ADVERTISEMENT

ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ಸುವರ್ಣ ವಿಧಾನಸೌಧ (ಬೆಳಗಾವಿ): ಕೃಷಿ ಭೂಮಿ ಖರೀದಿಸುವವರಿಗೆ ವಾರ್ಷಿಕ ಆದಾಯ ಮಿತಿ ವಿಧಿಸುವ ಕರ್ನಾಟಕ ಭೂ ಸುಧಾರಣೆ ಕಾಯ್ದೆಯ 79-ಎ ಮತ್ತು 79-ಬಿ ಕಲಮುಗಳನ್ನು ರದ್ದುಪಡಿಸುವ ಪ್ರಶ್ನೆಯೇ ಇಲ್ಲ. ಆದರೆ, ಈ ಕಲಮುಗಳಿಗೆ ತಿದ್ದುಪಡಿ ತರಲು ಸರ್ಕಾರ ಯೋಚಿಸಿದೆ ಎಂದು ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಎಸ್.ಆರ್.ವಿಶ್ವನಾಥ್, ಭೂ ಸುಧಾರಣಾ ಕಾಯ್ದೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆ ವ್ಯಾಪಕ ಚರ್ಚೆಗೆ ದಾರಿಯಾಯಿತು. ಭೂ ಸುಧಾರಣಾ ಕಾಯ್ದೆಯ 79-ಎ ಮತ್ತು 79-ಬಿ ಕಲಂಗಳನ್ನು ರದ್ದು ಮಾಡಬೇಕೆಂಬ ಬೇಡಿಕೆ ನಗರ ಪ್ರದೇಶದ ಶಾಸಕರಿಂದ ಕೇಳಿಬಂತು. ಆದರೆ, ಗ್ರಾಮೀಣ ಭಾಗದ ಹಲವು ಶಾಸಕರು ಅದನ್ನು ಬಲವಾಗಿ ವಿರೋಧಿಸಿದರು.

`ವಾರ್ಷಿಕ ಎರಡು ಲಕ್ಷ ರೂಪಾಯಿಗಿಂತ ಹೆಚ್ಚಿನ ಕೃಷಿಯೇತರ ಆದಾಯ ಹೊಂದಿರುವ ವ್ಯಕ್ತಿಗಳು ಕೃಷಿ ಭೂಮಿ ಖರೀದಿಸುವುದನ್ನು ಈ ಕಲಮುಗಳು ನಿರ್ಬಂಧಿಸುತ್ತಿವೆ. ಹಲವು ವರ್ಷಗಳ ಹಿಂದೆ ಈ ಮಿತಿಯನ್ನು ವಿಧಿಸಲಾಗಿತ್ತು. ನಂತರ ಜನರ ಆದಾಯದಲ್ಲಿ ಹಲವು ಪಟ್ಟು ಹೆಚ್ಚಳವಾಗಿದೆ. ಈ ಕಲಮುಗಳನ್ನು ಉಲ್ಲಂಘಿಸಿ ಭೂಮಿ ಖರೀದಿ ನಡೆಯುತ್ತಲೇ ಇದೆ. ಅದನ್ನು ಬಳಸಿಕೊಂಡು ಕಂದಾಯ ಇಲಾಖೆ ಅಧಿಕಾರಿಗಳು ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ' ಎಂದು ವಿಶ್ವನಾಥ್ ಹೇಳಿದರು.

ಅಧಿಕಾರಿಗಳು ಕಾಯ್ದೆ ಉಲ್ಲಂಘನೆಯ ಕಾರಣವೊಡ್ಡಿ ರೈತರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ಬಳಿಕ ತಹಶೀಲ್ದಾರರು ಮತ್ತು ಉಪ ವಿಭಾಗಾಧಿಕಾರಿಗಳು ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ಅಲ್ಲದೇ ಈಗ ಈ ಕಾಯ್ದೆಯ ಕಾರಣಕ್ಕಾಗಿಯೇ ಕೃಷಿ ಜಮೀನುಗಳಲ್ಲಿ ಅಕ್ರಮವಾಗಿ ಬಡಾವಣೆ ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಕಲಮುಗಳನ್ನು ರದ್ದು ಮಾಡಿದರೆ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂದು ವಾದಿಸಿದರು. 

ಆದರೆ, ಶಾಸಕರ ಬೇಡಿಕೆ ತಿರಸ್ಕರಿಸಿದ ಈಶ್ವರಪ್ಪ, `ಈ ಮಿತಿ ಇರುವ ಕಾರಣಕ್ಕಾಗಿಯೇ ರೈತರ ಬಳಿ ಕೃಷಿ ಜಮೀನು ಉಳಿದುಕೊಂಡಿದೆ. ಇಲ್ಲವಾದರೆ ಅದನ್ನು ಮಾರಾಟ ಮಾಡಿ, ಹಣವನ್ನು ದುಂದುವೆಚ್ಚ ಮಾಡಿ ಕೊನೆಯಲ್ಲಿ ಸಂಕಷ್ಟಕ್ಕೆ ಸಿಲುಕುತ್ತಾರೆ. ರೈತರು ಬೀದಿಗೆ ಬೀಳುವುದನ್ನು ತಡೆಯುವಂತಹ ಸದುದ್ದೇಶದ ಈ ಕಲಮುಗಳನ್ನು ರದ್ದು ಮಾಡಲು ಸಾಧ್ಯವೇ ಇಲ್ಲ' ಎಂದು ಉತ್ತರಿಸಿದರು.

