ADVERTISEMENT

ಭೂ ಹಗರಣ: ಎಚ್‌ಡಿಕೆ ದಂಪತಿ ನಿರಾಳ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 19:30 IST
Last Updated 21 ಅಕ್ಟೋಬರ್ 2011, 19:30 IST
ಭೂ ಹಗರಣ: ಎಚ್‌ಡಿಕೆ ದಂಪತಿ ನಿರಾಳ
ಭೂ ಹಗರಣ: ಎಚ್‌ಡಿಕೆ ದಂಪತಿ ನಿರಾಳ   

ಬೆಂಗಳೂರು: ಜಂತಕಲ್ ಗಣಿ ಕಂಪೆನಿಗೆ ಕಾನೂನುಬಾಹಿರವಾಗಿ ಗಣಿ ಗುತ್ತಿಗೆ ನೀಡಲು ಶಿಫಾರಸು ಮಾಡಿರುವುದು ಮತ್ತು ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸಗಟು ನಿವೇಶನ ಮಂಜೂರು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಪತ್ನಿ, ಶಾಸಕಿ ಅನಿತಾ ಕುಮಾರಸ್ವಾಮಿ ಅವರ ವಿರುದ್ಧ ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ದಾಖಲಾದ ದೂರನ್ನು ಹೈಕೋರ್ಟ್ ಶುಕ್ರವಾರ ರದ್ದು ಮಾಡಿದೆ.

ಈ ದಂಪತಿ ವಿರುದ್ಧ ವಕೀಲ ವಿನೋದ್‌ಕುಮಾರ್ ದಾಖಲು ಮಾಡಿದ್ದ ದೂರನ್ನು ನ್ಯಾಯಮೂರ್ತಿ ವಿ.ಜಗನ್ನಾಥನ್ ರದ್ದು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಈ ದೂರಿನ ಆಧಾರದ ಮೇಲೆ ಲೋಕಾಯುಕ್ತ ಕೋರ್ಟ್ ದಂಪತಿಗೆ ಜಾರಿ ಮಾಡಿದ್ದ ಸಮನ್ಸ್ ಹಾಗೂ ಅದರನ್ವಯ ಅಲ್ಲಿ ನಡೆಯುತ್ತಿರುವ ವಿಚಾರಣೆಗೆ ತೆರೆಬಿದ್ದಿದೆ.

ಇವರ ವಿರುದ್ಧ ವಿನಾಕಾರಣ ಅರ್ಜಿ ಸಲ್ಲಿಸಿರುವ ಕಾರಣ, ವಿನೋದ್‌ಕುಮಾರ್ ಅವರಿಗೆ ನ್ಯಾಯಮೂರ್ತಿಯವರು ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಈ ದಂಡದ ಹಣವನ್ನು ನಾಲ್ಕು ವಾರಗಳಲ್ಲಿ ದಂಪತಿಗೆ ನೀಡುವಂತೆ ಅವರು ನಿರ್ದೇಶಿಸಿದ್ದಾರೆ.  ಅದೇ ರೀತಿ, ಲೋಕಾಯುಕ್ತ ವಿಶೇಷ ಕೋರ್ಟ್ ಎಚ್.ಡಿ.ದೇವೇಗೌಡ ಅವರನ್ನು ಪ್ರತಿವಾದಿಯ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಪ್ರಶ್ನಿಸಿ ವಿನೋದ್‌ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಮೂರ್ತಿಗಳು ವಜಾಗೊಳಿಸಿದ್ದಾರೆ.

ADVERTISEMENT

ದೂರು ರದ್ದು ಏಕೆ?: ವಿನೋದ್‌ಕುಮಾರ್ ಸಲ್ಲಿಸಿರುವ ದೂರನ್ನು ರದ್ದು ಮಾಡಲು ನ್ಯಾಯಮೂರ್ತಿಗಳು ಕೊಟ್ಟಿರುವ ಕಾರಣಗಳು:

`ಯಾವುದೇ ವ್ಯಕ್ತಿ ಮುಖ್ಯಮಂತ್ರಿಯಾಗಿದ್ದ ವೇಳೆ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ದಾಖಲಾದ ದೂರನ್ನು ಕೋರ್ಟ್‌ಗಳು ವಿಚಾರಣೆಗೆ ಅಂಗೀಕರಿಸುವ ಸಂದರ್ಭದಲ್ಲಿ, ಆ ವ್ಯಕ್ತಿ ಮುಖ್ಯಮಂತ್ರಿ ಹುದ್ದೆಯಲ್ಲಿ ಇಲ್ಲದಿದ್ದರೂ ದೂರು ದಾಖಲು ಮಾಡುವ ಮುನ್ನ ರಾಜ್ಯಪಾಲರ ಅನುಮತಿ ಕಡ್ಡಾಯ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ ಕುಮಾರಸ್ವಾಮಿ ವಿರುದ್ಧ ದೂರು ದಾಖಲು ಮಾಡುವ ಮುನ್ನ ರಾಜ್ಯಪಾಲರ ಪೂರ್ವಾನುಮತಿ ಪಡೆದಿಲ್ಲ. ಇದು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಹಾಗೂ ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆ.

