಮಸೂದೆಯನ್ನು ಮಂಡಿಸಲಾಗುವುದು ಎಂದರು.

ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶದಿಂದ ಭೂ ಕಬಳಿಕೆ ಮಾಡಿದವರಿಗೆ ಒಂದರಿಂದ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಭೂಕಬಳಿಕೆ ಪ್ರಕರಣಗಳ ತ್ವರಿತ ವಿಚಾರಣೆಗೆ ಪ್ರತಿಯೊಂದು ಜಿಲ್ಲೆಯಲ್ಲಿ ವಿಶೇಷ ನ್ಯಾಯಾಲಯಗಳನ್ನು ರಚಿಸಲಾಗುತ್ತದೆ.

1765 ಉಪನ್ಯಾಸಕರ ನೇಮಕ: ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 1765 ಉಪನ್ಯಾಸಕರ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಬದಲು, ಕೇಂದ್ರೀಕೃತ ದಾಖಲಾತಿ ಘಟಕದಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ರೂಪಿಸಿರುವ ಕರಡು ವಿಶೇಷ ನಿಯಮಗಳಿಗೆ ಸಂಪುಟ ಅನುಮೋದನೆ ನೀಡಿದೆ.

ಒಂದು ಬಾರಿಗೆ ಸೀಮಿತವಾಗಿ ವಿಶೇಷ ನೇಮಕಾತಿ ನಿಯಮಗಳ ಮೂಲಕ ಕಾಲಮಿತಿಯಲ್ಲಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳ ಹುದ್ದೆಗಳು ಇದರಲ್ಲಿ ಸೇರಿವೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ ಎಂದು ಅವರು ತಿಳಿಸಿದರು.

ಭಾಗ್ಯಲಕ್ಷ್ಮಿ ಯೋಜನೆ: ಮಹತ್ವಾಕಾಂಕ್ಷೆಯ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳ ಆಯ್ಕೆಗೆ ಇರುವ ಮಾನದಂಡಗಳಲ್ಲಿ ಬದಲಾವಣೆ ಮಾಡುವುದಕ್ಕೂ ಸಂಪುಟ ಒಪ್ಪಿಗೆ ನೀಡಿದೆ. 2011ರ ಮಾರ್ಚ್ 31ಕ್ಕೂ ಮೊದಲು ಹೆಸರು ನೋಂದಾಯಿಸಿರುವ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ಅಥವಾ ಆದಾಯ ಪ್ರಮಾಣ ಪತ್ರ ಯಾವುದಾದರೂ ಒಂದು ಇದ್ದರೂ ಬಾಂಡ್ ನೀಡಲಾಗುತ್ತದೆ.

ಆದರೆ ಈ ವರ್ಷದ ಏಪ್ರಿಲ್ ಒಂದರ ನಂತರದ ಫಲಾನುಭವಿಗಳು ಆದಾಯ ಪ್ರಮಾಣ ಪತ್ರ ಮತ್ತು ಬಿಪಿಎಲ್ ಕಾರ್ಡ್ ಎರಡನ್ನೂ ಹೊಂದಿರುವುದನ್ನು ಕಡ್ಡಾಯ ಮಾಡಲಾಗಿದೆ.

ಮೇಲ್ದರ್ಜೆಗೆ: ಜರ್ಮನಿಯ ಇಂಟರ್‌ನ್ಯಾಷನಲ್ ಸರ್ವೀಸಸ್‌ನ ತಾಂತ್ರಿಕ ನೆರವಿನೊಂದಿಗೆ ಸರ್ಕಾರಿ ಮತ್ತು ಖಾಸಗಿ ಐಟಿಐಗಳನ್ನು ಉನ್ನತೀಕರಿಸಲು ನಿರ್ಧರಿಸಲಾಗಿದೆ. 1396 ಸರ್ಕಾರಿ ಐಟಿಐಗಳು ಇದರ ನೆರವು ಪಡೆಯಲಿದ್ದು, ತರಬೇತಿ ಕಾರ್ಯವನ್ನು ವಿಸ್ತರಿಸಲಾಗುತ್ತದೆ ಎಂದರು.

ರಾಜ್ಯ ಭದ್ರತಾ ಆಯೋಗ ರಚನೆ, ರಾಜ್ಯ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಪೊಲೀಸ್ ದೂರು ಪ್ರಾಧಿಕಾರಗಳನ್ನು ರಚಿಸಿರುವುದಕ್ಕೆ ಘಟನೋತ್ತರ ಒಪ್ಪಿಗೆ ನೀಡಲಾಗಿದೆ. ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ದೂರು ಸಮಿತಿ ಹಾಗೂ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ದೂರು ಸಮಿತಿಗಳು ಕಾರ್ಯನಿರ್ವಹಿಸುತ್ತಿದ್ದು, ಲಾಕಪ್ ಸಾವು, ಪೊಲೀಸ್ ಅಧಿಕಾರಿಗಳ ಕರ್ತವ್ಯಲೋಪ ಇತ್ಯಾದಿಗಳಿಗೆ ಸಂಬಂಧಿಸಿದ ದೂರುಗಳನ್ನು ಸಮಿತಿಗೆ ನೀಡಬಹುದು.