ADVERTISEMENT

ಆಗ, ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ, ಬಿಜೆಪಿಯ ಸತೀಶ್ ರೆಡ್ಡಿ ಮತ್ತಿತರರು ವಿಶ್ವನಾಥ್ ಬೆಂಬಲಕ್ಕೆ ನಿಂತರು. `ಅಧಿಕಾರಿಗಳು ಭ್ರಷ್ಟಾಚಾರ ನಡೆಸಿ ರೈತರನ್ನು ಶೋಷಿಸುವುದನ್ನು ತಪ್ಪಿಸಲು ಈ ಮಿತಿಯನ್ನು ಸಡಿಲಿಸಬೇಕು. ಪೂರ್ಣವಾಗಿ ರದ್ದು ಮಾಡಿ ಎಂದು ನಾನು ಕೇಳುವುದಿಲ್ಲ. ನಗರ ಪ್ರದೇಶಗಳಿಗಾದರೂ ಮಿತಿ ಹೆಚ್ಚಳ ಮಾಡಬೇಕು' ಎಂದು ಕೃಷ್ಣ ಬೈರೇಗೌಡ ಒತ್ತಾಯಿಸಿದರು.

ಆದರೆ, ಕಾಂಗ್ರೆಸ್‌ನ ಡಾ.ಶರಣ ಪ್ರಕಾಶ್ ಪಾಟೀಲ್, ಬಿಜೆಪಿಯ ಕೆ.ಲಕ್ಷ್ಮೀನಾರಾಯಣ ಮತ್ತಿತರರು ಈ ಬೇಡಿಕೆಯನ್ನು ತೀವ್ರವಾಗಿ ವಿರೋಧಿಸಿದರು. `ಈ ಕಲಮುಗಳನ್ನು ರದ್ದು ಮಾಡುವುದರಿಂದ ರಿಯಲ್ ಎಸ್ಟೇಟ್ ಮಾಫಿಯಾದಲ್ಲಿ ಇರುವವರಿಗೆ ಅನುಕೂಲ ಆಗುತ್ತದೆ. ರೈತ ಸಮಸ್ಯೆಯ ಸುಳಿಗೆ ಸಿಲುಕುತ್ತಾನೆ. ಈ ಸದನ ರಿಯಲ್ ಎಸ್ಟೇಟ್ ಮಾಫಿಯಾದ ಹಿತಾಸಕ್ತಿ ಕಾಯಲು ಇಲ್ಲ' ಎಂದು ಶರಣ ಪ್ರಕಾಶ್ ಪಾಟೀಲ್ ವಿರೋಧ ವ್ಯಕ್ತಪಡಿಸಿದರು.

ಪಾಟೀಲರ ಮಾತು ನಗರ ಪ್ರದೇಶದ ಶಾಸಕರ ಕೋಪಕ್ಕೂ ಕಾರಣವಾಯಿತು. ಕೃಷ್ಣ ಬೈರೇಗೌಡ ಮತ್ತು ವಿಶ್ವನಾಥ್, ತಾವು ರಿಯಲ್ ಎಸ್ಟೇಟ್ ಮಾಫಿಯಾ ಪರವಾಗಿ ಮಾತನಾಡುತ್ತಿಲ್ಲ. ಸದನದ ಸದಸ್ಯರ ನಡವಳಿಕೆಯ ಕುರಿತು ಹಗುರವಾಗಿ ಮಾತನಾಡಬಾರದು ಎಂದು ತಿರುಗೇಟು ನೀಡಿದರು.

17,574 ಪ್ರಕರಣ: ಈ ಕಲಮುಗಳನ್ನು ರದ್ದು ಮಾಡುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ ಉಪ ಮುಖ್ಯಮಂತ್ರಿಯವರು, ಭೂ ಸುಧಾರಣಾ ಕಾಯ್ದೆ ಉಲ್ಲಂಘನೆ ಪ್ರಕರಣಗಳ ಮಾಹಿತಿ ನೀಡಿದರು. ಕಲಂ 79-ಎ ಮತ್ತು 79-ಬಿ ಉಲ್ಲಂಘಿಸಿ ಕೃಷಿ ಜಮೀನು ಖರೀದಿಸಿರುವ ಆರೋಪದ ಮೇಲೆ ಈವರೆಗೆ ರಾಜ್ಯದಾದ್ಯಂತ 17,574 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.

12,490 ಪ್ರಕರಣಗಳು ವಿಲೇವಾರಿ ಆಗಿವೆ. 5,490 ಪ್ರಕರಣಗಳಲ್ಲಿ ಭೂ ಸುಧಾರಣಾ ಕಾಯ್ದೆಯ ಉಲ್ಲಂಘನೆ ಆಗಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ 9.316 ಪ್ರಕರಣಗಳು ದಾಖಲಾಗಿದ್ದು, 6,769 ಪ್ರಕರಣಗಳ ವಿಲೇವಾರಿ ಆಗಿದೆ. 319 ಪ್ರಕರಣಗಳಲ್ಲಿ ಉಲ್ಲಂಘನೆ ಆಗಿರುವುದು ಖಚಿತವಾಗಿದೆ. ಇಂತಹ ಪ್ರಕರಣಗಳಲ್ಲಿ ಸರ್ಕಾರ ಜಮೀನನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ವಿವರಿಸಿದರು.

`ರೈತರ ಹಿತಕ್ಕೆ ಧಕ್ಕೆಯಾಗದಂತೆ ಕಲಂ 79-ಎ ಮತ್ತು 79-ಬಿಗೆ ತಿದ್ದಿಪಡಿ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ರೈತರ ಒಡೆತನದಿಂದ ಕೃಷಿ ಜಮೀನು ವರ್ಗಾವಣೆ ಆಗದಂತೆ ಎಚ್ಚರಿಕೆ ವಹಿಸಿ ತಿದ್ದುಪಡಿ ಮಸೂದೆ ರೂಪಿಸಲಾಗುವುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.