`ಜಂತಕಲ್ ಮೈನಿಂಗ್ ಕಂಪೆನಿಗೆ ಗಣಿ ಗುತ್ತಿಗೆ ಸಂಬಂಧಿಸಿದಂತೆ 27 ವರ್ಷಗಳಿಂದ ಯಾವುದೇ ದೂರುಗಳು ಯಾವುದೇ ಮೂಲೆಯಿಂದಲೂ ದಾಖಲು ಆಗಿಲ್ಲ. ಕಾನೂನುಬಾಹಿರ ಕೃತ್ಯ ನಡೆದಿದೆ ಎಂದು ಯಾವುದೇ ವ್ಯಕ್ತಿ ಇನ್ನೂ ಆರೋಪಿಸಿಲ್ಲ. ಈಗ ಇದ್ದಕ್ಕಿದ್ದಂತೆ ದೂರು ದಾಖಲಾಗಿರುವುದು ಸಂದೇಹಕ್ಕೆ ಎಡೆ ಮಾಡಿಕೊಡುತ್ತದೆ.

`ಹಲವಾರು ರಿಟ್ ಅರ್ಜಿಗಳಲ್ಲಿ ಹೈಕೋರ್ಟ್, ಸುಪ್ರೀಂಕೋರ್ಟ್‌ಗಳು ನೀಡಿರುವ ತೀರ್ಪಿನ ಆಧಾರದ ಮೇಲೆ ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸಗಟು ನಿವೇಶನ ಮಂಜೂರು ಮಾಡಲಾಗಿದೆ. ಸಗಟು ನಿವೇಶನ ಮಂಜೂರು ಆಗುವ ಮೊದಲೇ ಅನಿತಾ ಕುಮಾರಸ್ವಾಮಿ ಅವರು ತಮಗೆ ಮಂಜೂರಾದ ಬಿಡಿ ನಿವೇಶನವನ್ನು ಹಿಂದಿರುಗಿಸಿದ್ದಾರೆ. ಅಷ್ಟೇ ಅಲ್ಲದೇ ಈ ಎಲ್ಲ ಪ್ರಕ್ರಿಯೆಗಳು ಕುಮಾರಸ್ವಾಮಿ ಸಿಎಂ ಆಗುವುದಕ್ಕಿಂತ ಮುಂಚೆಯೇ ನಡೆದಿದೆ. ಆದರೆ ದೂರಿನಲ್ಲಿ ಈ ಅಂಶಗಳು ಸ್ಪಷ್ಟಗೊಂಡಿಲ್ಲ.

`ಈ ಎಲ್ಲ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಂಡರೆ ದೇವೇಗೌಡರ ಕುಟುಂಬದ ವಿರುದ್ಧ ರಾಜಕೀಯ ದುರುದ್ದೇಶದಿಂದ ಈ ದೂರು ದಾಖಲು ಮಾಡಲಾಗಿದೆ ಎಂದು ಆರೋಪಿಸಿರುವ ಅರ್ಜಿದಾರರ ವಾದದಲ್ಲಿ ಸತ್ಯಾಂಶ ಇದೆ ಎಂದು ಅನಿಸುತ್ತದೆ. ಇವನ್ನೆಲ್ಲ ಪರಿಗಣನೆಗೆ ತೆಗೆದುಕೊಳ್ಳದೆ ಲೋಕಾಯುಕ್ತ ಕೋರ್ಟ್ ವಿವೇಚನಾರಹಿತವಾಗಿ ಆದೇಶ ಹೊರಡಿಸಿದೆ~ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ನ್ಯಾಯ ಗೆದ್ದಿತು-ಎಚ್‌ಡಿಕೆ
ಬೆಂಗಳೂರು: ತಮ್ಮ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿದ್ದ ಖಾಸಗಿ ದೂರನ್ನು ರದ್ದುಗೊಳಿಸಿ ಹೈಕೋರ್ಟ್ ತೀರ್ಪು ನೀಡಿರುವುದರಿಂದ ಅಂತಿಮವಾಗಿ ನ್ಯಾಯಕ್ಕೆ ಜಯ ದೊರೆತಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಹೈಕೋರ್ಟ್ ತೀರ್ಪು ಪ್ರಕಟವಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, `ನಾನು ಯಾವುದೇ ತಪ್ಪು ಮಾಡಿಲ್ಲ, ಕೆಲವೇ ದಿನಗಳಲ್ಲಿ ಎಲ್ಲ ಆರೋಪಗಳಿಂದ ಮುಕ್ತನಾಗುವೆ ಎಂದು ಮೊದಲೇ ಹೇಳಿದ್ದೆ. ಅದರಂತೆಯೇ ನನ್ನ ವಿರುದ್ಧದ ಪ್ರಕರಣ ರದ್ದುಗೊಂಡಿದ್ದು, ನಾನು ತಪ್ಪು ಮಾಡಿಲ್ಲ ಎಂಬುದು ಸಾಬೀತಾಗಿದೆ~ ಎಂದರು.

`ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ನಾನು ಕಿಂಚಿತ್ತೂ ಅಧಿಕಾರ ದುರ್ಬಳಕೆ ಮಾಡಿಕೊಂಡಿರಲಿಲ್ಲ. ಅದು ನನ್ನ ಆತ್ಮಸಾಕ್ಷಿಗೆ ತಿಳಿದಿತ್ತು. ಕೆಲವರು ನನ್ನ ವಿರುದ್ಧ ನ್ಯಾಯಾಲಯದಲ್ಲಿ ದುರುದ್ದೇಶಪೂರಿತ ದೂರು ದಾಖಲಿಸುವ ಮೂಲಕ ತೇಜೋವಧೆಗೆ ಪ್ರಯತ್ನಿಸಿದ್ದರು. ಅಂತಿಮವಾಗಿ ನ್ಯಾಯಕ್ಕೆ ಜಯ ದೊರೆಯುವ ಮೂಲಕ ಎಲ್ಲ ಆರೋಪಗಳಿಂದಲೂ ಹೊರಬಂದಿರುವೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.