ADVERTISEMENT

ಭೂ ಸ್ವಾಧೀನ ಬೇಡ: ದೇವನೂರ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಜೂನ್ 2013, 19:59 IST
Last Updated 2 ಜೂನ್ 2013, 19:59 IST
ಶಿವಮೊಗ್ಗದದಲ್ಲಿ ಭಾನುವಾರ ರೈತ ಸಮಾವೇಶದಲ್ಲಿ ಸಾಹಿತಿ ದೇವನೂರ ಮಹಾದೇವ ಮಾತನಾಡಿದರು. ಕೆ.ಟಿ.ಗಂಗಾಧರ್, ಚುಕ್ಕಿ ನಂಜುಂಡಸ್ವಾಮಿ,  ಕೆ.ಎಸ್. ಪುಟ್ಟಣ್ಣಯ್ಯ, ಪ್ರೊ.ನಟರಾಜ್ ಹುಳಿಯಾರ್ ಉಪಸ್ಥಿತರಿದ್ದರು.
ಶಿವಮೊಗ್ಗದದಲ್ಲಿ ಭಾನುವಾರ ರೈತ ಸಮಾವೇಶದಲ್ಲಿ ಸಾಹಿತಿ ದೇವನೂರ ಮಹಾದೇವ ಮಾತನಾಡಿದರು. ಕೆ.ಟಿ.ಗಂಗಾಧರ್, ಚುಕ್ಕಿ ನಂಜುಂಡಸ್ವಾಮಿ, ಕೆ.ಎಸ್. ಪುಟ್ಟಣ್ಣಯ್ಯ, ಪ್ರೊ.ನಟರಾಜ್ ಹುಳಿಯಾರ್ ಉಪಸ್ಥಿತರಿದ್ದರು.   

ಶಿವಮೊಗ್ಗ: ಭೂಬ್ಯಾಂಕ್ ಹೆಸರಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ರಾಜ್ಯದಲ್ಲಿ ಸಾವಿರಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಮೂಲಕ `ಭೂಮಿ' ಎಂಬ ಚಿನ್ನದ ಮೊಟ್ಟೆ ಇಡುವ ಕೋಳಿಯ ಕತ್ತು ಕತ್ತರಿಸುವ ಕೆಲಸ ನಡೆಯುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಈ ಪ್ರಕ್ರಿಯೆಗೆ ಕೊನೆ ಹಾಡಬೇಕು ಎಂದು ಹಿರಿಯ ಸಾಹಿತಿ ಹಾಗೂ ಕರ್ನಾಟಕ ಸರ್ವೋದಯ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ದೇವನೂರ ಮಹಾದೇವ ಆಗ್ರಹಿಸಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಶಾಖೆ ವತಿಯಿಂದ ಭಾನುವಾರ ನಡೆದ ರೈತರ ಸಮಾವೇಶ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭೂಬ್ಯಾಂಕ್ ಹೆಸರಿನಲ್ಲಿ ಸರ್ಕಾರ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಖಚಿತವಾಗುತ್ತಿದ್ದಂತೆಯೇ ಕೆಲವಡೆ ರೈತರು ಭೂಮಿಯ ಮಣ್ಣನ್ನು ಜೆಸಿಬಿ ಯಂತ್ರದ ಮೂಲಕ ತೆಗೆದು ಮಾರಾಟ ಮಾಡಲು ಮುಂದಾಗಿದ್ದಾರೆ. ಈ ಸನ್ನಿವೇಶ ಬರಗಾಲ ಬಂದಾಗ ಗತಿಗೆಟ್ಟು ಮಕ್ಕಳನ್ನೇ ಮಾರಿದ ದುರಂತವನ್ನು ನೆನಪಿಸುವಂತಿದೆ ಎಂದು ವಿಷಾದಿಸಿದರು.

ಸ್ವಾತಂತ್ರ್ಯ ಬಂದ ನಂತರ ಕರ್ನಾಟಕದಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ 60 ಸಾವಿರ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ, ಎರಡು ವರ್ಷಗಳಲ್ಲಿ ಭೂಬ್ಯಾಂಕ್ ಹೆಸರಿನಲ್ಲಿ 1 ಲಕ್ಷ ಎಕರೆಗೂ ಹೆಚ್ಚಿನ ಕೃಷಿ ಭೂಮಿ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ರೈತರು ಮಾತ್ರವಲ್ಲದೇ ಕೃಷಿ ಉತ್ಪನ್ನಗಳನ್ನು ಉಣ್ಣುವ ಪ್ರತಿಯೊಬ್ಬ ಪ್ರಜೆಯೂ ವಿರೋಧಿಸದೇ ಇದ್ದರೆ ದುರಂತ ಕಾದಿದೆ ಎಂದು ಎಚ್ಚರಿಸಿದರು.

ಜಾಗತೀಕರಣದ ಪ್ರಕ್ರಿಯೆ ವಿರೋಧಿಸದ ಶಾಸಕ ಆಡಳಿತ ಪಕ್ಷದಲ್ಲಿದ್ದರೂ ಒಂದೇ; ವಿರೋಧ ಪಕ್ಷದಲ್ಲಿ ಇದ್ದರೂ ಒಂದೆ. ಏಕೆಂದರೆ, `ಗ್ಯಾಟ್' ಒಪ್ಪಂದ ಪ್ರಧಾನಿಯ ಕಾಲಿಗೆ ಸರಪಳಿ ಕಟ್ಟಿದೆ. ಈ ಸರಪಳಿ ತುಂಡರಿಸುವ ಪರ್ಯಾಯ ರಾಜಕಾರಣಕ್ಕೆ ಸರ್ವೋದಯ ಪಕ್ಷ ಮುಂದಾಗಿದೆ. ಈ ನಿಟ್ಟಿನಲ್ಲಿ ನಮ್ಮ ಪಕ್ಷ ನೆಟ್ಟಿರುವ ಸಸಿಗೆ ಸಮಾಜವಾದಿಗಳು ಮತ್ತು ಕಮ್ಯುನಿಸ್ಟರು ನೀರೆರೆದು ಬೆಳೆಸಬೇಕು ಎಂದರು.

ಅಭಿನಂದನೆ ಸ್ವೀಕರಿಸಿದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, `ಹುಡುಗಾಟದಿಂದ ಮತ ಚಲಾಯಿಸುವ ಪ್ರವೃತ್ತಿ ನಿಲ್ಲುವವರೆಗೂ ರಾಜಕಾರಣವನ್ನು ಶುದ್ಧೀಕರಣಗೊಳಿಸಲಾಗದು. 38 ಕೋಟಿ ರೂಪಾಯಿ ಖರ್ಚು ಮಾಡಿದ ಅಭ್ಯರ್ಥಿ ಎದುರು ನಾನು ಗೆದ್ದಿರುವುದು ಸಮುದಾಯದ ಗೆಲುವೇ ಹೊರತು ನನ್ನ ಗೆಲುವಲ್ಲ' ಎಂದರು. ಲೋಕಾಯುಕ್ತ ಸಂಸ್ಥೆ ಬಲಪಡಿಸುವ ಮೂಲಕ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಜೈಲಿಗೆ ಅಟ್ಟಬೇಕೆಂಬ ಮೊದಲ ಒತ್ತಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಮಂಡಿಸಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.