ಖಾನಾಪುರ ತಾಲ್ಲೂಕಿನಲ್ಲಿ 408 ಎಕರೆ ಭೂಮಿಯನ್ನು ಭಯೋತ್ಪಾದನೆ ನಿಗ್ರಹ ಮತ್ತು ಅಕ್ರಮ ನುಸುಳುವಿಕೆ ತಡೆಗಾಗಿ ಸ್ಥಾಪನೆ ಆಗಲಿರುವ ತರಬೇತಿ ಶಾಲೆಗಾಗಿ ಸಿಆರ್‌ಪಿಎಫ್‌ಗೆ ನೀಡುವ ಬಗ್ಗೆ ಎಚ್ಚರಿಕೆಯಿಂದ ಹೆಜ್ಜೆ ಇಡಲು ಸರ್ಕಾರ ನಿರ್ಧರಿಸಿದೆ. ಇದರ ಪಕ್ಕದಲ್ಲಿಯೇ ಮಹದಾಯಿ ಯೋಜನೆ ಬರುವುದರಿಂದ ಸಾಧಕ-ಬಾಧಕಗಳನ್ನು ನೋಡಿಕೊಂಡು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದರು.

ಕೇಂದ್ರದಿಂದ ಒಂದು ಲಕ್ಷ ಟನ್ ಯೂರಿಯಾ ಹೆಚ್ಚುವರಿಯಾಗಿ ರಾಜ್ಯಕ್ಕೆ ದೊರೆತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದರು.

 ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ರೂ 10 ಲಕ್ಷಕ್ಕಿಂತ ಕಡಿಮೆ ಸಾಲ ಪಡೆದ ಸಣ್ಣ ಮತ್ತು ಅತಿ ಸಣ್ಣ ಸಾಲಗಾರರಿಗೆ ರೂಪಿಸಿರುವ ವಿಶೇಷ ಒಂದಾವರ್ತಿ ತೀರುವಳಿ ಯೋಜನೆ ಬರುವ ಮಾರ್ಚ್ 31ರವರೆಗೂ ವಿಸ್ತರಣೆ.

ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕಟ್ಟಡ ಕಾಮಗಾರಿಗೆ ಹೆಚ್ಚುವರಿಯಾಗಿ ರೂ 11.01 ಕೋಟಿ ನೀಡಲು ಒಪ್ಪಿಗೆ.

ಹಾಸನ ಮತ್ತು ಹೊಳೆನರಸೀಪುರದ ಸರ್ಕಾರಿ ನರ್ಸಿಂಗ್ ಕಾಲೇಜು ಕಟ್ಟಡ ಮತ್ತು ನಾಲ್ಕು ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 10.77 ಕೋಟಿ ರೂಪಾಯಿ ಬಿಡುಗಡೆ.

ತ್ವರಿತ ನೀರಾವರಿ ಯೋಜನೆಯಡಿ ಗುಲ್ಬರ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ತಲಾ ಮೂರು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಒಪ್ಪಿಗೆ. ಗುಲ್ಬರ್ಗ ಜಿಲ್ಲೆಯ ಯೋಜನೆಗಳಿಗೆ ರೂ 34 ಕೋಟಿ ಮತ್ತು ತುಮಕೂರು ಜಿಲ್ಲೆಯ ಯೋಜನೆಗಳಿಗೆ ರೂ 18 ಕೋಟಿ ರೂಪಾಯಿ ವೆಚ್ಚ ಮಾಡಲು ನಿರ್ಧಾರ.

ಸೇಡಂ ತಾಲ್ಲೂಕಿನ ಹಂಗನಹಳ್ಳಿ ಗ್ರಾಮದಲ್ಲಿ ರಾಜಶ್ರೀ ಸಿಮೆಂಟ್ ವರ್ಕ್ಸ್ ಅವರಿಗೆ 25 ಎಕರೆ ಸರ್ಕಾರಿ ಜಮೀನು ಮಾರುಕಟ್ಟೆ ದರದಲ್ಲಿ ಮಂಜೂರು.

ಯಲ್ಲಾಪುರದಲ್ಲಿ ವಿಶ್ವದರ್ಶನ ಎಜುಕೇಷನ್ ಸೊಸೈಟಿಗೆ ಗುತ್ತಿಗೆ ಆಧಾರದ ಮೇಲೆ ನೀಡಿರುವ ಐದು ಎಕರೆ ಭೂಮಿಯನ್ನು ಕಾಯಂ ಆಗಿ ನೀಡಲು ಒಪ್ಪಿಗೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.